ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಪಿಬಿ ಸಂಗೀತ ಲೋಕದ ಮೇರು ಪ್ರತಿಭೆ

ಗಾನ ಗಾರುಡಿಗನಿಗೆ ಜಿಲ್ಲೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ
Last Updated 25 ಸೆಪ್ಟೆಂಬರ್ 2020, 16:01 IST
ಅಕ್ಷರ ಗಾತ್ರ

ಕೋಲಾರ: ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಸ್ಮರಣಾರ್ಥ ವಿವಿಧ ಸಂಘಟನೆಗಳು ಇಲ್ಲಿ ಶುಕ್ರವಾರ ಶ್ರದ್ಧಾಂಜಲಿ ಸಭೆ ನಡೆಸಿ ಗಾನ ಗಾರುಡಿಗನಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದವು.

‘ಬಾಲಸುಬ್ರಹಣ್ಯಂ ಅವರು 70ರ ದಶಕದಿಂದ 21 ಶತಮಾನದವರೆಗೆ ಸಾವಿರಾರು ಹಾಡು ಹಾಡಿ ಎಲ್ಲರ ಮನಗೆದ್ದವರು. ಎಲ್ಲಾ ಭಾಷೆಗಳಿಗೂ ಸಾರ್ವಭೌಮರಾಗಿ ಮೆರೆದವರು. ಕನ್ನಡ, ಹಿಂದಿ, ತೆಲುಗು, ತಮಿಳು ಮಲೆಯಾಳಂ ಹೀಗೆ ಬಹುಭಾಷಾ ಸಂಗೀತ ವಿದ್ವಾಂಸರಾಗಿ ಹೆಸರು ಮಾಡಿದವರು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್ ಸ್ಮರಿಸಿದರು.

‘ಗಾಯನದಿಂದಲೇ ಭಾರತದ ಸಂಗೀತ ರಸಿಕರನ್ನು ಮಂತ್ರಮುಗ್ಧಗೊಳಿಸಿದ್ದ ಬಾಲಸುಬ್ರಹ್ಮಣ್ಯಂ ಅವರ ಕಂಠಕ್ಕೆ ಸಾಟಿಯಿಲ್ಲ. ಅವರು ಗಾಯನದ ಜತೆಗೆ ನಟನೆಯಲ್ಲೂ ಛಾಪು ಮೂಡಿಸಿದ್ದರು. ಅವರ ಗಾಯನ ಮೋಡಿಗೆ ಮಾರು ಹೋಗದ ಸಂಗೀತ ರಸಿಕರೇ ಇಲ್ಲ. ಅವರ ಅಭಿನಯಕ್ಕೂ ಮರುಳಾಗದ ಕಲಾಭಿಮಾನಿಗಳಿಲ್ಲ’ ಎಂದು ಬಣ್ಣಿಸಿದರು.

‘ಕನ್ನಡ, ತಮಿಳು ಹಾಗೂ ತೆಲುಗು ಚಿತ್ರರಂಗದ ಹಲವು ಮೇರು ನಟರೊಂದಿಗೆ ನಟಿಸಿದ ಕೀರ್ತಿ ಬಾಲಸುಬ್ರಹ್ಮಣ್ಯಂ ಅವರಿಗೆ ಸಲ್ಲುತ್ತದೆ. ಸರಳ ಸಜ್ಜನಿಕೆಯ ಅವರು ಭಾರತೀಯ ಸಿನಿಮಾ ಸಂಗೀತ ಲೋಕದ ಮೇರು ಪ್ರತಿಭೆ’ ಎಂದು ಜಿಲ್ಲಾ ದಾಸ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾರಾಯಣಸ್ವಾಮಿ ಗುಣಗಾನ ಮಾಡಿದರು.

‘ಗಾಯನದ ಮೂಲಕ ವಿಶ್ವದಲ್ಲೆಡೆ ಹೆಸರು ಮಾಡಿದ್ದ ಬಾಲಸುಬ್ರಹ್ಮಣ್ಯಂ ಅವರು ಭಾರತೀಯರ ಮನೆ ಮನ ತಣಿಸಿದ ಗಾನ ಕೋಗಿಲೆ. ಸುಮಾರು ಒಂದು ದಶಕದ ಕಾಲ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಮೂಲಕ ಕರ್ನಾಟಕದ ಬಾಲ ಪ್ರತಿಭೆಗಳನ್ನು ಬೆಳೆಸಿ ಉಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದು ಕವಿ ಶರಣಪ್ಪ ಗಬ್ಬೂರ್‌ ಅಭಿಪ್ರಾಯಪಟ್ಟರು.

ಕೋಟ್ಯಂತರ ಅಭಿಮಾನಿಗಳು: ‘ಆಂಧ್ರಪ್ರದೇಶದ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ ಬಾಲಸುಬ್ರಹ್ಮಣ್ಯಂ ಅವರು ತಂದೆಯಿಂದ ಸ್ಫೂರ್ತಿದಾಯಕವಾಗಿ ಶಾಸ್ತ್ರೀಯ ಸಂಗೀತ ಕಲಿತರು. ಅವರಿಗೆ ಜಾಗತಿಕವಾಗಿ ಕೋಟ್ಯಂತರ ಮಂದಿ ಅಭಿಮಾನಿಗಳಿದ್ದಾರೆ’ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಪಿ.ನಾರಾಯಣಪ್ಪ ಹೇಳಿದರು.

ಸಿರಿ ಸಾಹಿತ್ಯ ಪರಿಷತ್‌ ಅಧ್ಯಕ್ಷ ಟಿ.ಸುಬ್ಬರಾಮಯ್ಯ, ಉಪನ್ಯಾಸಕ ಸೋಮಶೇಖರ್, ಜಿಲ್ಲಾ ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಖಜಾಂಚಿ ಶರಣಪ್ಪ, ಉಪಾಧ್ಯಕ್ಷ ಎಸ್.ಸುರೇಶ್‌ಕುಮಾರ್ ಪಾಲ್ಗೊಂಡರು.

ವಿಶ್ವ ದಾಖಲೆ: ಜಯ ಕರ್ನಾಟಕ ಸಂಘಟನೆ ಸದಸ್ಯರು ಬಾಲಸುಬ್ರಹ್ಮಣ್ಯಂ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
‘ಎಂಜಿನಿಯರ್‌ ಆಗಬೇಕೆಂದು ಸಂಕಲ್ಪ ಮಾಡಿದ್ದ ಅವರು ಗಾಯಕರಾಗಿ ಬೆಳೆದರು. ಬಾಲಸುಬ್ರಹ್ಮಣ್ಯಂ ಅವರು ದಕ್ಷಿಣ ಹಾಗೂ ಉತ್ತರ ಭಾರತದ 15 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡು ಹಾಡಿರುವುದು ನಿಜಕ್ಕೂ ವಿಶ್ವ ದಾಖಲೆ. ಚಿತ್ರರಂಗದಲ್ಲಿ ಅವರ ಸೇವೆ ಅವಿಸ್ಮರಣೀಯ’ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಆರ್.ತ್ಯಾಗರಾಜ್ ಸ್ಮರಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಎಂ.ಎನ್.ಮಂಜುನಾಥ್, ಕಾರ್ಯಾಧ್ಯಕ್ಷ ಎಸ್.ಸುಧಾಕರ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಪ್ರಕಾಶ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾವತಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT