ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಕೇಂದ್ರದ ನೀರಿನ ಬವಣೆ ನೀಗಿಸಿ: ಸಂಸದ ಮುನಿಸ್ವಾಮಿ ಸೂಚನೆ

Last Updated 22 ಏಪ್ರಿಲ್ 2020, 13:56 IST
ಅಕ್ಷರ ಗಾತ್ರ

ಕೋಲಾರ: ‘ಬೇಸಿಗೆ ಕಾರಣಕ್ಕೆ ಜಿಲ್ಲಾ ಕೇಂದ್ರದಲ್ಲಿ ನೀರಿನ ಸಮಸ್ಯೆ ದಿನೇದಿನೇ ಗಂಭೀರವಾಗುತ್ತಿದೆ. ನೀರು ಲಭ್ಯವಿರುವ ಕೊಳವೆ ಬಾವಿಗಳಿಗೆ ಶೀಘ್ರವೇ ಪಂಪ್‌ ಮೋಟರ್‌ ಅಳವಡಿಸಿ ಸಮಸ್ಯೆ ಪರಿಹರಿಸಿ’ ಎಂದು ಸಂಸದ ಎಸ್‌.ಮುನಿಸ್ವಾಮಿ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಹೊರವಲಯದ ಅಮ್ಮೇರಹಳ್ಳಿ ಹಾಗೂ ಮಡೇರಹಳ್ಳಿ ಕೆರೆಗೆ ಬುಧವಾರ ಭೇಟಿ ನೀಡಿದ ಸಂಸದರು ಕೆರೆಯಂಗಳದಲ್ಲಿನ ಕೊಳವೆ ಬಾವಿಗಳಲ್ಲಿ ನೀರಿನ ಲಭ್ಯತೆ ಪರಿಶೀಲಿಸಿ ಮಾತನಾಡಿ, ‘ಕೆ.ಸಿ ವ್ಯಾಲಿ ನೀರಿನಿಂದ ಈ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಿದೆ. ನೀರು ಬತ್ತಿದ್ದ ಕೊಳವೆ ಬಾವಿಗಳು ಮರುಪೂರಣಗೊಂಡಿವೆ’ ಎಂದರು.

‘ಸದ್ಯ ಮಡೇರಹಳ್ಳಿ ಕೆರೆಯಂಗಳದ 4 ಕೊಳವೆ ಬಾವಿಗಳಿಂದ ಕೋಲಾರ ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಇದರ ಜತೆಗೆ ಇನ್ನೂ 5 ಕೊಳವೆ ಬಾವಿಗಳು ಮರುಪೂರಣಗೊಂಡಿದ್ದು, ಇವುಗಳಿಗೆ ಪಂಪ್‌ ಮೋಟರ್‌ ಅಳವಡಿಸಿದರೆ ಅರ್ಧ ನಗರಕ್ಕೆ ನೀರು ಪೂರೈಸಬಹುದು’ ಎಂದು ತಿಳಿಸಿದರು.

‘ನರಸಾಪುರ ಕೆರೆಯಿಂದ ಕಾಲುವೆ ಮೂಲಕ ಹರಿದು ಬರುತ್ತಿರುವ ಕೆ.ಸಿ ವ್ಯಾಲಿ ನೀರಿನಿಂದ ಮಡೇರಹಳ್ಳಿ ಕೆರೆ ತುಂಬುವ ಹಂತಕ್ಕೆ ಬಂದಿತ್ತು. ಆದರೆ, ಇತ್ತೀಚೆಗೆ ಕಾರಣಾಂತರದಿಂದ ನೀರು ಹರಿಯುವುದು ನಿಂತಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಕೆರೆಗೆ ಮತ್ತೆ ನೀರು ಹರಿಸುತ್ತಿರುವುದರಿಂದ ಭರ್ತಿ ಆಗುತ್ತಿದೆ. ಕೆರೆ ಭರ್ತಿಯಾದರೆ ಕೊಳವೆ ಬಾವಿಗಳು ಮರುಪೂರಣಗೊಂಡು ಕೋಲಾರ ನಗರದ ನೀರಿನ ಸಮಸ್ಯೆ ಬಗೆಹರಿಯುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನರಸಾಪುರ ಕೆರೆಯಿಂದ ಕೆ.ಸಿ.ವ್ಯಾಲಿ ಯೋಜನೆ ನೀರನ್ನು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಮಡೇರಹಳ್ಳಿ ಕೆರೆಗೆ ಹರಿಸಲಾಗುತ್ತಿದೆ. ಈ ಕೆರೆ ತುಂಬಿದ ನಂತರ ಅಮ್ಮೇರಹಳ್ಳಿ ಮತ್ತು ಕೋಲಾರಮ್ಮ ಕೆರೆಗೆ ನೀರು ಹರಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಒತ್ತಡ ಹಾಕುತ್ತೇನೆ: ‘₹ 50 ಲಕ್ಷ ವೆಚ್ಚದಲ್ಲಿ ಕೋಲಾರಮ್ಮ ಕೆರೆ ಅಭಿವೃದ್ಧಿಪಡಿಸಲಾಗಿದೆ. ಕೋಲಾರಮ್ಮ ಕೆರೆ ತುಂಬಿದರೆ ಸುತ್ತಮುತ್ತಲಿನ ಕೊಳವೆ ಬಾವಿಗಳಲ್ಲಿ ಜಲ ಮರಪೂರಣವಾಗಿ ರೈತರಿಗೆ ಅನುಕೂಲವಾಗುತ್ತದೆ. ಕೆ.ಸಿ ವ್ಯಾಲಿಯಿಂದ ಜಿಲ್ಲೆಗೆ ಸದ್ಯ 280 ಎಂಎಲ್‌ಡಿ ನೀರು ಹರಿದು ಬರುತ್ತಿದ್ದು, ಇದನ್ನು 440 ಎಂಎಲ್‌ಡಿ ಹೆಚ್ಚಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕುತ್ತೇನೆ’ ಎಂದರು.

‘ಕೊರೊನಾ ಸೋಂಕಿನ ಕಾರಣಕ್ಕೆ ಕೇಂದ್ರ ಸರ್ಕಾರ ಲಾಕ್‌ಡೌನ್‌ ಜಾರಿಗೊಳಿಸಿರುವುದರಿಂದ ಬಡವರು ಹಾಗೂ ಕೂಲಿ ಕಾರ್ಮಿಕರ ಜೀವನಕ್ಕೆ ಸ್ವಲ್ಪ ಕಷ್ಟವಾಗಿದೆ. ಹೀಗಾಗಿ ಬಡ ಜನರು ಹಾಗೂ ಕಾರ್ಮಿಕರಿಗೆ ಆಹಾರ ಧಾನ್ಯ ಒದಗಿಸಲಾಗುತ್ತಿದೆ. ಅಲ್ಲದೇ, ಸುಮಾರು 1 ಸಾವಿರ ಮಂದಿಗೆ ಪ್ರತಿನಿತ್ಯ 2 ಹೊತ್ತು ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದು ವಿವರಿಸಿದರು.

ಗಡಿಯಲ್ಲಿ ಕಟ್ಟೆಚ್ಚರ: ‘ಜಿಲ್ಲಾಡಳಿತವು ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಿರುವುದರಿಂದ ಜಿಲ್ಲೆಯಲ್ಲಿ ಈವರೆಗೆ ಕೊರೊನಾ ಸೋಂಕು ಪತ್ತೆಯಾಗಿಲ್ಲ. ಜಿಲ್ಲೆಯು ಹಸಿರು ವಲಯದಲ್ಲಿರುವುದು ಇಲ್ಲಿನ ಜನರ ಪುಣ್ಯ. ಪಕ್ಕದ ತಮಿಳುನಾಡು, ಆಂಧ್ರಪ್ರದೇಶ ರಾಜ್ಯದಲ್ಲಿ ಕೊರೊನಾ ಸೋಂಕಿನ ಹಾವಳಿ ಹೆಚ್ಚಿದ್ದರೂ ಜಿಲ್ಲೆಗೆ ಸೋಂಕು ಹರಡಂತೆ ಎಚ್ಚರ ವಹಿಸಲಾಗಿದೆ’ ಎಂದು ಹೇಳಿದರು.

ನಗರಸಭೆ ಆಯುಕ್ತ ಶ್ರೀಕಾಂತ್‌, ಕಾರ್ಯ ನಿರ್ವಾಹಕ ಎಂಜಿನಿಯರ್‌ ರಾಮಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT