ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುಲ್ಟು’:ಮಾಹಿತಿ ಸೋರಿಕೆಯ ಕಥೆ

Last Updated 28 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಸಾಮಾಜಿಕ ಜಾಲತಾಣಗಳ ಮೂಲಕ ಜನರ ಖಾಸಗಿ ಮಾಹಿತಿ ಕದಿಯುವುದು, ಅದನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳುವುದು ಈಗ ಜಗತ್ತಿನ ಎಲ್ಲೆಡೆ ಚರ್ಚೆಯ ವಿಷಯ. ಆದರೆ, ಈ ವಿಷಯದ ಬಗ್ಗೆ ಎರಡು ವರ್ಷಗಳ ಹಿಂದೆಯೇ ಆಲೋಚನೆ ಮಾಡಿ ಅದಕ್ಕೊಂದು ಸಿನಿಮಾ ರೂಪ ಕೊಟ್ಟಿದ್ದಾರೆ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ. ಈ ಸಿನಿಮಾ ಶುಕ್ರವಾರ (ಮಾ. 30) ತೆರೆಗೆ ಬರುತ್ತಿದೆ.

ಸಿನಿಮಾ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಕರೆದಿತ್ತು. ‘ಇದು ಆನ್‌ಲೈನ್‌ ಕ್ರೈಂ ಕಥೆಯನ್ನು ಹೊಂದಿರುವ ಸಿನಿಮಾ. ಡಿಜಿಟಲ್ ಜಗತ್ತಿನಲ್ಲಿ ಮಾಹಿತಿಗೆ ಬೆಲೆ ಇದೆ. ಆ ಮಾಹಿತಿಗೆ ಮೌಲ್ಯ ಇದೆ. ಅದನ್ನು ಹಣದ ಮೂಲಕ ಅಳೆಯಬಹುದು. ಈ ಅಂಶವನ್ನೇ ಇರಿಸಿಕೊಂಡು ಚಿತ್ರ‌ ಮಾಡಿದ್ದೇವೆ’ ಎಂದರು ಜನಾರ್ದನ್. ‘ಎರಡು ವರ್ಷಗಳ ಹಿಂದೆ ಸಿನಿಮಾದ ಕೆಲಸ ಶುರು‌ ಮಾಡಿದಾಗ ಇದು ಎಷ್ಟು ಜನರಿಗೆ‌ ಇಷ್ಟವಾಗಬಹುದು ಎಂಬ ಪ್ರಶ್ನೆ ಇತ್ತು. ಆದರೆ ಈಗಿನ ಬೆಳವಣಿಗೆಗಳು ನಮ್ಮ ಸಿನಿಮಾ ಬಿಡುಗಡೆಗೆ ಪೂರಕವಾಗಿವೆ’ ಎಂದರು ಅವರು.

ಅಂದಹಾಗೆ, ‘ಲಾಗ್‌ಔಟ್‌’ ಎಂಬ ಇಂಗ್ಲಿಷ್‌ ಪದವನ್ನು ಉಲ್ಟಾ ಮಾಡಿ ‘ಗುಲ್ಟು’ ಎನ್ನುವ ಪದ ಟಂಕಿಸಲಾಗಿದೆ ಎಂದರು ನಿರ್ದೇಶಕರು. ‘ಸೈಬರ್‌ ಕ್ರೈಂ ಬಗ್ಗೆ ಸಿನಿಮಾ ಮಾಡಬೇಕು ಅಂತ ನಮಗೆ ಮೊದಲೇ ಅನಿಸಿತ್ತು. ಸೈಬರ್‌ ಕ್ರೈಂ ವಿಷಯದಲ್ಲಿ ನಿರ್ದಿಷ್ಟವಾಗಿ ಆನ್‌ಲೈನ್‌ ಮೂಲಕ ಮಾಹಿತಿ ಸಂಗ್ರಹಣೆ, ಮಾಹಿತಿ ಸೋರಿಕೆ ಬಗ್ಗೆ ಕಥೆ ಮಾಡಬೇಕು ಎಂದು ತೀರ್ಮಾನಿಸಿ ಮುಂದುವರಿದೆವು’ ಎಂದೂ ಅವರು ಹೇಳಿದರು.

‘ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು ಒಂದೂವರೆ ವರ್ಷದ ಹಿಂದೆ. ಎಲ್ಲರಿಗೂ ಇಷ್ಟವಾಗಬಹುದು ಈ ಸಿನಿಮಾ ಎಂಬ ನಂಬಿಕೆ ಇದೆ. ಜನ ಕೊಡುವ ಹಣಕ್ಕೆ ಮೋಸ ಇಲ್ಲ’ ಎಂದರು ನಿರ್ಮಾಪಕ ಪ್ರಶಾಂತ್ ರೆಡ್ಡಿ. ನಿರ್ಮಾಪಕರು ಈ ಸಿನಿಮಾ ₹ 2 ಕೋಟಿ ಖರ್ಚು ಮಾಡಿದ್ದಾರಂತೆ, 35 ಮಲ್ಟಿಪ್ಲೆಕ್ಸ್‌ಗಳಲ್ಲಿ, ಏಕಪರದೆಯ 15 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆಯಂತೆ.

ನವೀನ್ ಶಂಕರ್ ಈ ಸಿನಿಮಾದ ನಾಯಕ ನಟ. ಸೋನು ಗೌಡ ನಾಯಕಿ. ‘ಸಿನಿಮಾ ಬಿಡುಗಡೆಗೆ ಸೂಕ್ತ ಸಮಯ ಇದು ಎಂದು ಅನಿಸುತ್ತಿದೆ. ಇಂಟರ್ನೆಟ್‌ನಲ್ಲಿ ನಾವೆಷ್ಟು ಸುರಕ್ಷಿತ ಎಂಬುದು ಈ ಸಿನಿಮಾದ ಕಥೆ’ ಎಂದರು ನವೀನ್. ಸೋನು ಅವರು ಈ ಚಿತ್ರದಲ್ಲಿ ಕಂಪ್ಯೂಟರ್‌ ತರಬೇತುಗಾರ್ತಿಯ ಪಾತ್ರ ನಿಭಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT