ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಕೃಷ್ಣ ಜನ್ಮಾಷ್ಟಮಿ: ಧರೆಗಿಳಿದ ನಂದಗೋಕುಲ

ನೋಡುಗರ ಮನಸೊರೆಗೊಂಡ ಕೃಷ್ಣ– ರುಕ್ಮಿಣಿ ವೇಷಧಾರಿ ಮಕ್ಕಳು
Last Updated 23 ಆಗಸ್ಟ್ 2019, 15:20 IST
ಅಕ್ಷರ ಗಾತ್ರ

ಕೋಲಾರ: ನಗರದ ಶಾಲೆಗಳು ಹಾಗೂ ದೇವಾಲಯಗಳಲ್ಲಿ ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಚಿನ್ಮಯ ಶಾಲೆಯಲ್ಲಿ ಕೃಷ್ಣ, ರುಕ್ಮಿಣಿ ಹಾಗೂ ರಾಧೆ ವೇಷಧಾರಿಗಳ ಸ್ವರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಕೃಷ್ಣ ಹಾಗೂ ರಾಧೆ ವೇಷಧಾರಿಗಳಾಗಿದ್ದ ಪುಟಾಣಿಗಳ ಸಂಭ್ರಮದಿಂದ ಶಾಲೆಯು ನಂದಗೋಕುಲವಾಯಿತು. 100ಕ್ಕೂ ಹೆಚ್ಚು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಮನ ಸೆಳೆದರು.

ಕಾರ್ಯಕ್ರಮ ಉದ್ಘಾಟಿಸಿದ ಶಿಕ್ಷಣ ಸಂಯೋಜಕ ಎಸ್.ರಾಘವೇಂದ್ರ ಅವರು ಶ್ರೀಕೃಷ್ಣನ ಜನನ ವೃತ್ತಾಂತ, ಜೀವನ, ದುಷ್ಟರ ಸಂಹಾರ ಮತ್ತು ಭಗವದ್ಗೀತೆಯ ಪ್ರಾಮುಖ್ಯತೆ ವಿವರಿಸಿದರು.

‘ಭಗವದ್ಗೀತೆ ಮೂಲಕ ಇಡೀ ವಿಶ್ವಕ್ಕೆ ಸಂದೇಶ ಸಾರಿದ ಶ್ರೀಕೃಷ್ಣ ದೇವತೆಗಳಲ್ಲೇ ಮೊದಲ ದೇವರಾಗಿದ್ದಾನೆ.ತನ್ನಲ್ಲಿ ವಿಶ್ವರೂಪ ಅಡಗಿಸಿಕೊಂಡು ಸಾಮಾನ್ಯರಲ್ಲಿ ಸಾಮಾನ್ಯನಾಗಿ ಯಾದವರೊಂದಿಗೆ ಆಡುತ್ತಾ ಕಾಲ ಕಳೆದ ಕಥೆ ಕೇಳಲು ಬಹಳ ಚೆಂದ. ಮಕ್ಕಳು ದೇಶದ ಸಂಸ್ಕೃತಿಯ ಕೇಂದ್ರ ಬಿಂದುವಾಗಿದ್ದು, ಪೋಷಕರು ಅವರಲ್ಲಿ ಹೊಸತನ ಮೂಡಿಸಬೇಕು. ದೇಶದ ಸನಾತನ ಪರಂಪರೆಯ ಅರಿವು ಮೂಡಿಸಬೇಕು. ವಿದೇಶಿ ಸಂಸ್ಕೃತಿಗೆ ಮಾರು ಹೋಗದಂತೆ ಎಚ್ಚರ ವಹಿಸಬೇಕು’ ಎಂದು ಕಿವಿಮಾತು ಹೇಳಿದರು.

ಹೋರಾಟ ಪ್ರಸ್ತುತ: ‘ಸಂಸ್ಥೆಯು ಸನಾತನ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಭಗವದ್ಗೀತೆ ಸ್ಪರ್ಧೆ ನಡೆಸುತ್ತಿದೆ. ಜಿಲ್ಲೆಯ ಸಾವಿರಾರು ಶಾಲಾ ಮಕ್ಕಳು ಭಗವದ್ಗೀತೆ ಕಲಿಯುವಂತೆ ಮಾಡಲಾಗಿದೆ. ದುಷ್ಟರ ಸಂಹಾರಕ್ಕಾಗಿ ಜನ್ಮವೆತ್ತಿದ ಕೃಷ್ಣನ ಲೀಲೆಗಳ ಅಧ್ಯಯನ ಅಗತ್ಯ. ಮಹಾಭಾರತದ ಅನೇಕ ಪ್ರಸಂಗಗಳು ಹಾಗೂ ಧರ್ಮ ಸ್ಥಾಪನೆಗೆ ನಡೆಸಿದ ಹೋರಾಟ ಇಂದಿಗೂ ಪ್ರಸ್ತುತ’ ಎಂದು ಚಿನ್ಮಯ ವಿದ್ಯಾಲಯದ ಅಧ್ಯಕ್ಷ ಪಿ.ಚಂದ್ರಪ್ರಕಾಶ್ ತಿಳಿಸಿದರು.

ಶಾಲಾ ಆವರಣದ ಶ್ರೀಕೃಷ್ಣ ಮಂದಿರದಲ್ಲಿ ಪೂಜೆ ನಡೆಯಿತು. ದೇವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬಾಲಕೃಷ್ಣನನ್ನು ವಸುದೇವ ನದಿ ದಾಟಲು ವಾಸುಕಿ ಹಾವಿನ ಹೆಡೆಯ ನೆರಳಲ್ಲಿ ಹೊತ್ತು ತಂದಂತೆ ಬಾಲ ಕೃಷ್ಣ ವೇಷಧಾರಿಯನ್ನು ಶಾಲೆ ಶಿಕ್ಷಕ ರಾಮಕೃಷ್ಣಭಟ್ಟರು ಮೆರವಣಿಗೆಯಲ್ಲಿ ಹೊತ್ತು ತಂದು ಗಮನ ಸೆಳೆದರು. ಮಕ್ಕಳು ನಡೆಸಿಕೊಟ್ಟ ಶ್ರೀಕೃಷ್ಣನ ನೃತ್ಯ, ಗಾಯನ ರೂಪಕವು ನೋಡುಗರ ಮನಸೂರೆಗೊಂಡಿತು.

ಕಲ್ಯಾಣೋತ್ಸವ: ನಗರದ ಕಿಲಾರಿಪೇಟೆಯ ರುಕ್ಮಿಣಿ ಸತ್ಯಭಾಮ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಮುತ್ತೈದೆಯರಿಗೆ ಬಳೆ ತೊಡಿಸುವುದು, ದೀಪೋತ್ಸವ ಸೇವೆ, ಶ್ರೀಕೃಷ್ಣ ಕೋಟಿ ಭಜನೆ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮ ನಡೆದವು. ಕಿಲಾರಿಪೇಟೆ ಭಕ್ತರು ಮಂಗಳವಾದ್ಯ ಹಾಗೂ ಮೇಳದೊಂದಿಗೆ ಕಲ್ಯಾಣೋತ್ಸವ ನಡೆಸಿದರು.

ದೇವರ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ದೇವಾಲಯವನ್ನು ಹೂವುಗಳಿಂದ ಸಿಂಗರಿಸಲಾಗಿತ್ತು. ಭಕ್ತರು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು. ಪ್ರಮುಖ ರಸ್ತೆಗಳಲ್ಲಿ ದೇವರ ಪುಷ್ಪ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಡೊಳ್ಳು ಕುಣಿತ, ವೀರಗಾಸೆ, ತಮಟೆ ಕಲಾವಿದರು ಮೆರವಣಿಗೆ ಮೆರುಗು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT