ಶುಕ್ರವಾರ, ಸೆಪ್ಟೆಂಬರ್ 20, 2019
21 °C

ಸರಳವಾಗಿ ಜಯಂತಿ ಆಚರಣೆ

Published:
Updated:
Prajavani

ಕೋಲಾರ: ‘ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವುದರಿಂದ ಬ್ರಹ್ಮರ್ಷಿ ನಾರಾಯಣ ಗುರು ಜಯಂತಿ ಹಾಗೂ ವಿಶ್ವಕರ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ ತಿಳಿಸಿದರು.

ಬ್ರಹ್ಮರ್ಷಿ ನಾರಾಯಣ ಗುರು ಜಯಂತಿ ಹಾಗೂ ವಿಶ್ವಕರ್ಮ ಜಯಂತಿ ಸಂಬಂಧ ಇಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಪ್ರವಾಹ ಪರಿಸ್ಥಿತಿಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋಟ್ಯಂತರ ರೂಪಾಯಿ ಬೆಳೆ ಹಾನಿಯಾಗಿದೆ. ಮನೆ ಹಾಗೂ ಜಾನುವಾರು ಕೊಚ್ಚಿ ಹೋಗಿವೆ’ ಎಂದರು.

‘ನೆರೆ ಸಂತ್ರಸ್ತರು ಸೂರು ಹಾಗೂ ಆಹಾರಕ್ಕೆ ಕಷ್ಟಪಡುತ್ತಿದ್ದಾರೆ. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾಮಗಾರಿ ನಡೆಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಹೀಗಾಗಿ ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ಎಲ್ಲಾ ಜಯಂತಿಗಳನ್ನು ಸರಳವಾಗಿ ಆಚರಿಸಲಾಗುತ್ತಿದೆ. ಜಯಂತಿಗಳ ಆಚರಣೆಗೆ ಮೀಸಲಾದ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುವುದು’ ಎಂದು ಹೇಳಿದರು.

‘ಜಿಲ್ಲಾಡಳಿತ ಭವನದಲ್ಲಿ ಸೆ.13ರಂದು ಬ್ರಹ್ಮರ್ಷಿ ನಾರಾಯಣ ಗುರು ಜಯಂತಿ ಹಾಗೂ ಸೆ.17ರಂದು ವಿಶ್ವಕರ್ಮ ಜಯಂತಿ ಆಚರಿಸಲಾಗುವುದು. ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು’ ಎಂದು ಕೋರಿದರು.

ಒಪ್ಪಿಗೆಯಿದೆ: ‘ಜಿಲ್ಲೆಯಲ್ಲಿ ವಿಶ್ವಕರ್ಮ ಸಮುದಾಯದ ಜನಸಂಖ್ಯೆ ಸುಮಾರು 60 ಸಾವಿರವಿದೆ. ಜನಾಂಗದವರು ಪಂಚ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರ 2014ರಿಂದ ಅಧಿಕೃತವಾಗಿ ವಿಶ್ವಕರ್ಮ ಜಯಂತಿ ಆಚರಿಸುತ್ತಿದೆ. ಈ ಬಾರಿ ಸರಳವಾಗಿ ಜಯಂತಿ ಆಚರಿಸಲು ಸಮುದಾಯದ ಒಪ್ಪಿಗೆಯಿದೆ. ಜಿಲ್ಲೆಯ ಮಾಲೂರು ತಾಲ್ಲೂಕಿನ ಶಿವಾರ ಪಟ್ಟಣದಲ್ಲಿರುವ ಶಿಲ್ಪಿಗಳಿಗೆ ಜಿಲ್ಲಾಡಳಿತ ನೆರವು ನೀಡಬೇಕು’ ಎಂದು ವಿಶ್ವಕರ್ಮ ಸಮುದಾಯದ ಮುಖಂಡ ವಿಷ್ಣು ಮನವಿ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್‌, ವಿವಿಧ ಸಮುದಾಯಗಳ ಮುಖಂಡರು, ಅಧಿಕಾರಿಗಳು ಹಾಜರಿದ್ದರು.

Post Comments (+)