ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಜ್ವಲಂತ ಸಮಸ್ಯೆ ಪರಿಹರಿಸಿ

ರಾಜ್ಯಸಭಾ ಸದಸ್ಯ ದುಷ್ಯಂತ್‌ಕುಮಾರ್ ಗೌತಮ್‌ಗೆ ಮುಖಂಡರ ಮನವಿ
Last Updated 26 ಆಗಸ್ಟ್ 2021, 16:00 IST
ಅಕ್ಷರ ಗಾತ್ರ

ಕೋಲಾರ: ಬಿಜೆಪಿ ವತಿಯಿಂದ ತಾಲ್ಲೂಕಿನ ನರಸಾಪುರದ ಬಳಿ ಗುರುವಾರ ಹಮ್ಮಿಕೊಂಡಿದ್ದ ವಿವಿಧ ಸಮುದಾಯಗಳ ಮುಖಂಡರ ಸಭೆಯಲ್ಲಿ ಮುಖಂಡರು ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಂತೆ ಬಿಜೆಪಿ ರಾಜ್ಯಸಭಾ ಸದಸ್ಯ ದುಷ್ಯಂತ್‌ಕುಮಾರ್ ಗೌತಮ್ ಅವರಿಗೆ ಒತ್ತಾಯಿಸಿದರು.

‘ಜಿಲ್ಲೆಯಲ್ಲಿ ಮಾವು ಮತ್ತು ಟೊಮೆಟೊ ಸಂಸ್ಕರಣಾ ಘಟಕ ಸ್ಥಾಪನೆ, ಕೆಜಿಎಫ್‌ನಲ್ಲಿ ಕೈಗಾರಿಕಾ ವಲಯ ಸ್ಥಾಪನೆ ಮಾಡಬೇಕು. ಕೇಂದ್ರ ಸರ್ಕಾರವು ಇತರೆ ರಾಜ್ಯಗಳಂತೆ ಕರ್ನಾಟಕದಲ್ಲೂ ನದಿ ಜೋಡಣೆ ಯೋಜನೆ ಅನುಷ್ಠಾನಕ್ಕೆ ತಂದು ಬರಪೀಡಿತ ಕೋಲಾರ ಜಿಲ್ಲೆಯ ನೀರಿನ ಸಮಸ್ಯೆ ಪರಿಹರಿಸಬೇಕು’ ಎಂದು ಮುಖಂಡರು ಮನವಿ ಮಾಡಿದರು.

‘ಬೆಮಲ್ ಕಂಪನಿಯಲ್ಲಿ ರಕ್ಷಣಾ ಇಲಾಖೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಅಗತ್ಯವಿರುವ ಯಂತ್ರೋಪಕರಣ ಉತ್ಪಾದಿಸಲಾಗುತ್ತಿದೆ. ಈ ಕಂಪನಿಗೆ ಭವ್ಯ ಇತಿಹಾಸವಿದೆ. ಆದರೆ, ಕೇಂದ್ರ ಸರ್ಕಾರವು ಕಂಪನಿಯನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ಇದರಿಂದ ಕಾರ್ಮಿಕರಲ್ಲಿ ಆತಂಕ ಎದುರಾಗಿದೆ. ಕೇಂದ್ರದ ಮೇಲೆ ಮೇಲೆ ಒತ್ತಡ ತಂದು ಬೆಮಲ್‌ ಖಾಸಗೀಕರಣ ಪ್ರಕ್ರಿಯೆ ನಿಲ್ಲಿಸಬೇಕು’ ಎಂದು ಕೆಜಿಎಫ್‌ನ ಬಿಜಿಎಂಎಲ್ ನೌಕರರ ಸಂಘದ ಅಧ್ಯಕ್ಷ ಆಂಜನೇಯರೆಡ್ಡಿ ಕೋರಿದರು.

‘ಜಿಲ್ಲೆಯಲ್ಲಿ ಹೆಚ್ಚಾಗಿ ಟೊಮೆಟೊ ಮತ್ತು ಮಾವು ಬೆಳೆಯಲಾಗುತ್ತಿದೆ. ಬೆಲೆ ಕುಸಿತದ ಸಂದರ್ಭದಲ್ಲಿ ಮಾವು ಮತ್ತು ಟೊಮೆಟೊ ಸಂಸ್ಕರಿಸಿ ದಾಸ್ತಾನು ಮಾಡಲು ಘಟಕಗಳನ್ನು ಸ್ಥಾಪಿಸುವುದಾಗಿ ಸರ್ಕಾರ ಭರವಸೆ ನೀಡುತ್ತಿದೆ. ಆದರೆ, ಈವರೆಗೆ ಭರವಸೆ ಈಡೇರಿಸಿಲ್ಲ. ಸಂಸ್ಕರಣಾ ಘಟಕ ಸ್ಥಾಪನೆ ಕೆಲಸ ತ್ವರಿತವಾಗಿ ಆಗಬೇಕು. ಕೃಷಿ ಕೂಲಿ ಕಾರ್ಮಿಕರಿಗೆ ಭದ್ರತಾ ಯೋಜನೆ ಜಾರಿಗೆ ತರಬೇಕು’ ಎಂದು ವೈದ್ಯ ಡಾ.ನಾರಾಯಣಸ್ವಾಮಿ ಸಲಹೆ ನೀಡಿದರು.

ಜನಪರ ಯೋಜನೆ: ‘ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶಕ್ಕೆ ವಲಯ ಮಟ್ಟದಲ್ಲಿ ವಿವಿಧ ಸಮುದಾಯಗಳ ಮುಖಂಡರ ಸಭೆ ನಡೆಸಲಾಗುತ್ತಿದೆ. ದೇಶದ ಪ್ರತಿ ಸಮುದಾಯದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ’ ಎಂದು ದುಷ್ಯಂತ್‌ಕುಮಾರ್ ಗೌತಮ್ ಹೇಳಿದರು.

‘ಜಿಲ್ಲೆಯ ಗಂಭೀರ ಸಮಸ್ಯೆಗಳನ್ನು ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇವೆ. ಮೋದಿ ಅವರು ಪ್ರಧಾನಿ ಆದಾಗ ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಈ ಸಮಸ್ಯೆಗಳನ್ನು ಪರಿಹರಿಸಿ ಫಸಲ್ ಭೀಮಾ ಯೋಜನೆ, ನೋಟು ಅಮಾನ್ಯೀಕರಣ, ಸರಕು ಮತ್ತು ಸೇವಾ ತೆರಿಗೆ ಪದ್ಧತಿ ಜಾರಿಗೆ ತಂದರು. ಈ ಕ್ರಮಗಳು ಆರಂಭದಲ್ಲಿ ದೇಶದ ಅರ್ಥ ವ್ಯವಸ್ಥೆ ಪರಿಣಾಮ ಬೀರಿದರೂ ಈಗ ಎಲ್ಲಾ ಕ್ಷೇತ್ರಗಳಲ್ಲೂ ಸುಧಾರಣೆಯಾಗಿದೆ’ ಎಂದರು.

ನೆಲೆ ಕಳೆದುಕೊಳ್ಳುತ್ತಿದೆ: ‘ಗರೀಬ್ ಯೋಜನೆಯಡಿ ಪ್ರತಿ ಕುಟುಂಬಕ್ಕೂ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ. ಜತೆಗೆ ಸಬ್ಸಿಡಿ ಜಾರಿಗೆ ತರಲಾಗಿದೆ. ಜಮ್ಮು ಮತ್ತು -ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಉದ್ದೇಶದಿಂದ 370 ಕಾಯ್ದೆ ಜಾರಿಗೆ ತಂದ ಹಿನ್ನೆಲೆಯಲ್ಲಿ ಕೇಂದ್ರದ ಮೇಲೆ ಜನರಿಗೆ ವಿಶ್ವಾಸ ಹೆಚ್ಚಿತು. ಇದನ್ನು ಸಹಿಸದ ವಿರೋಧ ಪಕ್ಷದವರು ಅಪಪ್ರಚಾರ ಮಾಡಿದರು. ಈ ಕಾರಣದಿಂದಲೇ ಕಾಂಗ್ರೆಸ್ ಚುನಾವಣೆಗಳಲ್ಲಿ ನೆಲೆ ಕಳೆದುಕೊಳ್ಳುತ್ತಿದೆ’ ಎಂದು ಟೀಕಿಸಿದರು.

‘ಮೋದಿಯವರು ಪಕ್ಷರಹಿತ, ಧರ್ಮರಹಿತ ಆಡಳಿತ ನಡೆಸುತ್ತಿದ್ದಾರೆ. ಕೇಂದ್ರವು ಕೋವಿಡ್ ನಿರ್ವಹಣೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ವಿವಿಧ ಸಮಯದಾಯಗಳ ಮುಖಂಡರು ಸಮಾಜದಲ್ಲಿ ಗುರುತಿಸಿಕೊಳ್ಳಲು ಪಕ್ಷ ಸಂಪೂರ್ಣ ಸಹಕಾರ ನೀಡುತ್ತದೆ. ಪಕ್ಷದ ಜತೆ ಹೆಜ್ಜೆ ಹಾಕಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು, ಕೇಶವಪ್ರಸಾದ್, ವಿನಯ್ ಬಿದಿರೆ, ಸುರೇಶ್‌ನಾರಾಯಣ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್, ಪ್ರಭಾರಿ ಜಯಚಂದ್ರರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT