ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಮಗಲ್ | ಸಾಮಾಜಿಕ ನ್ಯಾಯ: ಸವಿತಾ ಸಮಾಜದ ಪ್ರತಿಭಟನೆ

Last Updated 20 ಜನವರಿ 2022, 16:08 IST
ಅಕ್ಷರ ಗಾತ್ರ

ವೇಮಗಲ್: ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಸವಿತಾ ಸಮಾಜದವರು ಗ್ರಾಮದಲ್ಲಿ ಗುರುವಾರ ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿದರು.

‘ಕ್ಷೌರ ಮತ್ತು ನಾದಸ್ವರಕ್ಕೆ ಸವಿತಾ ಸಮಾಜದವರ ಸೇವೆ ಅಗತ್ಯವಿದೆ. ಆದರೆ, ಆಳುವ ಸರ್ಕಾರಗಳು ಸವಿತಾ ಸಮಾಜವನ್ನು ನಿರ್ಲಕ್ಷಿಸಿವೆ. ಸರ್ಕಾರಗಳಿಗೆ ಸಮುದಾಯದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ’ ಎಂದು ಸವಿತಾ ಸಮಾಜ ವೇಮಗಲ್‌ ಹೋಬಳಿ ಅಧ್ಯಕ್ಷ ಮುನಿಯಪ್ಪ ಅಸಮಾಧಾನ ವ್ಯಕ್ತಪಡಿಸಿದರು.

‘ಸವಿತಾ ಸಮಾಜ ಶುಭ ಕಾರ್ಯಗಳಿಗೆ ಮುಂದಿರುತ್ತದೆ. ಈ ಸಮುದಾಯ ಇಲ್ಲದಿದ್ದರೆ ಮನುಷ್ಯ ಸಮುದಾಯವೇ ವಿಕಾರವಾಗಿರುತ್ತಿತ್ತು. ಯಾವುದೇ ಶುಭ ಸಮಾರಂಭಕ್ಕೆ ಸವಿತಾ ಸಮಾಜದವರ ಅಗತ್ಯವಿದೆ. ಸಮುದಾಯದವರನ್ನು ಶೋಷಿತರಾಗಿ ಕಾಣುವುದು ಸರಿಯಲ್ಲ’ ಎಂದು ಹೇಳಿದರು.

‘ಸವಿತಾ ಸಮಾಜದವರು ಪಾರಂಪರಿಕವಾಗಿ ಕ್ಷೌರಿಕ ವೃತ್ತಿ ನಂಬಿಕೊಂಡು ಬಂದಿದ್ದಾರೆ. ದೇವರುಗಳಿಗೂ ಸೇವೆ ಮಾಡಿದ್ದಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಮುದಾಯವರು ಕುಲ ಕುಸುಬನ್ನೇ ನಂಬಿ ಜೀವನ ರೂಪಿಸಿಕೊಳ್ಳುವುದು ಕಷ್ಟ. ಸಮಾಜವು ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ತುಂಬಾ ಹಿಂದುಳಿದಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಅಕ್ಕಪಕ್ಕದ ರಾಜ್ಯಗಳಲ್ಲಿ ಸರ್ಕಾರವು ಸವಿತಾ ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿಟ್ಟಿದೆ. ಆದರೆ, ಕರ್ನಾಟಕದಲ್ಲಿ ಸರ್ಕಾರ ಸಮುದಾಯಕ್ಕೆ ₹ 5 ಕೋಟಿ ಮಾತ್ರ ಮೀಸಲಿಟ್ಟಿದೆ. ಇದರಿಂದ ಸಮುದಾಯದ ಅಭಿವೃದ್ಧಿ ಸಾಧ್ಯವಿಲ್ಲ’ ಎಂದು ಜಿಲ್ಲಾ ಸವಿತಾ ಸಮಾಜದ ಖಜಾಂಚಿ ಶಿವಶಂಕರ್ ತಿಳಿಸಿದರು.

‘ಬಜೆಟ್‌ನಲ್ಲಿ ಸವಿತಾ ಸಮಾಜದ ಏಳಿಗೆಗೆ ₹ 600 ಕೋಟಿ ಘೋಷಣೆ ಮಾಡಬೇಕು. ಇತರೆ ಜನಾಂಗದವರನ್ನು ಗೌರವಿಸಿ ಅಗತ್ಯ ಸೇವೆ ಒದಗಿಸುವಂತೆ ಸವಿತಾ ಸಮಾಜದ ಅಭಿವೃದ್ಧಿಗೂ ಯೋಜನೆ ರೂಪಿಸಬೇಕು. ಜಾತಿ ನಿಂದನೆ ತಡೆಗೆ ಪರಿಣಾಮಕಾರಿ ಕಾನೂನು ಜಾರಿಗೊಳಿಸಬೇಕು. ರಾಜಕೀಯವಾಗಿ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು’ ಎಂದು ಒತ್ತಾಯಿಸಿದರು.

ವೇಮಗಲ್ ಹೋಬಳಿ ವ್ಯಾಪ್ತಿಯ ಕ್ಷೌರದಂಗಡಿಗಳ ಮಾಲೀಕರು ಮತ್ತು ಕೆಲಸಗಾರರು ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಜಿಲ್ಲಾ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ಗಂಗರಾಜು, ಗೌರವಾಧ್ಯಕ್ಷ ವೆಂಕಟೇಶಪ್ಪ, ಉಪಾಧ್ಯಕ್ಷ ವೆಂಕಟೇಶ್, ಖಜಾಂಚಿ ಚಂದ್ರು, ನಿರ್ದೇಶಕ ನಾರಾಯಣಸ್ವಾಮಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT