ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರ ಪ್ರಿಯ ಈ ‘ಸಕ್ಕರೆ ಗುಟ್ಲ’

ದೊಡ್ಡ ಗೋಲಿ ಗಾತ್ರದ ಮಾವಿಗೆ ಮಾರುಹೋಗದವರಿಲ್ಲ
Last Updated 17 ಜೂನ್ 2019, 16:17 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಸ್ಥಳೀಯವಾಗಿ ‘ಸಕ್ಕರೆ ಗುಟ್ಲ’ ಎಂದು ಕರೆಯಲ್ಪಡುವ ನಾಟಿ ತಳಿಯ ಮಾವಿನ ಕಾಯಿಗೆ ಉತ್ತಮ ಬೆಲೆ ಬಂದಿದೆ. ಇದರ ರುಚಿಗೆ ಮಾರುಹೋದ ಮಾವು ಪ್ರಿಯರು ಮಾರುಕಟ್ಟೆಯಲ್ಲಿ ಹುಡುಕಿ ಖರೀದಿಸುತ್ತಿದ್ದಾರೆ.

ದೊಡ್ಡ ಗೋಲಿ ಗಾತ್ರದ ಹಾಗೂ ತೆಳುವಾದ ಸಿಪ್ಪೆಯನ್ನು ಹೊಂದಿರುವ ಸಕ್ಕರೆ ಗುಟ್ಲ, ಒಳಗೆ ವಾಟೆ ಒಳಗೊಂಡಂತೆ ಎಲ್ಲವೂ ನಾರುಮಯವಾಗಿರುತ್ತದೆ. ಹಣ್ಣನ್ನು ಚಪ್ಪರಿಸಿ ತಿನ್ನುವುದು ರೂಢಿ. ಅದರಲ್ಲೂ ಮಕ್ಕಳಿಗೆ ಈ ತಳಿಯ ಹಣ್ಣೆಂದರೆ ಪಂಚ ಪ್ರಾಣ.

ಇದು ಹಳೆಯ ತಳಿ. ಹಿಂದೆ ವಿಶಾಲವಾದ ಮಾವಿನ ತೋಟಗಳಲ್ಲಿ ಬೆರಳೆಣಿಕೆಯಷ್ಟು ಮರಗಳು ಕಾಣಿಸುತ್ತಿದ್ದವು. ಆದರೆ ಬೇಡಿಕೆ ಇರಲಿಲ್ಲ. ಸುಗ್ಗಿ ಕಾಲದಲ್ಲಿ ಬೇರೆಲ್ಲ ಜಾತಿಯ ಮಾವಿನ ಕಾಯಿಯನ್ನು ಕಿತ್ತು ಮಾರುಕಟ್ಟೆಗೆ ಹಾಕಿದರೂ, ಸಕ್ಕರೆ ಗುಟ್ಲವನ್ನು ಮಾತ್ರ ಕೀಳದೆ ಹಾಗೆಯೇ ಬಿಡುತ್ತಿದ್ದರು. ಅವು ಮಕ್ಕಳ ಹಾಗೂ ಕೋತಿಗಳ ಪಾಲಾಗುತ್ತಿದ್ದವು.

ಈ ತಳಿಯ ಮಾವನ್ನು ಉದ್ದೇಶ ಪೂರ್ವಕವಾಗಿ ಬೆಳೆಯುತ್ತಿರಲಿಲ್ಲ. ಆಕಸ್ಮಿಕವಾಗಿ ಇಂಥ ಗಿಡಗಳು ಬೆಳೆದು ಮರವಾಗುತ್ತಿದ್ದವು. ಬೆಳೆದ ಮರವನ್ನು ತೆಗೆಯಲು ಮನಸ್ಸು ಬಾರದೆ ಉಳಿಸಿಕೊಂಡು ಬರುತ್ತಿದ್ದರು. ಆದರೆ ಈಗ ಅದಕ್ಕೆ ಬಂಗಾರದ ಬೆಲೆ ಬಂದಿದೆ. ಕೆ.ಜಿ.ಯೊಂದಕ್ಕೆ ₹ 50 ರಿಂದ ₹ 60 ರಂತೆ ಮಾರಾಟವಾಗುತ್ತಿದೆ. ಕೆಲವು ಸಲ ಒಂದು ಕೆಜಿ ಹಣ್ಣಿನ ಬೆಲೆ ₹ 100 ರ ಗಡಿ ದಾಟಿರುವುದೂ ಉಂಟು.

ತಾಲ್ಲೂಕಿನಲ್ಲಿ ವಿರಳವಾಗಿ ಕಂಡುಬರುವ ಸಕ್ಕೆರೆ ಗುಟ್ಲ, ಗಿಡದ ತುಂಬಾ ಕಾಯಿ ಬಿಡುತ್ತದೆ. ಗಾತ್ರ ಚಿಕ್ಕದಾದರೂ ಗೊಂಚಲು, ಗೊಂಚಲು ಬಿಡುತ್ತದೆ. ಗೋಲಿಯಾಕಾರದ ಕಾಯಿಗಳು ಹಣ್ಣಾದರೆ ಘಮಲು ಹರಡುತ್ತದೆ. ಸ್ವಲ್ಪ ಸಿಹಿ, ಸ್ವಲ್ಪ ಹುಳಿ ರುಚಿಗೆ ಮಾರುಹೋಗದವರಿಲ್ಲ. ಈ ನಾಟಿ ತಳಿಯ ಮಾವು, ಬದಲಾದ ಪರಿಸ್ಥಿತಿಯಲ್ಲಿ ತನ್ನದೇ ಆದ ಬೇಡಿಕೆ ಪಡೆದುಕೊಂಡಿದೆ.

‘ಮಾರುಕಟ್ಟೆಯಲ್ಲಿ ಸಕ್ಕರೆ ಗುಟ್ಲ ಮಾವಿಗೆ ಒಳ್ಳೆ ಬೆಲೆ ಇದೆ. ಮಕ್ಕಳ ಬಯಕೆ ತೀರಿಸಲು ಹಿರಿಯರು ಖರೀದಿಸಿ ಕೊಂಡೊಯ್ಯುತ್ತಾರೆ. ಮಕ್ಕಳೊಂದಿಗೆ ಹಿರಿಯರೂ ಚಪ್ಪರಿಸಿ ಖುಷಿ ಪಡುತ್ತಾರೆ’ ಎಂದು ಪನಸಮಾಕನಹಳ್ಳಿ ಗ್ರಾಮದ ಮಾವು ಬೆಳೆಗಾರ ವೆಂಕಟೇಶಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕಿನಾದ್ಯಂತ ಶತಮಾನಗಳಷ್ಟು ಹಳೆಯದಾದ ಹುಳಿ ಮಾವಿನ ಮರಗಳು ಇನ್ನೂ ಜೀವಂತವಾಗಿವೆ. ಆದರೆ ಆ ಮರಗಳ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಯಾವುದೇ ರಕ್ಷಣಾ ಕಾರ್ಯ ಕೈಗೊಳ್ಳದಿದ್ದರೂ, ಮರಗಳಲ್ಲಿ ಫಸಲು ಬಂದಿದೆ. ಕಾಯಿಗಳು ಹಣ್ಣಾಗಿ ಉದುರುತ್ತಿವೆ. ಆದರೂ ಅವುಗಳ ಕಡೆ ಕಣ್ಣೆತ್ತಿ ನೋಡುವವರಿಲ್ಲ.

ಸಕ್ಕರೆ ಗುಟ್ಲ ಎಂದರೆ ಬಾಯಲ್ಲಿ ನೀರೂರಿಸಿಕೊಂಡು ಖರೀದಿಸುತ್ತಿದ್ದಾರೆ. ಆದರೆ ಬೇಡಿಕೆಗೆ ಅನುಗುಣವಾಗಿ ಸರಕು ಸಿಗುತ್ತಿಲ್ಲ. ಅದರಿಂದಾಗಿಯೇ ಬೆಲೆ ಗಗನಕ್ಕೇರಿದೆ. ಆದರೂ ಗುಟ್ಲ ಪ್ರಿಯರು ಖರೀದಿಸಿ ಸವಿಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT