ಕೋಲಾರ: ಸೋಮೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ

ಕೋಲಾರ: ನಗರದ ಕೋಟೆ ಬಡಾವಣೆಯಲ್ಲಿನ ಶ್ರೀ ಸೋಮೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವವು ಶುಕ್ರವಾರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.
ಬ್ರಹ್ಮ ರಥೋತ್ಸವದ ಅಂಗವಾಗಿ ಸೋಮೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ, ಹೂವಿನ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ ರಥಶಾಂತಿ, ರಥಬಲಿ, ಆಚಾರ್ಯ ಪೂಜೆ ನಡೆದು ಮಂಗಳ ವಾದ್ಯಗಳೊಂದಿಗೆ ಉತ್ಸವ ಮೂರ್ತಿಯನ್ನು ತರಲಾಯಿತು. ನಂತರ ಸಂಸದ ಎಸ್.ಮುನಿಸ್ವಾಮಿ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು.
ಬೃಹತ್ ಹೂವಿನ ಹಾರಗಳಿಂದ ಅಲಂಕೃತವಾಗಿದ್ದ ರಥ ಹೊರಡುತ್ತಿದ್ದಂತೆ ಭಕ್ತರು ಸೋಮೇಶ್ವರ ಸ್ವಾಮಿಯ ಸ್ಮರಣೆಯೊಂದಿಗೆ ಹಣ್ಣು ದವಳ ಎಲೆ ಅರ್ಪಿಸಿ ಕೃತಾರ್ಥರಾದರು. ಜಿಲ್ಲೆಯ ವಿವಿಧೆಡೆಯಿಂದ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು. ದೇವಾಲಯದ ಮುಂಭಾಗದಿಂದ ಆರಂಭವಾದ ಬ್ರಹ್ಮ ರಥೋತ್ಸವದಲ್ಲಿ ಭಕ್ತರು ಕಾಲೇಜು ವೃತ್ತದವರೆಗೆ ತೇರು ಎಳೆದರು. ದೇವರನ್ನು ಹೊತ್ತ ತೇರು ಶಂಕರ ಮಠ ಮುಂಭಾಗದ ರಸ್ತೆ, ಕಾಲೇಜು ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.
ಹಿಂದಿನ ವರ್ಷದ ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಸರಳವಾಗಿ ಬ್ರಹ್ಮ ರಥೋತ್ಸವ ಆಚರಿಸಿ ಚಿಕ್ಕ ತೇರನ್ನು ಬಳಸಲಾಗಿತ್ತು. ಈ ಬಾರಿ ಅದ್ಧೂರಿಯಾಗಿ ದೊಡ್ಡ ತೇರಿನಲ್ಲಿ ರಥೋತ್ಸವ ನಡೆಸಲಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.