ರೇಷ್ಮೆ ಗೂಡು ಬೆಲೆ ಕುಸಿತ ತಾತ್ಕಾಲಿಕ

7
ರೈತರು ಧೃತಿಗೆಡಬಾರದು: ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್‌ ಸಲಹೆ

ರೇಷ್ಮೆ ಗೂಡು ಬೆಲೆ ಕುಸಿತ ತಾತ್ಕಾಲಿಕ

Published:
Updated:
ರೇಷ್ಮೆ ಇಲಾಖೆಯು ಕೋಲಾರ ತಾಲ್ಲೂಕಿನ ನೆರ್ನಹಳ್ಳಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ದ್ವಿತಳಿ ರೇಷ್ಮೆ ಉತ್ಪಾದನೆಯಲ್ಲಿ ತಾಂತ್ರಿಕತೆ ಅಳವಡಿಕೆ ಕುರಿತು ರೈತರಿಗೆ ಮಾಹಿತಿ ನೀಡಿದರು.

ಕೋಲಾರ: ‘ರೈತರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ದ್ವಿತಳಿ ರೇಷ್ಮೆ ಗೂಡು ಉತ್ಪಾದನೆ ಮಾಡಿದರೆ ಉತ್ತಮ ಇಳುವರಿ ಜತೆಗೆ ಆರ್ಥಿಕವಾಗಿ ಸಬಲರಾಗಬಹುದು’ ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್‌ ಅಭಿಪ್ರಾಯಪಟ್ಟರು.

ದ್ವಿತಳಿ ರೇಷ್ಮೆ ಉತ್ಪಾದನೆಯಲ್ಲಿ ತಾಂತ್ರಿಕತೆ ಅಳವಡಿಕೆ ಕುರಿತು ರೇಷ್ಮೆ ಇಲಾಖೆಯು ತಾಲ್ಲೂಕಿನ ನೆರ್ನಹಳ್ಳಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಹಾಗೂ ವಿಚಾರ ಸಂಕಿರಣದಲ್ಲಿ ಮಾತನಾಡಿ, ‘ರೇಷ್ಮೆ ಉತ್ಪಾದನೆಯಲ್ಲಿ ದೇಶವು ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ. ಚೀನಾ ಮೊದಲ ಸ್ಥಾನದಲ್ಲಿದೆ’ ಎಂದರು.

‘ಚೀನಾ ರೇಷ್ಮೆ ಆಮದಿನಿಂದ ದೇಶದ ರೇಷ್ಮೆ ಬೆಳೆಗಾರರು ಹಾಗೂ ನೂಲು ಬಿಚ್ಚಾಣಿಕೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೂಲು ಬಿಚ್ಚಾಣಿಕೆದಾರರು ದ್ವಿತಳಿ ರೇಷ್ಮೆ ಬೇಕೆಂದು ಬಯಸುತ್ತಾರೆ. ರೈತರು ದ್ವಿತಳಿ ರೇಷ್ಮೆ ಹುಳು ಸಾಕಾಣಿಕೆ ಮಾಡುವ ಮೂಲಕ ನೂಲು ಬಿಚ್ಚಾಣಿಕೆದಾರರ ಬೇಡಿಕೆ ಈಡೇರಿಸಬೇಕು. ಇದರಿಂದ ರೈತರು ಹೆಚ್ಚಿನ ಹಣ ಗಳಿಸಬಹುದು’ ಎಂದು ಕಿವಿಮಾತು ಹೇಳಿದರು.

‘ಹಿಪ್ಪು ನೇರಳೆ ಮತ್ತು ರೇಷ್ಮೆ ಹುಳು ತಳಿಗಳನ್ನು ಕ್ಷೇತ್ರ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಹಾಗೂ ರೇಷ್ಮೆ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ, ಆವಿಷ್ಕಾರಗಳ ಅಳವಡಿಕೆಗೆ ಇಲಾಖೆಯು ರೈತರಿಂದ ರೈತರಿಗೆ ತರಬೇತಿ ಕೊಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ರೈತರು ಇದರ ಪ್ರಯೋಜನ ಪಡೆಯಬೇಕು’ ಎಂದು ಸಲಹೆ ನೀಡಿದರು.

ಧೃತಿಗೆಡಬಾರದು: ‘ಜಿಲ್ಲೆಯಲ್ಲಿ ರೇಷ್ಮೆ ಕೃಷಿಗೆ ಉತ್ತಮ ಭವಿಷ್ಯವಿದೆ. ಬೆಲೆ ಕುಸಿತ ತಾತ್ಕಾಲಿಕ. ರೈತರು ಇದಕ್ಕೆ ಧೃತಿಗೆಡಬಾರದು. ಅಧಿಕ ಇಳುವರಿ, ಹಿಪ್ಪು ನೇರಳೆ ಮತ್ತು ದ್ವಿತಳಿ, ಹೈಬ್ರೀಡ್‌ ರೇಷ್ಮೆ ಹುಳುವಿನ ತಳಿಗಳನ್ನು ಬಳಸಿಕೊಂಡು ಗುಣಮಟ್ಟದ ರೇಷ್ಮೆಗೂಡು ಉತ್ಪಾದಿಸಬೇಕು’ ಎಂದು ತಿಳಿಸಿದರು.

‘ರೇಷ್ಮೆ ಉತ್ಪಾದನೆಯಲ್ಲಿ ಪಾರುಪತ್ಯ ಸಾಧಿಸಿದ್ದ ಚೀನಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ರೇಷ್ಮೆ ಉತ್ಪಾದನೆ ಕುಂಠಿತಗೊಳ್ಳುತ್ತಿದೆ. ಭವಿಷ್ಯದಲ್ಲಿ ಭಾರತದ ರೇಷ್ಮೆಗೆ ಬೇಡಿಕೆ ಹೆಚ್ಚಲಿದೆ. ಭಾರತದಲ್ಲಿ 3ಎ ಮತ್ತು 4ಎ ಗುಣಮಟ್ಟದ ಉತ್ಕೃಷ್ಟ ರೇಷ್ಮೆ ಉತ್ಪಾದಿಸಲಾಗುತ್ತಿದೆ. ಇದೇ ರೀತಿ ಗುಣಮಟ್ಟದ ರೇಷ್ಮೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಿದರೆ ಚೀನಾ ರೇಷ್ಮೆ ಆಮದನ್ನು ಸಂಪೂರ್ಣವಾಗಿ ನಿಲ್ಲಿಸಬಹುದು’ ಎಂದರು.

ಸುಣ್ಣಕಟ್ಟು ರೋಗ, ಎಲೆ ಸುರಳಿ ರೋಗ ನಿಯಂತ್ರಣ ಕ್ರಮಗಳು, ದ್ವಿತಳಿಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಅನುಸರಿಸಬೇಕಾದ ಕ್ರಮಗಳು, ಮಣ್ಣು ಪರೀಕ್ಷೆಗೆ ಮಾದರಿ ಸಂಗ್ರಹಣೆ, ನರೇಗಾ ಮತ್ತು ಕೃಷಿ ಭಾಗ್ಯ ಯೋಜನೆ ಬಗ್ಗೆ, ರೇಷ್ಮೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.

ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿ ಮೋರಿಸನ್, ರೇಷ್ಮೆ ವಿಸ್ತರಣಾಧಿಕಾರಿಗಳಾದ ಎಸ್.ಪಿ.ಜಯಶಂಕರ್, ಶಶಿಧರ್, ನೂರೂಲ್ಲಾ, ನೆರ್ನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಯಶೋದಾ, ರೇಷ್ಮೆ ಪ್ರವರ್ತಕ ಎನ್.ವಾಸುದೇವ, ಜಿಲ್ಲಾ ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ವಿ.ನಾರಾಯಣಸ್ವಾಮಿ, ಮಾಜಿ ಕಾರ್ಯದರ್ಶಿ ಸಿ.ಎಲ್.ನಾಗರಾಜ್, ಪ್ರಗತಿಪರ ರೇಷ್ಮೆ ಬೆಳೆಗಾರರು ಪಾಲ್ಗೊಂಡಿದ್ದರು.

ಚೀನಾ ರೇಷ್ಮೆ ಅಮದು ತಪ್ಪಿಸಲು ದೇಶದ ರೈತರು ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆ ಉತ್ಪಾದನೆ ಮಾಡಬೇಕು. ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಗಳಿಸುವ ಪ್ರಯತ್ನ ಮಾಡಬೇಕು. ಜತೆಗೆ ರೇಷ್ಮೆ ಗೂಡಿನ ಗುಣಮಟ್ಟಕ್ಕೆ ಹೆಚ್ಚು ಒತ್ತು ಕೊಡಬೇಕು.
–ಮಂಜುನಾಥ್‌, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !