ಶನಿವಾರ, ನವೆಂಬರ್ 23, 2019
17 °C
ಕೆಟ್ಟ ಕೆಲಸ ಮರೆ ಮಾಚುವುದು ಸರಿಯಲ್ಲ: ಸಂಸದ ಮುನಿಸ್ವಾಮಿ ವಾಗ್ದಾಳಿ

ಸಿದ್ದರಾಮಯ್ಯ ಟಿಪ್ಪು ಇತಿಹಾಸ ಓದಲಿ

Published:
Updated:
Prajavani

ಕೋಲಾರ: ‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲು ಟಿಪ್ಪು ಸುಲ್ತಾನ್‌ ಇತಿಹಾಸ ಓದಿ ಹೇಳಿಕೆ ನೀಡಲಿ’ ಎಂದು ಸಂಸದ ಎಸ್.ಮುನಿಸ್ವಾಮಿ ವಾಗ್ದಾಳಿ ನಡೆಸಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಟಿಪ್ಪು ವಿಚಾರವನ್ನು ಯಾವುದೇ ಸಮುದಾಯದೊಂದಿಗೆ ತಳುಕು ಹಾಕುವುದು ಸರಿಯಲ್ಲ. ಎಲ್ಲಾ ಧರ್ಮಗಳಲ್ಲೂ ಕೆಟ್ಟವರು, ಒಳ್ಳೆಯವರು ಇರುತ್ತಾರೆ. ಮುಸ್ಲಿಂ ಸಮುದಾಯವರು ನಮಗೆ ಅಣ್ಣ ತಮ್ಮಂದಿರಿದ್ದಂತೆ. ನಾವೆಲ್ಲಾ ಒಗ್ಗಟ್ಟಾಗಿದ್ದೇವೆ’ ಎಂದರು.

‘ಟಿಪ್ಪು ಸುಲ್ತಾನ್ ರಾಜ್ಯಕ್ಕಾಗಿ ಏನು ಮಾಡಿದ್ದಾರೆ, ಯಾವ ರೀತಿ ಮತಾಂಧರಾಗಿದ್ದರು, ಮೇಲುಕೋಟೆ ಮತ್ತು ಮಡಿಕೇರಿಯಲ್ಲಿ ಎಷ್ಟು ಹಿಂದೂಗಳನ್ನು ಕೊಲೆ ಮಾಡಿದರು ಎಂಬುದು ಇತಿಹಾಸ ಓದಿದರೆ ಗೊತ್ತಾಗುತ್ತದೆ. ಟಿಪ್ಪುವಿನ ಬಲವಂತದ ಮತಾಂತರ, ಹಿಂದೂಗಳ ಕಗ್ಗೊಲೆ ವಿಚಾರ ಇತಿಹಾಸದಲ್ಲಿ ಇರುವುದನ್ನು ಜನರೇ ತಿಳಿದಿದ್ದಾರೆ. ಮುಸ್ಲಿಂ ಧರ್ಮದಲ್ಲಿ ವ್ಯಕ್ತಿ ಪೂಜೆಗೆ ಅವಕಾಶ ಇಲ್ಲದಿರುವುದನ್ನು ತಿಳಿದು ಧರ್ಮ, ದೇಶದ ಪೂಜೆ ಮಾಡುವುದು ಸೂಕ್ತ’ ಎಂದು ಹೇಳಿದರು.

‘ಟಿಪ್ಪು ಒಳ್ಳೆಯ ಕೆಲಸ ಮಾಡಿದ್ದರೆ ತಿಳಿಸಲಿ. ಅದನ್ನು ಕೆಟ್ಟ ಕೆಲಸ ಮರೆ ಮಾಚುವುದು ಸರಿಯಲ್ಲ. ನಾವು ಸದಾ ಮುಸ್ಲಿಂ ಸಮುದಾಯದೊಂದಿಗೆ ಇರುತ್ತೇವೆ. ಟಿಪ್ಪು ಒಳ್ಳೆಯ ಕೆಲಸ ಮಾಡಿದ್ದರೆ ಜಯಂತಿ ಆಚರಿಸಲು ನಮ್ಮ ವಿರೋಧವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಅಕ್ರಮ ಮದ್ಯ: ‘ಜಿಲ್ಲೆಯ ಮನೆಗಳಲ್ಲಿ ಅಕ್ರಮವಾಗಿ ಮದ್ಯ ಶೇಖರಿಸಿಕೊಂಡು ಮಾರಾಟ ಮಾಡುತ್ತಿರುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಸಾವಿರಾರು ಕುಟುಂಬಗಳು ಬೀದಿ ಪಾಲಾಗುತ್ತಿವೆ. ಸೀರೆ, ಪಡಿತರ ಸೇರಿದಂತೆ ಏನು ಕೊಟ್ಟರೂ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆದಿದೆ. ಈ ಸಂಗತಿಯನ್ನು ಸರ್ಕಾರದ ಗಮನಕ್ಕೆ ತಂದು ಕಡಿವಾಣ ಹಾಕುತ್ತೇವೆ’ ಎಂದು ತಿಳಿಸಿದರು.

‘ಶಾಲೆ ಹಾಗೂ ದೇವಾಲಯಗಳ ಬಳಿ ಇರುವ ಮದ್ಯ ಮಾರಾಟ ಮಳಿಗೆಗಳನ್ನು ತೆರವುಗೊಳಿಸುವಂತೆ ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರಿಗೆ ಸೂಚನೆ ನೀಡುತ್ತೇವೆ’ ಎಂದು ವಿವರಿಸಿದರು.

ದಬ್ಬಾಳಿಕೆ ನಡೆಸಿಲ್ಲ: ಮಾಲೂರು ತಾಲ್ಲೂಕಿನ ಜಗದೇನಹಳ್ಳಿಯ ರೈತರೊಬ್ಬರ ಜಮೀನಿನಲ್ಲಿ ನಿಯಮಬಾಹಿರವಾಗಿ ರಸ್ತೆ ಮಾಡಿಸಿದ ಸಂಬಂಧ ಸಲ್ಲಿಕೆಯಾಗಿರುವ ದೂರಿನ ಬಗ್ಗೆ ಪ್ರತಿಕ್ರಿಯಿಸಿ, ‘ಜಗದೇನಹಳ್ಳಿಯಲ್ಲಿ ಸುಮಾರು 35 ವರ್ಷಗಳಿಂದ ಇದ್ದ ರಸ್ತೆ ಸಮಸ್ಯೆ ಬಗೆಹರಿಸಲು ಮುಂದಾಗಿದ್ದೆ. ರಸ್ತೆಗೆ ಅಡ್ಡವಾಗಿದ್ದ ಹಸುಗಳ ಶೆಡ್, ಮುಳ್ಳು ಗಿಡಗಳನ್ನು ಸ್ವಂತ ಹಣದಲ್ಲಿ ತೆರವು ಮಾಡಿಸಿದೆ. ಆಗ ಅಲ್ಲಿ ಯಾರೂ ಇರಲಿಲ್ಲ. ನಾನು ಯಾರ ಮೇಲೂ ದಬ್ಬಾಳಿಕೆ ನಡೆಸಿಲ್ಲ, ಯಾರಿಗೂ ಬೆದರಿಕೆ ಹಾಕಿಲ್ಲ. ರಾಜಕೀಯ ದುರುದ್ದೇಶಕ್ಕೆ ರೈತನಿಂದ ನನ್ನ ವಿರುದ್ಧ ದೂರು ಕೊಡಿಸಿದ್ದಾರೆ’ ಎಂದರು.

‘ರೈತನಿಗೆ ಬೇರೆಡೆ ಜಾಗ ಕೊಡುವಂತೆ ತಹಶೀಲ್ದಾರ್ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಗ್ರಾಮಸ್ಥರ ಸಮ್ಮುಖದಲ್ಲೇ ಸೂಚಿಸಿದ್ದೇನೆ. ಗ್ರಾಮಕ್ಕೆ ಭೇಟಿ ನೀಡಿದರೆ ವಾಸ್ತವ ಗೊತ್ತಾಗುತ್ತದೆ. ಸದ್ಯ ಆ ಗ್ರಾಮಸ್ಥರು ನೆಮ್ಮದಿಯಾಗಿದ್ದಾರೆ. ಕಾನೂನುಬದ್ಧವಾಗಿ ಜಮೀನು ಕ್ರಯ ಆಗಿದೆ’ ಎಂದು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)