ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕಾಸಕ್ತಿಯಿಂದ ಗೊಂದಲ ಬಗೆಹರಿಸಿಕೊಳ್ಳಿ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಣಾಧಿಕಾರಿಗಳ ಸಂವಾದ
Last Updated 20 ಫೆಬ್ರುವರಿ 2019, 13:26 IST
ಅಕ್ಷರ ಗಾತ್ರ

ಕೋಲಾರ: ‘ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗದೇ ಕಲಿಕಾಸಕ್ತಿಯಿಂದ ಅಧ್ಯಯನ ನಡೆಸಿ ಗೊಂದಲ ಬಗೆಹರಿಸಿಕೊಳ್ಳಿ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಸಲಹೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ತಾಲ್ಲೂಕಿನ ಕೆಂಬೋಡಿ ಜನತಾ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಮಾತನಾಡಿ, ‘ಕಠಿಣ ಪರಿಶ್ರಮ ಮತ್ತು ಏಕಾಗ್ರತೆಯಿದ್ದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು’ ಎಂದು ತಿಳಿಸಿದರು.

‘ನಿಮಗೆ ನಿಮ್ಮ ಬಗ್ಗೆ ವಿಶ್ವಾಸ ಇರಬೇಕು. ಅದಕ್ಕಾಗಿ ಇಲಾಖೆ ನೀಡಿರುವ 6 ಸೆಟ್ ಪ್ರಶ್ನೆಪತ್ರಿಕೆ, ನನ್ನನ್ನೊಮ್ಮೆ ಗಮನಿಸಿ ಪ್ರಶ್ನೆಕೋಠಿಯನ್ನು ಬರೆದು ಅಭ್ಯಾಸ ಮಾಡಬೇಕು. ಮನನವಾದ ನಂತರ ನೋಡದೇ ಬರೆದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ’ ಎಂದರು.

‘ಫೆ.25ರಿಂದ ರಾಜ್ಯ ಮಟ್ಟದ ಪೂರ್ವಸಿದ್ದತಾ ಪರೀಕ್ಷೆ ಆರಂಭವಾಗುತ್ತಿದೆ, ಹಿಂದೆ ಜಿಲ್ಲಾ ಮಟ್ಟದ ಪರೀಕ್ಷೆಯಲ್ಲಿ ಮಾಡಿದ ತಪ್ಪುಗಳನ್ನು ಶಿಕ್ಷಕರು ತಿದ್ದಿಕೊಳ್ಳಬೇಕು. ಈ ಭಾರಿ ಫಲಿತಾಂಶ ಸುಧಾರಣೆಗೆ ಕ್ರಮಕೈಗೊಳ್ಳಬೇಕು’ ಎಂದು ಎಚ್ಚರಿಸಿದರು.

‘ವಿದ್ಯಾರ್ಥಿಗಳಿಗೆ ಕಲಿಕೆಯ ಹಸಿವು ಹೆಚ್ಚಬೇಕು. ಉತ್ತರ ತಿಳಿದುಕೊಳ್ಳುವ ಹಂಬಲವಿದ್ದರೆ ಪ್ರಶ್ನೆ ಕೇಳುವ ಅಭ್ಯಾಸ ತಾನಾಗಿಯೇ ಬೆಳೆಯುತ್ತದೆ. ನಿಮ್ಮ ಗುರಿ ಎತ್ತರದಲ್ಲಿದ್ದು, ನೀವು ಸಾಗುವ ಹಾದಿ ಉತ್ತಮವಾಗಿದ್ದರೆ ಸಾಧನೆ ಕಷ್ಟವಾಗಲಾರದು’ ಎಂದು ಅಭಿಪ್ರಾಯಟ್ಟರು.

‘ವಿದ್ಯಾರ್ಥಿಗಳು ಕಷ್ಟಪಟ್ಟು, ಒಬ್ಬರ ಬಲವಂತಕ್ಕೆ ಕಲಿತರೆ ಸಾಧನೆ ಮಾಡಿದಕ್ಕೆ ಆರ್ಥ ಇರುವುದಿಲ್ಲ. ಇಷ್ಟಪಟ್ಟು ಓದುವಂತಾಗಬೇಕು’ ಎಂದು ಜನತಾಪ್ರೌಢಶಾಲೆ ಸಂಸ್ಥಾಪಕ ಕಾರ್ಯದರ್ಶಿ ಬಿಸಪ್ಪಗೌಡ ಹೇಳಿದರು.

‘ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೆಲ ವಿಷಯಗಳು ಕಠಿಣವಾಗುತ್ತವೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸುವ ಮೂಲಕ ಅವರು ಉತ್ತಮ ಫಲಿತಾಂಶ ಪಡೆದುಕೊಳ್ಳಲು ಶಿಕ್ಷಕರು ಸಹಕಾರ ನೀಡಬೇಕು’ ಎಂದು ಸಲಹೆ ನೀಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡೆಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಮಾತನಾಡಿ, ‘ಮಾ.21ರಿಂದ ಪರೀಕ್ಷೆ ಆರಂಭವಾಗಲಿದ್ದು, ಉಳಿದಿರುವ ದಿನಗಳನ್ನು ವ್ಯರ್ಥ ಮಾಡದೆ ಕಲಿಕೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದಿನ ಜೀವನದಲ್ಲಿ ಕಷ್ಟಗಳಿಗೆ ಗುರಿಯಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಪರೀಕ್ಷೆ ದಿನಗಳಲ್ಲಿ ಗಾಬರಿ, ಭಯ ಅಗತ್ಯವಿಲ್ಲ. ಇಂದಿನಿಂದಲೇ ಅಭ್ಯಾಸ ಮಾಡಿದರೆ ಆತ್ಮವಿಶ್ವಾಸ ತಾನಾಗಿಯೇ ಬರುತ್ತದೆ. ಇಲಾಖೆಯಿಂದ ಶಾಲೆಗಳಿಗೆ ನೀಡಿರುವ ವರ್ಕ್ ಬುಕ್, ಪ್ರಶ್ನೆಪತ್ರಿಕೆ, ನನ್ನನ್ನೊಮ್ಮೆ ಗಮನಿಸಿ ಪ್ರಶ್ನೆಕೋಠಿಗಳನ್ನು ಸದುಪಯೋಗಪಡಿಸಿಕೊಂಡೆ ನಿರೀಕ್ಷೆಗೂ ಮೀರಿ ಫಲಿತಾಂಶಗಳಿಸಬಹುದು’ ಎಂದು ಹೇಳಿದರು.

‘ಕಠಿಣ ವಿಷಯಗಳಾದ ಇಂಗ್ಲೀಷ್, ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಿ. ನಿರಂತರ ಅಭ್ಯಾಸದಿಂದ ಈ ವಿಷಯಗಳು ಸುಲಭವೆನಿಸುತ್ತದೆ. ಗಣಿತ ವಿಷಯಕ್ಕೆ ಅಭ್ಯಾಸ ಬಹಳ ಮುಖ್ಯ. ಸೂತ್ರಗಳನ್ನು ನೆನಪಿಸಿಕೊಂಡು ತಪ್ಪಿಲ್ಲದೆ ಬರೆಯುವುದನ್ನು ಅಭ್ಯಾಸ ಮಾಡಿ. ಪ್ರತಿಯೊಂದು ಅಭ್ಯಾಸದಲ್ಲಿರುವ ಸಮಸ್ಯೆಗಳನ್ನು ಬರೆದುಕೊಂಡು ಸ್ವತಃ ಬಿಡಿಸುವ ಸಾಮಥ್ರ್ಯ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಪರೀಕ್ಷೆಯಲ್ಲಿ ಬರವಣಿಗೆ ಉತ್ತಮವಾಗಿರಬೇಕು. ಮೌಲ್ಯಮಾಪನ ನಡೆಸುವಾಗ ಶಿಕ್ಷಕರು ಮೊದಲು ಬರವಣಿಗೆ ಗಮನಿಸುತ್ತಾರೆ. ಪರೀಕ್ಷೆ ವೇಳೆ ಮಕ್ಕಳು ಮೊದಲ ತಮ್ಮ ಆರೋಗ್ಯದ ಕಡೆ ಗಮನಹರಿಸಬೇಕು’ ಎಂದು ತಿಳಿಸಿದರು.

ಜನತಾ ಪ್ರೌಢಶಾಲೆ ಪ್ರಾಂಶುಪಾಲ ಕೆ.ಗೋಪಾಲರೆಡ್ಡಿ, ವಿಷಯ ಪರಿವೀಕ್ಷಕರಾದ ಕೃಷ್ಣಪ್ಪ, ಶಶಿವಧನ, ಗಾಯತ್ರಿ, ಶಂಕರಪ್ಪ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣಪ್ಪ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.ಗೋಪಾಲರೆಡ್ಡಿ, ಶಿಕ್ಷಣ ಸಂಯೋಜಕ ಮುನಿರತ್ನಯ್ಯಶೆಟ್ಟಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT