ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತತ್ವಪದಕಾರರಿಂದ ಸಮಾಜ ಬದಲಾವಣೆ ಸಾಧ್ಯ

ತತ್ವಪದಕಾರರ ಸಮ್ಮೇಳನದಲ್ಲಿ ಜಿ.ಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಅಭಿಪ್ರಾಯ
Last Updated 19 ಜನವರಿ 2020, 12:51 IST
ಅಕ್ಷರ ಗಾತ್ರ

ಕೋಲಾರ: ‘ಸಮಾಜದ ಸುಧಾರಣೆಗೆ ಶ್ರಮಿಸುತ್ತಿರುವ ತತ್ವ ಪದಕಾರರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಕ್ರಮಕೈಗೊಳ್ಳಲಾಗುವುದು’ ಎಂದು ಜಿ.ಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಭರವಸೆ ನೀಡಿದರು.

ತಾಲ್ಲೂಕಿನ ಧನಟ್ನಹಳ್ಳಿ ಯೋಗಿನಾರೇಯಣ ಆಶ್ರಮದಲ್ಲಿ ಅರಿವು ಭಾರತ ವತಿಯಿಂದ ಭಾನುವಾರ ಆಯೋಜಿಸಿದ್ದ ತತ್ವಪದಕಾರರ ಸಮ್ಮೇಳನ, ಆರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿ, ‘ಮೂಲೆಗುಂಪಾಗಿರುವ ತತ್ವಪದಕಾರರನ್ನು ಗುರುತಿಸುವ ಕೆಲಸ ಅಗಬೇಕು’ ಎಂದರು.

ಉಪ ವಿಭಾಗಾಧಿಕಾರಿ ಸೋಮಶೇಖರ್ ಮಾತನಾಡಿ, ‘ಯಾವ ಜಾತಿ ಶ್ರೇಷ್ಠವೂ ಅಲ್ಲ, ಕನಿಷ್ಟವೂ ಅಲ್ಲ. ಸಮಾಜ ಸುಧಾರಕರು ಜಾತಿ ಧರ್ಮವನ್ನು ಮೀರಿ ಬೆಳೆದವರು. ಆದರೆ ಇತ್ತೀಚಿನ ದಿನಗಳಲ್ಲಿ ಜಯಂತಿ ಹೆಸರಲ್ಲಿ ಜಾತಿಯ ಚೌಕಟ್ಟನ್ನು ಹಾಕುವ ಪ್ರಯತ್ನ ನಡೆಯುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಜಿಡ್ಡುಗಟ್ಟಿದ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಸತಿಸಹಗಮನ, ಬಾಲ್ಯವಿವಾಹ ಇನ್ನಿತರೆ ಅನಿಷ್ಟ ಪದ್ದತಿಗಳು ಮಿತಿಮೀರಿದಾಗ ಕಾಲ ಕಾಲಕ್ಕೆ ಮಹಾಪುರುಷರು, ಸಮಾಜ ಸುಧಾರಕರು ಇವುಗಳನ್ನು ತೊಡೆದುಹಾಕಲು ಪ್ರಯತ್ನಿಸಿದ್ದಾರೆ. ತತ್ವ ಪದಕಾರರು ಪದಗಳ ಮೂಲವೇ ಅಸಮಾನತೆಯ ಸಮಾಜದಲ್ಲಿ ಸಮಾನತೆಯನ್ನು ಪ್ರತಿಪಾದಿಸುತ್ತಾ ಬರುತ್ತಿದ್ದಾರೆ’ ಎಂದರು.

‘ಒಳ್ಳೆಯದು, ಕೆಟ್ಟದರ ಬಗ್ಗೆ ಚರ್ಚೆ ಆಗಬೇಕೇ ವಿನಃ ಜಾತಿ ಧರ್ಮದ ಬಗ್ಗೆಯಲ್ಲಿ. ಎಲ್ಲವೂ ಮಿತಿಮೀರಿದಾಗ ಕೇಂದ್ರೀಕೃತ ವ್ಯವಸ್ಥೆಯ ವಿರುದ್ದ ನಿಸರ್ಗವೇ ಪಾಠ ಕಲಿಸುತ್ತದೆ. ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಅರಿವು ಮೂಡಿಸಿದರೆ ಬದಲಾವಣೆಗೆ ನಾಂದಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಲೇಖಕ ಕೆ.ನರಸಿಂಹ ಮೂರ್ತಿ ಮಾತನಾಡಿ, ‘ನೀತಿಯನ್ನು ತನ್ನ ಗರ್ಭದಲ್ಲೆ ಇಟ್ಟುಕೊಂಡು ಬದುಕಿನ ಬಗ್ಗೆ ಧ್ಯಾನ ಮಾಡಿ ಹುಟ್ಟಿರುವವರು ತತ್ವಪದಕಾರರು’ ಎಂದು ತಿಳಿಸಿದರು.

‘ಮನುಷ್ಯ ಜೀವನದ ಅರ್ಧ ಭಾಗದ ಅನುಭವಗಳ ಆಧಾರದ ಮೇರೆಗೆ ತತ್ವಪದಗಳನ್ನು ರಚನೆ ಮಾಡಲು ಮುಂದಾಗಿದ್ದಾನೆ. ಈ ಪದಗಳ ಅರ್ಥ ತಿಳಿದುಕೊಂಡರೆ ಎಂತಹವರು ಬದಲಾವಣೆಯತ್ತ ಮುಖಮಾಡುತ್ತಾನೆ. ತತ್ವಪದಕಾರು ಹಾಡುವ ಪದಗಳ ಬಗ್ಗೆ ಅರ್ಥಮಾಡಿಕೊಂಡರೆ ಖಂಡಿತವಾಗಿಯೂ ಸಮಾಜವನ್ನು ಬದಲಾವಣೆಯ ದಿಕ್ಕಿಗೆ ಕೊಂಡೊಯಲು ಸಹಕಾರಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಅರಿವಿನ ದಾರಿಯಲ್ಲಿ ನಡೆದಾಗ ಜ್ಞಾನೋದಯವಾಗುತ್ತದೆ. ತಮ್ಮನ್ನು ತಿಳಿದು ನಾನು ನೀನು ಅಂತ ಜತೆಗೆ ಬಂದವರೆ ತತ್ವಪದಕಾರರು. ಹೊಸ ದಾರಿ ಹುಡುಕಿ ನಡೆಯುವ ಹಾದಿಯಲ್ಲಿ ತತ್ವಪದಗಾರು ಇದ್ದಾರೆ.
ಪದದಲ್ಲಿ ಭಕ್ತಿ, ಬೇಡಿಕೆ, ಅಗ್ರಹ ಅಡಗಿದೆ’ ಎಂದು ವಿವರಿಸಿದರು.

ಅರಿವು ಭಾರತದ ಸಂಚಾಲಕ ಪ್ರೊ.ಅರಿವು ಶಿವಪ್ಪ ಮಾತನಾಡಿ, ‘ಬದಲಾವಣೆಯ ಹಂತದಲ್ಲಿ ಯಾವ ದಿಕ್ಕಿನಲ್ಲಿ ಹೋಗಬೇಕಿತ್ತೋ ಆ ದಿಕ್ಕಿನಲ್ಲಿ ಆಗುತ್ತಿಲ್ಲ. ಇಂದಿಗೂ ಲೋಪಗಳು ಇವೆ’ ಎಂದು ವಿಷಾದಿಸಿದರು.

‘ತತ್ವಪದದಲ್ಲಿ ಧರ್ಮ, ಆಧ್ಯಾತ್ಮದಿಂದ ಎಲ್ಲವನ್ನೂ ಕಾಣಬಹುದು. ಆದರೆ ಇಡೀ ಜಗತ್ತು ನಗರಮುಖಿಯಾಗಿ ಪಡಬಾರದ ಕಷ್ಟ ಪಡುತ್ತಿದ್ದಾರೆ. ಇದನ್ನು ಬದಲಿಸುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದು, ಇದಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕು’ ಎಂದು ಕೋರಿದರು.

ರಂಗಭೂಮಿ ಕಲಾವಿದ ಪಿ.ಮುನಿರೆಡ್ಡಿ, ಆದಿಮ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಎನ್.ಮುನಿಸ್ವಾಮಿ, ನಿವೃತ್ತ ಜಿಲ್ಲಾಧಿಕಾರಿ ಚೌಡಪ್ಪ, ಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಮುಖಂಡ ಟಿ.ವಿಜಯಕುಮಾರ್, ಉಪನ್ಯಾಸಕ ಸಿ.ಎ.ರಮೇಶ್, ವೈದ್ಯ ಡಾ.ಮುನಿರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT