ದೇಶದಲ್ಲಿ ಜೀತ ಪದ್ಧತಿ ಜೀವಂತ

ಬುಧವಾರ, ಮಾರ್ಚ್ 20, 2019
25 °C
ಸಂವಾದದಲ್ಲಿ ‘ಮುಕ್ತಿ’ ಸ್ವಯಂ ಸೇವಾ ಸಂಸ್ಥೆ ಮುಖ್ಯಸ್ಥೆ ಪ್ರತಿಮಾ ಕಳವಳ

ದೇಶದಲ್ಲಿ ಜೀತ ಪದ್ಧತಿ ಜೀವಂತ

Published:
Updated:
Prajavani

ಕೋಲಾರ: ‘ಕೇಂದ್ರ ಸರ್ಕಾರ ಜೀತ ವಿಮುಕ್ತಿಗೆ 1976ರಲ್ಲೇ ಕಾನೂನು ಜಾರಿಗೆ ತಂದಿದ್ದರೂ ಅದು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಇದರಿಂದ ದೇಶದಲ್ಲಿ ಜೀತ ಪದ್ಧತಿ ಜೀವಂತವಾಗಿದೆ’ ಎಂದು ಬೆಂಗಳೂರಿನ ‘ಮುಕ್ತಿ’ ಸ್ವಯಂ ಸೇವಾ ಸಂಸ್ಥೆ ಮುಖ್ಯಸ್ಥೆ ಪ್ರತಿಮಾ ಕಳವಳ ವ್ಯಕ್ತಪಡಿಸಿದರು.

ಜೀತ ವಿಮುಕ್ತಿ ಕುರಿತು ಇಲ್ಲಿ ಬುಧವಾರ ನಡೆದ ಸಂವಾದದಲ್ಲಿ ಮಾತನಾಡಿ, ‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದಿಗೂ ಜೀತಪದ್ಧತಿ ನಿರ್ಮೂಲನೆಯಾಗಿಲ್ಲ. ಕಣ್ಣಿಗೆ ಕಾಣದಂತೆ ಕ್ವಾರಿ, ಇಟ್ಟಿಗೆ ಹಾಗೂ ಜಲ್ಲಿ ಕಾರ್ಖಾನೆಗಳಲ್ಲಿ ಬಾಲ ಕಾರ್ಮಿಕರು ಮತ್ತು ಅಮಾಯಕರು ಜೀತದಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ವಿಷಾದಿಸಿದರು.

‘ಕಾನೂನು ಪ್ರಕಾರ ಕೂಲಿ ಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕು ಮತ್ತು ಅವರಿಗೆ ಕೆಲಸ ಮಾಡಲು ಹಾಗೂ ಓಡಾಡಲು ಸ್ವಾತಂತ್ರ್ಯವಿದೆ. ಆದರೆ, ಜೀತ ಪದ್ಧತಿಯಲ್ಲಿ ಕಾರ್ಖಾನೆ ಮಾಲೀಕರು ಮತ್ತು ಭೂಒಡೆಯರು ಅಮಾಯಕರನ್ನು ಬಲವಂತವಾಗಿ ಕೂಡಿ ಹಾಕಿ ಕೆಲಸ ಮಾಡಿಸಿಕೊಳ್ಳುವ ಸ್ಥಿತಿಯಿದೆ’ ಎಂದರು.

‘ಬಡವರು ಹೊಟ್ಟೆ ಪಾಡಿಗೆ, ಕುಟುಂಬ ನಿರ್ವಹಣೆಗೆ, ಮಕ್ಕಳ ಮದುವೆಗೆ ಮತ್ತು ಕೆಲ ಸಂದರ್ಭಗಳಲ್ಲಿ ಸಾಲ ಪಡೆಯುತ್ತಾರೆ. ಕಾರ್ಖಾನೆ ಮಾಲೀಕರು ಹಾಗೂ ಭೂ ಒಡೆಯರು ಇದನ್ನೇ ಬಂಡವಾಳ ಮಾಡಿಕೊಂಡು ಆ ಬಡವರನ್ನು ಜೀತಕ್ಕೆ ಇಟ್ಟುಕೊಳ್ಳುತ್ತಾರೆ’ ಎಂದು ಹೇಳಿದರು.

‘ಕೋಲಾರ, ಚಿಕ್ಕಬಳ್ಳಾಪುರದ ಜತೆಗೆ ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ನಗರ ಪ್ರದೇಶದಲ್ಲಿ ಈ ಅಮಾನುಷ ಪದ್ಧತಿ ನಡೆಯುತ್ತಿದೆ. ಪೊಲೀಸರು ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳ ಕಣ್ತಪ್ಪಿಸಿ ಅಮಾಯಕರನ್ನು ಜೀತದಾಳುಗಳಾಗಿ ದುಡಿಸಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಶೇ 37ರಷ್ಟು ಜೀತದಾಳು: ‘ಜಿಲ್ಲೆಯಲ್ಲಿ 3 ಲಕ್ಷ ಕೂಲಿ ಕಾರ್ಮಿಕರಿದ್ದು, ಈ ಪೈಕಿ ಶೇ 37ರಷ್ಟು ಮಂದಿ ಜೀತದಾಳುಗಳಾಗಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ದೊಡ್ಡಬಳ್ಳಾಪುರ ಭಾಗದಲ್ಲಿರುವ ಇಟ್ಟಿಗೆ ಕಾರ್ಖಾನೆ, ಜಲ್ಲಿ ಕ್ರಷರ್‌ ಮತ್ತು ಸಿದ್ಧ ಉಡುಪು ಕಾರ್ಖಾನೆಗಳಲ್ಲಿ ಕೆಲಸ ಮಾಡುವವರೂ ಜೀತ ಮಾಡುತ್ತಿದ್ದಾರೆ’ ಎಂದು ಜೀತ ವಿಮುಕ್ತಿ ಸಂಘಟನೆ ಮುಖ್ಯಸ್ಥ ಸುರೇಂದ್ರ ವಿವರಿಸಿದರು.

‘ಶ್ರೀನಿವಾಸಪುರದ ಮಾವಿನ ಕಾಯಿ ಮಂಡಿಗಳಲ್ಲಿ ಕೆಲಸ ಮಾಡುವವರು ಮತ್ತು ಮಾವಿನ ಕಾಯಿ ಇಳಿಸುವವರು ಕನಿಷ್ಠ ಕೂಲಿ ಸಿಗದೆ ಒದ್ದಾಡುತ್ತಿದ್ದಾರೆ. ಇವರನ್ನು ಜೀತದಿಂದ ಮುಕ್ತಿಗೊಳಿಸಬೇಕು’ ಎಂದು ಸಲಹೆ ನೀಡಿದರು.

‘ಬಡವರು, ಆರ್ಥಿಕವಾಗಿ ತೀರಾ ಹಿಂದುಳಿದವರು ಹಣಕ್ಕಾಗಿ ತಮ್ಮ ಹಕ್ಕು ಮಾರಿಕೊಳ್ಳುತ್ತಿದ್ದಾರೆ. ಮುಳಬಾಗಿಲು ತಾಲ್ಲೂಕಿನ ಚಿನ್ಮಯಿ ಎಂಬುವರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾಲ ಪಡೆದು ಜೀತ ಮಾಡುತ್ತಿದ್ದರು. ಇಂತಹ ಸಾಕಷ್ಟು ಉದಾಹರಣೆಗಳು ಜಿಲ್ಲೆಯಲ್ಲಿವೆ. ಶ್ರೀಮಂತರು ಬಡವರ ಆರ್ಥಿಕ ದುಸ್ಥಿತಿಯ ಲಾಭ ಪಡೆದು ಜೀತ ಪದ್ಧತಿ ಮುಂದುವರಿಸಿದ್ದಾರೆ’ ಎಂದು ಕಿಡಿ ಕಾರಿದರು.

ವಂಚಿಸುತ್ತಿದ್ದಾರೆ: ‘ಜಿಲ್ಲೆಯಲ್ಲಿ ತೀವ್ರ ಬರಗಾಲವಿದ್ದು, ಕೃಷಿ ಚಟುವಟಿಕೆ ಸ್ಥಗಿತಗೊಂಡಿವೆ. ಇದರಿಂದಾಗಿ ಕೃಷಿ ಕಾರ್ಮಿಕರು ಹಾಗೂ ರೈತರಿಗೆ ಕೆಲಸ ಇಲ್ಲವಾಗಿದೆ. ಬಡವರು, ಆರ್ಥಿಕವಾಗಿ ಹಿಂದುಳಿದವರು ಹಾಗೂ ಶೋಷಿತ ಸಮಾಜದವರನ್ನು ಬಲಾಢ್ಯರು ಬಳಸಿಕೊಳ್ಳುತ್ತಿದ್ದಾರೆ. ಕೂಲಿ ಕಾರ್ಮಿಕರಿಗೆ ಕನಿಷ್ಠ ಕೂಲಿ ನೀಡದೆ ವಂಚಿಸುತ್ತಿದ್ದಾರೆ’ ಎಂದು ಜೀತ ವಿಮುಕ್ತಿ ಸಂಘಟನೆ ಸದಸ್ಯೆ ರೇಣುಕಾ ದೂರಿದರು.

‘ಒಡಿಶಾ ಮತ್ತು ಛತ್ತೀಸ್‌ಗಡದಿಂದ ಸಾಕಷ್ಟು ಕೂಲಿ ಕಾರ್ಮಿಕರು ಜಿಲ್ಲೆಗೆ ವಲಸೆ ಬಂದಿದ್ದಾರೆ. ಇವರು ರಸ್ತೆ ನಿರ್ಮಾಣ ಮತ್ತು ಪೈಪ್‌ಲೈನ್ ಅಳವಡಿಕೆ ಕೆಲಸ ಮಾಡುತ್ತಿದ್ದಾರೆ. ಇವರು ಕನಿಷ್ಠ ವೇತನವಿಲ್ಲದೆ ಮತ್ತು ಆಶ್ರಯವೂ ಸಿಗದೆ ಬದುಕುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿಲ್ಲ. ಈ ಕಾರ್ಮಿಕರು ದೈಹಿಕ ಮಾನಸಿಕ ಕಷ್ಟ ಅನುಭವಿಸುತ್ತಿದ್ದರೂ ಕೇಳುವವರಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಕೀಲ ಧನರಾಜ್, ಸಂವಿಧಾನಕ್ಕಾಗಿ ಜನಾಂದೋಲನ ಸಂಘಟನೆ ಸಂಸ್ಥಾಪಕ ಐಪಲ್ಲಿ ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !