ಗುರುವಾರ , ಸೆಪ್ಟೆಂಬರ್ 23, 2021
24 °C
ಸಚಿವ ಸಂಪುಟ ರಚನೆಯಲ್ಲಿ ಬೋವಿ ಸಮುದಾಯಕ್ಕೆ ಅನ್ಯಾಯ: ಆರೋಪ

ವಿಧಾನಸೌಧಕ್ಕೆ ಮುತ್ತಿಗೆ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೂತನ ಸಂಪುಟ ರಚನೆ ವೇಳೆ ಬೋವಿ ಸಮುದಾಯವನ್ನು ಕಡೆಗಣಿಸಿದ್ದಾರೆ. ಇದನ್ನು ಖಂಡಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ’ ಎಂದು ಬೋವಿ ಜನಾಂಗದ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ರವಿಮಾಕಳಿ ಗುಡುಗಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ ಬೋವಿ ಸಮುದಾಯದ 4 ಮಂದಿ ಶಾಸಕರು ಆಯ್ಕೆಯಾಗಿದ್ದಾರೆ. ಈ ಪೈಕಿ ಯಾರೊಬ್ಬರಿಗೂ ಸಚಿವ ಸ್ಥಾನ ನೀಡದೆ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ವರಿಷ್ಠರು ಬೋವಿ ಸಮುದಾಯದ ಅರವಿಂದ ಲಿಂಬಾವಳಿ ಅವರನ್ನು ಉಪ ಮುಖ್ಯಮಂತ್ರಿ ಮಾಡುವುದಾಗಿ ಹೇಳಿ ಅಂತಿಮ ಕ್ಷಣದಲ್ಲಿ ಮಾತು ತಪ್ಪಿದ್ದಾರೆ. ಸಮುದಾಯಕ್ಕೆ ಆಗಿರುವ ಅವಮಾನ ಖಂಡಿಸಿ ಜನಾಂಗದ 2 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಬೃಹತ್ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಸದ್ಯದಲ್ಲೇ ಹೋರಾಟದ ದಿನಾಂಕ ನಿಗದಿಪಡಿಸಲಾಗುತ್ತಿದೆ’ ಎಂದು ಹೇಳಿದರು.

‘ಅರವಿಂದ ಲಿಂಬಾವಳಿ ಅವರ ಸೂಚನೆಯಂತೆ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಎಸ್.ಮುನಿಸ್ವಾಮಿ ಅವರನ್ನು ಗೆಲ್ಲಿಸಲು ಜಿಲ್ಲೆಯ ಬೋವಿ ಸಮುದಾಯದವರು ಮತ ನೀಡಿದ್ದೇವೆ. ಆದರೆ, ಮುನಿಸ್ವಾಮಿ ಅವರು ಚುನಾವಣೆಯಲ್ಲಿ ಗೆದ್ದ ನಂತರ ಸಮುದಾಯದವರ ಕುಂದು ಕೊರತೆಗೆ ಸ್ಪಂದಿಸುತ್ತಿಲ್ಲ. ಸೌಜನ್ಯಕ್ಕೂ ಸಮುದಾಯದ ಹಿರಿಯರು ಹಾಗೂ ಯುವಕರನ್ನು ಮಾತನಾಡಿಸಿಲ್ಲ’ ಎಂದು ಆರೋಪಿಸಿದರು.

ಸಮುದಾಯಕ್ಕೆ ದ್ರೋಹ: ‘ದೇಶದಲ್ಲಿ ಬೋವಿ ಸಮುದಾಯದ ಜನಸಂಖ್ಯೆ 9 ಕೋಟಿಯಿದೆ. ಕಾಂಗ್ರೆಸ್ ಪಕ್ಷಕ್ಕೆ ಮತ ಬ್ಯಾಂಕ್ ಆಗಿದ್ದ ನಾವು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಿರ್ಣಯ ಕೈಗೊಂಡು ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದೆವು. ಹೀಗಾಗಿ ಬಿಜೆಪಿ ಅಧಿಕಾರಕ್ಕೆ ಬಂದಿತು. ಆದರೆ, ಬಿಜೆಪಿಯು ಬೋವಿ ಸಮುದಾಯಕ್ಕೆ ದ್ರೋಹ ಬಗೆದಿದೆ’ ಎಂದು ಬೋವಿ ಜನಾಂಗದ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಆನಂದಪ್ಪ ಆಕ್ರೋಶ ವ್ಯಕ್ತಪಡಿಸಿದರು.

‘ಬೋವಿ ಅಭಿವೃದ್ಧಿ ನಿಗಮ ಸ್ಥಾಪಿಸಿ 4 ವರ್ಷವಾದರೂ ಈವರೆಗೆ ಅಧ್ಯಕ್ಷರನ್ನು ನೇಮಿಸಿಲ್ಲ. ನಿಗಮಕ್ಕೆ ನಯಾ ಪೈಸೆ ಅನುದಾನ ಕೊಟ್ಟಿಲ್ಲ. ಸಮುದಾಯ ಅಂಬೇಡ್ಕರ್ ನಿಗಮದಲ್ಲೇ ಇದ್ದಿದ್ದರೆ ಸ್ವಲ್ಪವಾದರೂ ಅನುಕೂಲವಾಗುತ್ರ್ತಿತ್ತು. ಸಮುದಾಯವನ್ನು ಆ ನಿಗಮದಿಂದ ಹೊರ ಹಾಕಿ ನಿರ್ಲಕ್ಷಿಸಿದ್ದಾರೆ’ ಎಂದು ಬೋವಿ ಸಮುದಾಯದ ಮುಖಂಡ ಶ್ರೀಕೃಷ್ಣ ಕಿಡಿಕಾರಿದರು.

ಬೋವಿ ಜನಾಂಗದ ಪರಿಷತ್ತಿನ ರಾಷ್ಟ್ರೀಯ ಉಪಾಧ್ಯಕ್ಷ ಮೋಹನ್‌ಕೃಷ್ಣ, ಸಂಘಟನಾ ಕಾರ್ಯದರ್ಶಿ ಚಲಪತಿ, ರಾಜ್ಯ ಘಟಕದ ಕಾರ್ಯದರ್ಶಿ ಶ್ರೀಧರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.