ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡೆಯಾಜ್ಞೆ ತಂದವರ ವಿರುದ್ಧ ದಂಗೆ ಏಳಿ: ಶಾಸಕ ಶ್ರೀನಿವಾಸಗೌಡ ಗುಡುಗು

ರೇಷ್ಮೆ ಬೆಳೆಗಾರರ ತಾಂತ್ರಿಕ ಸಮಾವೇಶ
Last Updated 24 ಜನವರಿ 2019, 14:33 IST
ಅಕ್ಷರ ಗಾತ್ರ

ಕೋಲಾರ: ‘ಕೆ.ಸಿ ವ್ಯಾಲಿ ಯೋಜನೆ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ತಡೆಯಾಜ್ಞೆ ತಂದಿರುವವರ ವಿರುದ್ಧ ಜಿಲ್ಲೆಯ ಜನ ದಂಗೆ ಏಳಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.

ಜಿಲ್ಲಾ ರೇಷ್ಮೆ ಬೆಳೆಗಾರರ ಅಭಿವೃದ್ಧಿ ಸಂಘವು ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ರೇಷ್ಮೆ ಬೆಳೆಗಾರರ ತಾಂತ್ರಿಕ ಸಮಾವೇಶ ಹಾಗೂ ಷೇರು ನೊಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಸುಪ್ರೀಂ ಕೋರ್ಟ್‌ ಕೆ.ಸಿ ವ್ಯಾಲಿ ಯೋಜನೆಗೆ ತಡೆಯಾಜ್ಞೆ ನೀಡಿರದಿದ್ದರೆ ಈ ವೇಳೆಗೆ 10 ಕೆರೆಗಳು ತುಂಬಿರುತ್ತಿದ್ದವು’ ಎಂದರು.

‘ಯೋಜನೆಯ ನೀರಿನ ಗುಣಮಟ್ಟ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿರುವವರನ್ನು ಯಾವ ರೀತಿ ನೋಡಬೇಕೋ ಗೊತ್ತಾಗುತ್ತಿಲ್ಲ. ಇಂದು ಹಸಿರು ಶಾಲು ಹಾಕಿಕೊಂಡವರೆಲ್ಲಾ ರೈತರಾಗಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೋರ್ಟ್‌ನಲ್ಲಿ ಪ್ರಕರಣ ನಡೆಸುವುದರ ಹಿಂದೆ ರೈತ ವಿರೋಧಿಗಳಿದ್ದಾರೆ. ರೈತರು ಇದನ್ನು ನೋಡಿಕೊಂಡು ಸುಮ್ಮನಿರದೆ ದಂಗೆ ಏಳಬೇಕು. ರೈತರ ಹೊಟ್ಟೆ ಮೇಲೆ ಹೊಡೆಯುವವರನ್ನು ಶತ್ರುಗಳಂತೆ ಪರಿಗಣಿಸಿ ತಕ್ಕ ಶಾಸ್ತಿ ಮಾಡಬೇಕು’ ಎಂದು ಗುಡುಗಿದರು.

‘ಜಿಲ್ಲೆಯ ಕೋಲಾರ, ಬಂಗಾರಪೇಟೆ ಹಾಗೂ ಮಾಲೂರು ತಾಲ್ಲೂಕಿಗೆ ಕುಡಿಯುವ ನೀರು ಒದಗಿಸುವ ₹ 155 ಕೋಟಿ ಅಂದಾಜು ವೆಚ್ಚದ ಯರಗೋಳ್‌ ಯೋಜನೆಗೆ 10 ವರ್ಷದ ಹಿಂದೆ ಚಾಲನೆ ನೀಡಲಾಗಿತ್ತು. ನಂತರ ಶಾಸಕರಾಗಿ ಬಂದ ಮಹಾನುಭಾವರು ಈ ಯೋಜನೆಯತ್ತ ಗಮನ ಹರಿಸಲಿಲ್ಲ. ಸಮಾಜ ಮತ್ತು ರೈತರ ಅಭಿವೃದ್ಧಿಗೆ ಒತ್ತು ನೀಡುವವರನ್ನು ಬೆಂಬಲಿಸಿ’ ಎಂದು ಮನವಿ ಮಾಡಿದರು.

ಸದ್ಬಳಕೆ ಮಾಡಿಕೊಳ್ಳಿ: ‘ಜಿಲ್ಲೆಯಲ್ಲಿ19,005 ರೈತರು 20,838 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆಯುತ್ತಿದ್ದಾರೆ. ನರೇಗಾ ಯೋಜನೆಯಡಿ 4.60 ಲಕ್ಷ ಮಾನವ ದಿನ ಸೃಜಿಸಿ ₹ 12 ಕೋಟಿ ವ್ಯಯಿಸಲಾಗಿದೆ. ಹೊಸದಾಗಿ ಹಿಪ್ಪು ನೇರಳೆ ನಾಟಿಗೆ ಮತ್ತು ಬೆಳೆ ನಿರ್ವಹಣೆಗೆ 3 ವರ್ಷದಲ್ಲಿ ₹ 3 ಲಕ್ಷ ನೀಡಲು ನರೇಗಾದಲ್ಲಿ ಅವಕಾಶವಿದೆ. ಇದನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸಲಹೆ ನೀಡಿದರು.

‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ರೇಷ್ಮೆ ಬೆಳೆಯೇ ಜೀವನಾಧಾರ. ರೇಷ್ಮೆ ಬೆಳೆ ಇಲ್ಲದಿದ್ದರೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿದ್ದರು. ಆಧುನಿಕ ತಂತ್ರಜ್ಞಾನಕ್ಕೆ ಆದ್ಯತೆ ನೀಡಿ ಲಾಭದಾಯಕವಾಗಿ ರೇಷ್ಮೆ ಕೃಷಿ ಮಾಡಬೇಕು. ಬಜೆಟ್ ಪೂರ್ವಭಾವಿ ಸಭೆಯಲ್ಲಿ ಜಿಲ್ಲೆಯ ರೇಷ್ಮೆ ಬೆಳೆಗಾರರು ಮುಂದಿಟ್ಟಿರುವ ಸಮಸ್ಯೆ ಮತ್ತು ಬೇಡಿಕೆಗಳಿಗೆ ಬಜೆಟ್‌ನಲ್ಲಿ ಅನುಕೂಲ ಆಗುವ ನಿರೀಕ್ಷೆಯಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೆಚ್ಚಿನ ಬೇಡಿಕೆಯಿಲ್ಲ: ‘ಮಿಶ್ರ ತಳಿ ಗೂಡಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿಲ್ಲ. ರೈತರು ಮಿಶ್ರ ತಳಿ ಗೂಡನ್ನೇ ಬೆಳೆಯುತ್ತಿದ್ದರೆ ಬೆಲೆ ಕುಸಿತದ ಕಾರಣಕ್ಕೆ ಟೊಮೆಟೊವನ್ನು ರಸ್ತೆಗೆ ಸುರಿಯುವಂತೆ ಭವಿಷ್ಯದಲ್ಲಿ ಈ ಗೂಡನ್ನೂ ಎಸೆಯಬೇಕಾಗುತ್ತದೆ’ ಎಂದು ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿ ಮೋರಿಸನ್ ಹೇಳಿದರು.

‘ಹಿಪ್ಪುನೇರಳೆಯು ಬಹುವಾರ್ಷಿಕ ಬೆಳೆಯಾಗಿದೆ. ತೋಟ ನಿರ್ವಹಣೆ, ಸೋಂಕು ನಿವಾರಣೆ ಮತ್ತು ಉತ್ತಮ ಚಾಕಿ ಕೇಂದ್ರದಿಂದ ಹುಳು ತಂದು ಸಾಕಿದರೆ ದ್ವಿತಳಿಯಲ್ಲಿ ಉತ್ತಮ ಇಳುವರಿ ಪಡೆಯಬಹುದು. ಪೋಷಕಾಂಶಗಳ ನಿರ್ವಹಣೆಯಲ್ಲಿ ಮಣ್ಣು ಪರೀಕ್ಷೆ ಪ್ರಮುಖ ಪಾತ್ರ ವಹಿಸುತ್ತದೆ. ಮಣ್ಣಿನ ಫಲವತ್ತತೆ ಕಾಪಾಡಲು ಆಗಾಗ್ಗೆ ಮಣ್ಣು ಪರೀಕ್ಷೆ ಮಾಡಿಸಬೇಕು’ ಎಂದು ಸಲಹೆ ನೀಡಿದರು.

‘ಮರ ಪದ್ಧತಿಯಲ್ಲಿ ಹಿಪ್ಪುನೇರಳೆ ಬೆಳೆಯುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಸೊಪ್ಪು ಸಿಗುತ್ತಿಲ್ಲ. ಕನಿಷ್ಠ ಎರಡು ಮರದಲ್ಲಿ 1 ಮೊಟ್ಟೆ ಮೇಯಿಸಲು ಸಾಧ್ಯವಾದರೆ ರೇಷ್ಮೆ ಕೃಷಿ ಲಾಭದಾಯಕವಾಗುತ್ತದೆ. ರೈತರು ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು’ ಎಂದು ವಿಜ್ಞಾನಿ ಎಚ್.ತಿಮ್ಮಾರೆಡ್ಡಿ ಕಿವಿಮಾತು ಹೇಳಿದರು.

ಬೆಳೆಗಾರರಿಗೆ ಸನ್ಮಾನ: ಪ್ರಗತಿಪರ ರೇಷ್ಮೆ ಬೆಳೆಗಾರರಾದ ವೇಮಗಲ್‌ ಗ್ರಾಮದ ಸೀತಪ್ಪ, ಬಂಗಾರಪೇಟೆಯ ರಾಮಚಂದ್ರ, ಕರಿಪಲ್ಲಿಯ ರಾಮಕೃಷ್ಣ, ಮಾಲೂರು ತಾಲ್ಲೂಕು ದಾಸರಹಳ್ಳಿಯ ಶಾಮಣ್ಣ, ಎಚ್.ಮುರುಳಿ, ನೂಲು ಬಿಚ್ಚಾಣಿಕೆದಾರರಾದ ಅನ್ಸರ್, ನಿಸಾರ್ ಅಹಮ್ಮದ್‌ ಅವರನ್ನು ಸನ್ಮಾನಿಸಲಾಯಿತು.

ರೇಷ್ಮೆ ಇಲಾಖೆ ಜಂಟಿ ನಿರ್ದೇಶಕ ಎಸ್.ವಿ.ಕುಮಾರ್, ಉಪ ನಿರ್ದೇಶಕ ಎಂ.ಕೆ.ಪ್ರಭಾಕರ್, ಜಿಲ್ಲಾ ರೇಷ್ಮೆ ಬೆಳೆಗಾರರ ಅಭಿವೃದ್ಧಿ ಸಂಘದ ಅಧ್ಯಕ್ಷ ಸಿ.ವಿ.ನಾರಾಣಸ್ವಾಮಿ, ಉಪಾಧ್ಯಕ್ಷ ಎನ್.ಗೋಪಾಲಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎಂ.ಶಂಕರೇಗೌಡ, ಸಂಘಟನಾ ಕಾರ್ಯದರ್ಶಿ ವೈ.ಶ್ರೀನಿವಾಸ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT