ಗುರುವಾರ , ಸೆಪ್ಟೆಂಬರ್ 19, 2019
26 °C

ಅಸ್ಪೃಶ್ಯತೆಯ ರೋಗದಿಂದ ಸಮಾಜ ಮಲೀನ: ಕೋಟಿಗಾನಹಳ್ಳಿ ರಾಮಯ್ಯ ಕಳವಳ

Published:
Updated:
Prajavani

ಕೋಲಾರ: ‘ದಲಿತ ಪ್ರಜ್ಞೆ ರುದ್ರಭೂಮಿವರೆಗೆ ಬಂದು ನಿಂತಿದ್ದು, ಭವಿಷ್ಯದ ಅಪಾಯ ಸಮುದಾಯಕ್ಕೆ ಹೇಳುವುದು ನುಡಿಕಾರರ ಕರ್ತವ್ಯ’ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.

‘ಮನೆ ಮನೆಗೆ ಅಂಬೇಡ್ಕರ್’ ವಿಚಾರ ಕುರಿತು ಬುಡ್ಡಿ ದೀಪ ಪ್ರಕಾಶನವು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿ, ‘ಕೋಲಾರದ ಈ ನೆಲದಲ್ಲಿ ನಚಿಕೇತನ ನಿಲಯವು ದಲಿತ ಚಳವಳಿಯ ಹುಟ್ಟಿಗೆ ನಾಂದಿ ಹಾಡಿತು. ನಮ್ಮಂತಹ ನೂರಾರು ಮಂದಿ ಅಲ್ಲಿ ದಲಿತ ಪ್ರಜ್ಞೆ ಮೂಡಿಸಿಕೊಂಡೆವು. ಇಂದು ದಲಿತ ಚಳವಳಿಯ ಸ್ಥಿತಿ ನೆನೆದರೆ ಬೇಸರವಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿರು.

‘ಇಂದು ಚಿತಾಗಾರಗಳ ಸಂಖ್ಯೆ ಹೆಚ್ಚಿ ಸ್ಮಶಾನದ ಸಮಸ್ಯೆಗೆ ತುಸು ಪರಿಹಾರ ಸಿಕ್ಕಿದೆ. ಆದರೂ ಸಮಾಜ ಅಸ್ಪೃಶ್ಯತೆಯ ರೋಗದಿಂದ ಮಲೀನವಾಗಿದೆ. ಮಲೀನ ರಕ್ತ ಶುದ್ಧೀಕರಿಸುವ ಹೃದಯ ಸ್ತಬ್ಧವಾಗಿ ಎರಡೂವರೆ ದಶಕವೇ ಕಳೆದಿದೆ’ ಎಂದು ಮಾರ್ಮಿಕವಾಗಿ ನುಡಿದರು.

‘ಅಂಬೇಡ್ಕರ್ ಅವರನ್ನು ಮನೆ ಮನೆಗೆ ತಲುಪಿಸುವುದೆಂದರೆ ಮೊದಲು ನಮ್ಮ ಮನೆಯಲ್ಲಿ ಅಂಬೇಡ್ಕರ್ ಇರಬೇಕು. ಅಂಬೇಡ್ಕರ್ ಹೇಳಿರುವುದನ್ನು ಅರಗಿಸಿಕೊಳ್ಳುವ ಮನಸ್ಸು ಇರಬೇಕು. ಬಲಹೀನ ಪಾದಗಳಿಗೆ ಬಲ ಬರಬೇಕು. ಆ ಪಾದಗಳು ಹಿಂದಿನ ಸ್ಥಿತಿ ನೆನೆಯದೆ ಬಲಹೀನವಾದುದನ್ನು ತುಳಿಯುವುದನ್ನು ಆದ್ಯತೆ ಮಾಡಿಕೊಂಡಿರುವ ಈ ಕಾಲಘಟ್ಟದಲ್ಲಿ ಅಂಬೇಡ್ಕರ್ ಕುರಿತು ತನ್ನೊಳಗೆ ತಾನು ನೋಡುವ ಸಭೆ ನಡೆಸಬೇಕು’ ಎಂದು ಸಲಹೆ ನೀಡಿದರು.

‘ನಾವು ಈಗಿರುವ ಮನೆ ಆರ್ಯ ಧರ್ಮಕ್ಕೆ ಅನುಗುಣವಾಗಿ ಕಟ್ಟಿದ್ದು. ನರೇಂದ್ರ ಮೋದಿಯ ಹಿಂದುತ್ವದ ಭೂತ ಆವರಿಸಿರುವ ಪರಿವಾರದ ಅಂಕಣವಾಗಿ, ಮನೆಯು ರಾಜಕೀಯದ ತರಬೇತಿ ಶಾಲೆಯಾಗಿರುವ, ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳುವ ವ್ಯವಸ್ಥೆಯಲ್ಲಿ ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಬೇಕು’ ಎಂದರು.

ಸಹಮತವಿದೆ: ‘ಮಹಾ ನದಿಯ ಉಗಮ’ ಪುಸ್ತಕ ಕುರಿತು ಮಾತನಾಡಿದ ಚಿಂತಕ ಸಿ.ಜಿ.ಲಕ್ಷ್ಮೀಪತಿ, ‘ಅಂಬೇಡ್ಕರ್ ತುಳಿತಕ್ಕೊಳಗಾದವರನ್ನು ಮೇಲಕ್ಕೆತ್ತಿದರು ಎಂಬ ವಿಚಾರದಲ್ಲಿ ಎಲ್ಲರಿಗೂ ಸಹಮತವಿದೆ. ಅಲ್ಲಿಂದ ಆಚೆಗೆ ಏನೆಂದು ತಿಳಿದಿಲ್ಲ’ ಎಂದು ಹೇಳಿದರು.

‘ಅಂಬೇಡ್ಕರ್ ಅವರನ್ನು ಬಿಟ್ಟು ಬೇರೆ ಬೇರೆಯವರು ನಮ್ಮ ಮನೆ ಮನ ಸೇರಿದ್ದಾರೆ. ಮನೆ, ಮನಸ್ಸಿನಲ್ಲಿ ಬೇಡದ ವಿಚಾರ ತುಂಬಿಕೊಂಡಿವೆ. ಅಂಬೇಡ್ಕರ್ ವಿಚಾರಧಾರೆ ಭಾಷಣಕ್ಕೆ ಸೀಮಿತವಾಗಿದೆಯೇ ಹೊರತು ಮನೆ. ಮನಸ್ಸಿನಲ್ಲಿ ಇಲ್ಲ. ಅವರ ಆಶಯ, ವಿಚಾರಗಳು ಆಚರಣೆಯಲ್ಲಿ ಬಂದಿಲ್ಲ’ ಎಂದು ವಿಷಾದಿಸಿದರು.

‘ಜಾತಿವಾದದ ಬಗ್ಗೆ ನಂಬಿಕೆ ಉಳ್ಳವರು ಅಂಬೇಡ್ಕರ್‌ ವಾದಿಯಾಗಲು ಸಾಧ್ಯವಿಲ್ಲ. ಅಂಬೇಡ್ಕರ್ ಸಮಾಜ ಹೇಗಿರಬೇಕೆಂದು ಬಯಸಿದ್ದರೋ ಅದನ್ನು ಮನೆ ಮನೆಗೆ ತಿಳಿಸುವ ಕೆಲಸ ಆಗಬೇಕು’ ಎಂದು ಸಲಹೆ ನೀಡಿದರು.

ರಾಜಿ ಆಗಲಿಲ್ಲ: ‘ಗುಲಾಮಗಿರಿ ತೊಡೆದು ಹಾಕಲು ಶಿಕ್ಷಣವೊಂದೇ ಅಸ್ತ್ರ ಎಂದು ಪ್ರತಿಪಾದಿಸಿದ್ದ ಅಂಬೇಡ್ಕರ್ ಜಿಲ್ಲೆಯ ಕೆಜಿಎಫ್‌ಗೆ ಬಂದಿದ್ದ ಸಂದರ್ಭದಲ್ಲಿ ವೈದ್ಯ ದಂಪತಿ ಅವರ ಕಾಲಿಗೆ ನಮಸ್ಕರಿಸಿದಾಗ ಬೇಸರಗೊಂಡರು. ತಾನು ಏನು ಹೇಳ ಬಯಸಿದ್ದನ್ನು ಹೇಳದೆ ಹಿಂದಿರುಗಿದರು. ಅವರು ನಂಬಿದ ಮತ್ತು ಪ್ರತಿಪಾದಿಸಿದ ಸೈದ್ಧಾಂತಿಕ ವಿಚಾರದಲ್ಲಿ ಎಂದಿಗೂ ರಾಜಿ ಆಗಲಿಲ್ಲ’ ಎಂದು ಬೆಂಗಳೂರಿನ ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕಿ ಕೆಸ್ತಾರ ಅಭಿಪ್ರಾಯಪಟ್ಟರು.

ಹೈಕೋರ್ಟ್ ವಕೀಲ ಎಚ್.ಮೋಹನ್‌ಕುಮಾರ್ ‘ಮಹಾನದಿಯ ಉಗಮ’ ಪುಸ್ತಕ ಬಿಡುಗಡೆ ಮಾಡಿದರು. ಲೇಖಕ ಪ್ರೊ.ಎಂ.ನಾರಾಯನಸ್ವಾಮಿ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಿ.ಡೋಮಿನಿಕ್, ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ (ಆರ್‌ಪಿಐ) ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್, ನಿಕಟಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ್ ಪಾಲ್ಗೊಂಡಿದ್ದರು.

Post Comments (+)