ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜವಾಬ್ದಾರಿ ನಿಭಾಯಿಸುವಲ್ಲಿ ಸಿದ್ದರಾಮಯ್ಯ ವಿಫಲ: ಜೆಡಿಎಸ್‌ನ ವಿಶ್ವನಾಥ್‌ ಟೀಕೆ

Last Updated 22 ಮೇ 2019, 18:27 IST
ಅಕ್ಷರ ಗಾತ್ರ

ಕೋಲಾರ: ‘ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಮ್ಮ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ವಿಶ್ವನಾಥ್‌ ಟೀಕಿಸಿದರು.

ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದು, ಕನಿಷ್ಠ ಸಾಮಾನ್ಯ ಕಾರ್ಯಕ್ರಮ ಜಾರಿಗೆ ಸಿದ್ದರಾಮಯ್ಯ ಕ್ರಮ ಕೈಗೊಳ್ಳದಿರುವುದು ಬೇಸರ ತರಿಸಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಯುಪಿಎ ಆಡಳಿತಾವಧಿಯಲ್ಲಿ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಸಮನ್ವಯ ಸಮಿತಿ ಅಧ್ಯಕ್ಷರಾಗಿ 23 ಪಕ್ಷಗಳನ್ನು ಒಗ್ಗೂಡಿಸಿಕೊಂಡು 10 ವರ್ಷಗಳ ಕಾಲ ಒಳ್ಳೆಯ ಆಡಳಿತ ನೀಡಿದರು. ಆದರೆ, ರಾಜ್ಯದಲ್ಲಿ ಸಿದ್ದರಾಮಯ್ಯ ಅವರಿಗೆ ಅದು ಸಾಧ್ಯವಾಗುತ್ತಿಲ್ಲ. ಕೇವಲ 2 ಪಕ್ಷಗಳ ನಡುವೆ ಸಮನ್ವಯ ಸಾಧಿಸಲು ಅವರಿಗೆ ಆಗುತ್ತಿಲ್ಲ’ ಎಂದು ಕುಟುಕಿದರು.

‘ಸಮನ್ವಯ ಸಮಿತಿಯು ವೈಯಕ್ತಿಕವಲ್ಲ. ಸಮ್ಮಿಶ್ರ ಸರ್ಕಾರದ ರೀತಿ ನೀತಿಯನ್ನು ಸಮಿತಿ ಅಧ್ಯಕ್ಷರು ರೂಪಿಸಬೇಕು. ಸರ್ಕಾರದ ಪಾಲುದಾರ ಪಕ್ಷಗಳ ಅಧ್ಯಕ್ಷರು ಈ ಸಮಿತಿಯಲ್ಲಿ ಇಲ್ಲ. ನಾನು ಸರ್ಕಾರದ ಪಾಲುದಾರ ಪಕ್ಷದ ಅಧ್ಯಕ್ಷನಾಗಿ ಇತಿಮಿತಿಯೊಳಗೆ ಸರ್ಕಾರದ ಜವಾಬ್ದಾರಿಗಳನ್ನು ನೆನಪಿಸುತ್ತಿದ್ದೇನೆ. ನನ್ನ ಮತ್ತು ಸಿದ್ದರಾಮಯ್ಯ ನಡುವೆ ವೈಯಕ್ತಿಕ ದ್ವೇಷವಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಚುನಾವಣೆಯಲ್ಲಿ ಸೋಲು– ಗೆಲುವು ಯಾರ ಕೈಯಲ್ಲೂ ಇಲ್ಲ. ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿ ರಾಜಕೀಯವಾಗಿ ಯಾವುದೇ ಬದಲಾವಣೆಯಾಗಲ್ಲ. ಮೈತ್ರಿ ಸರ್ಕಾರ ಚಿರಾಯು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸಾಕಷ್ಟು ಮಂದಿ ಕಿರುಕುಳ ನೀಡುತ್ತಿದ್ದಾರೆ. ಆದರೆ, ಕಿರುಕುಳ ಸಹಿಸಿಕೊಳ್ಳುವ ಶಕ್ತಿ ಅವರಿಗಿದೆ. ಅವರು 5 ವರ್ಷ ಅಧಿಕಾರಾವಧಿ ಪೂರೈಸುತ್ತಾರೆ’ ಎಂದರು.

‘ದೇವೇಗೌಡರ ಕುಟುಂಬದಲ್ಲಿ ನಾನೂ ಒಬ್ಬ. ಮೈತ್ರಿ ಸರ್ಕಾರದಲ್ಲಿ ನನಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ವೀರಪ್ಪ ಮೊಯಿಲಿ ಮತ್ತು ಎಸ್‌.ಎಂ.ಕೃಷ್ಣ ಸರ್ಕಾರದಲ್ಲಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಮೈತ್ರಿ ಸರ್ಕಾರದಲ್ಲೂ ಸಚಿವ ಸ್ಥಾನ ನೀಡಿದರೆ ಜವಾಬ್ದಾರಿ ನಿಭಾಯಿಸುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT