ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಠ ರೋಗ ಮುಕ್ತ ಜಿಲ್ಲೆಗೆ ಪಣ ತೊಡಿ

ಅಧಿಕಾರಿಗಳಿಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಜಯ್‌ ಕಿವಿಮಾತು
Last Updated 30 ಜನವರಿ 2019, 16:21 IST
ಅಕ್ಷರ ಗಾತ್ರ

ಕೋಲಾರ: ‘ಕುಷ್ಠ ರೋಗ ಮುಕ್ತ ಜಿಲ್ಲೆ ನಿರ್ಮಾಣಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಪಣ ತೊಡಿ’ ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ.ವಿಜಯ್‌ ಕಿವಿಮಾತು ಹೇಳಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ಪರ್ಶ್ ಕುಷ್ಠ ರೋಗ ಅರಿವು ಆಂದೋಲನ ಉದ್ಘಾಟಿಸಿ ಮಾತನಾಡಿ, ‘ಕುಷ್ಠ ರೋಗಕ್ಕೆ ಸಕಾಲಕ್ಕೆ ಚಿಕಿತ್ಸೆ ಪಡೆದರೆ ಕಾಯಿಲೆ ವಾಸಿಯಾಗುತ್ತದೆ. ಈ ಬಗ್ಗೆ ವ್ಯಾಪಕ ಪ್ರಚಾರ ನಡೆಸಬೇಕು’ ಎಂದರು.

‘ಸುಮಾರು 15 ದಿನ ಕುಷ್ಠ ರೋಗ ಅರಿವು ಆಂದೋಲನ ನಡೆಯಲಿದ್ದು, ಈ ಅವಧಿಯಲ್ಲಿ ರೋಗದ ಬಗ್ಗೆ ಜಾಗೃತಿ ಮೂಡಿಸಬೇಕು. 2025ರ ವೇಳೆಗೆ ಕುಷ್ಠ ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಗುರಿಯಿದೆ. ಈ ಅವಧಿಗೂ ಮುನ್ನವೇ ಗುರಿ ಸಾಧಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಕಿವಿಮಾತು ಹೇಳಿದರು.

‘ಕುಷ್ಠ ರೋಗವು ಮೈಕೋ ಬ್ಯಾಕ್ಟೀರಿಯಂ ಲೆಪ್ರೆ ಎಂಬ ಸೂಕ್ಷ್ಮ ರೋಗಾಣುವಿನಿಂದ ಬರುತ್ತದೆ. ಕುಷ್ಠ ರೋಗ ಲಕ್ಷಣ ಕಾಣಿಸಿಕೊಂಡರೆ ರೋಗಗಳು ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಬಹುವಿಧದ ಔಷಧ ಚಿಕಿತ್ಸೆಯಿಂದ ರೋಗ ಗುಣಪಡಿಸಬಹುದು. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಬಹುವಿಧದ ಔಷಧ ಚಿಕಿತ್ಸೆ ನೀಡಲಾಗುತ್ತದೆ. ರೋಗದ ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದರೆ ಅಂಗವೈಕಲ್ಯತೆ ತಡೆಗಟ್ಟಬಹುದು’ ಎಂದು ವಿವರಿಸಿದರು.

‘ದೇಹದ ಮೇಲೆ ಯಾವುದೇ ಸ್ಪರ್ಶ ಜ್ಞಾನವಿಲ್ಲದೆ ತಿಳಿ ಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಗಳು ಕಾಣಿಸಿಕೊಳ್ಳುವುದು, ಕೈ ಕಾಲುಗಳು ಜೋಮು ಹಿಡಿದು ಸ್ಪರ್ಶ ಜ್ಞಾನ ಇಲ್ಲದಿರುವುದು, ಮುಖ ಮತ್ತು ಕಿವಿಯ ಸುತ್ತ ಗಂಟು ಕಾಣಿಸಿಕೊಳ್ಳುವುದು, ಎಣ್ಣೆ ಹಚ್ಚಿದಂತೆ ಹೊಳೆಯುವ ಚರ್ಮ, ಕತ್ತಿನ ಪಕ್ಕ, ಮೊಣಕೈ ಹಾಗೂ ಮೊಣ ಕಾಲುಗಳ ಹಿಂಭಾಗದಲ್ಲಿ ನರಗಳ ಊತ ಮತ್ತು ನೋವು ಕಾಣಿಸಿಕೊಳ್ಳುವುದು ಈ ರೋಗದ ಪ್ರಮುಖ ಲಕ್ಷಣಗಳು’ ಎಂದು ಮಾಹಿತಿ ನೀಡಿದರು.

ಜಾಗೃತಿ ಮೂಡಿಸಿ: ‘ಕುಷ್ಠ ರೋಗವನ್ನು ಭಯಾನಕ ರೋಗವೆಂದು ಬಿಂಬಿಸಲಾಗಿದೆ. ಅಲ್ಲದೇ, ಕುಷ್ಠ ರೋಗಿಗಳನ್ನು ಕೀಳಾಗಿ ಕಾಣುವ ವ್ಯವಸ್ಥೆಯಿದೆ. ಈ ಪರಿಸ್ಥಿತಿ ಬದಲಿಸುವ ನಿಟ್ಟಿನಲ್ಲಿ ಜನರಿಗೆ ಜಾಗೃತಿ ಮೂಡಿಸಬೇಕಿದೆ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್ ಅಭಿಪ್ರಾಯಪಟ್ಟರು.

‘ಕುಷ್ಠ ರೋಗ ನಿರ್ಮೂಲನೆಗಾಗಿ ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ರೋಗಪೀಡಿತರಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡಬೇಕು’ ಎಂದು ಹೇಳಿದರು.

34 ಪ್ರಕರಣ ಪತ್ತೆ: ‘ಜಿಲ್ಲೆಯಲ್ಲಿ 2018–19ನೇ ಸಾಲಿನಲ್ಲಿ 34 ಕುಷ್ಠ ರೋಗ ಪ್ರಕರಣಗಳು ಪತ್ತೆಯಾಗಿವೆ. ಶ್ರೀನಿವಾಸಪುರ ತಾಲ್ಲೂಕಿನಲ್ಲಿ 10, ಕೋಲಾರ 7, ಬಂಗಾರಪೇಟೆ 6, ಮುಳಬಾಗಿಲು 6, ಕೆಜಿಎಫ್‌ 1 ಹಾಗೂ ಮಾಲೂರು ತಾಲ್ಲೂಕಿನಲ್ಲಿ 4 ಕುಷ್ಠ ರೋಗ ಪ್ರಕರಣ ಪತ್ತೆಯಾಗಿವೆ. ಈ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ’ ಎಂದು ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿ ಡಾ.ಎನ್.ಸಿ.ನಾರಾಯಣಸ್ವಾಮಿ ತಿಳಿಸಿದರು.

ಕುಷ್ಠ ರೋಗದ ಮಾಹಿತಿಯುಳ್ಳ ಕರಪತ್ರ ಬಿಡುಗಡೆ ಮಾಡಲಾಯಿತು. ಜತೆಗೆ ಕುಷ್ಠ ರೋಗ ನಿರ್ಮೂಲನೆಯ ಪ್ರತಿಜ್ಞಾವಿಧಿ ಭೋದಿಸಲಾಯಿತು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುರಾಜ್‌ ಜಿ.ಶಿರೋಳ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್.ವಿಜಯ್‌ಕುಮಾರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT