ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪುರ: ಮಾವು ವಹಿವಾಟಿಗೆ ಹಸಿರು ನಿಶಾನೆ

ಶ್ರೀನಿವಾಸಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮುನ್ನೆಚ್ಚರಿಕೆ ಕ್ರಮದ ಭರವಸೆ
Last Updated 20 ಮೇ 2020, 16:37 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೊರೊನಾ ವೈರಾಣು ಹರಡದಂತೆ ಮುನ್ನೆಚ್ಚರಿಕೆ ವಹಿಸಿ ಮಾವಿನ ವಹಿವಾಟು ನಡೆಸಬಹುದು, ಆದರೆ ಯಾವುದೇ ಹಂತದಲ್ಲಿ ಸೋಂಕು ಕಾಣಿಸಿಕೊಂಡಲ್ಲಿ ಮಾರುಕಟ್ಟೆಯನ್ನು ಸೀಲ್‌ಡೌನ್‌ ಮಾಡಲಾಗುವುದು ಎಂದು ಉಪ ವಿಭಾಗಾಧಿಕಾರಿ ವಿ.ಸೋಮಶೇಖರ್‌ ಹೇಳಿದರು.

ಪಟ್ಟಣದ ಎಪಿಎಂಸಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಮಾವಿನ ಕಾಯಿ ಮಂಡಿ ಮಾಲೀಕರು ಹಾಗೂ ವರ್ತಕರ ಸಭೆಯಲ್ಲಿ ಮಾತನಾಡಿದರು.

ಮಂಡಿ ಮಾಲೀಕರು, ವರ್ತಕರು ಹಾಗೂ ಎಪಿಎಂಸಿ ಸಿಬ್ಬಂದಿ ನಿಯಮಾನುಸಾರ ವಹಿವಾಟು ಮಾಡುವುದರ ಮೂಲಕ ಮಾವು ಬೆಳೆಗಾರರ ಹಿತ ಕಾಯಬೇಕು ಎಂದು ಹೇಳಿದರು.

ತಹಶೀಲ್ದಾರ್‌ ಎಸ್.ಎಂ.ಶ್ರೀನಿವಾಸ್‌ ಮಾತನಾಡಿ, ಎಪಿಎಂಸಿ ಪ್ರಾಂಗಣದಲ್ಲಿ ಮಾವಿನ ಕಾಯಿ ವಹಿವಾಟು ನಡೆಯಲು ಅಗತ್ಯವಾದ ಎಲ್ಲ ಕ್ರಮ ಕೈಗೊಳ್ಳಲಾಗುವುದು. ಪ್ರಾಂಗಣ ಹಾಗೂ ಪ್ರಾಂಗಣದ ಹೊರಗೆ ಸುಮಾರು 120 ಮಂಡಿಗಳು ಪ್ರಾರಂಭವಾಗುವ ಸಂಭವ ಇದೆ. ಪ್ರತಿ ಮಂಡಿಯಲ್ಲೂ ನಿಯಮಾನುಸಾರ ವ್ಯವಹಾರ ನಡೆಯುವುದನ್ನು ನೋಡಿಕೊಳ್ಳಲು ಒಬ್ಬ ವಿಶೇಷ ಅಧಿಕಾರಿಯನ್ನು ನೇಮಿಸಲಾಗುವುದು ಎಂದು ಹೇಳಿದರು.

ಸರ್ಕಲ್‌ ಇನ್‌ಸ್ಪೆಕ್ಟರ್‌ ರಾಘವೇಂದ್ರ ಪ್ರಕಾಶ್‌ ಮಾತನಾಡಿ, ಒಂದು ವೇಳೆ ಸೀಲ್‌ಡೌನ್‌ ಮಾಡುವ ಸಂದರ್ಭ ಬಂದರೆ, ಮಾವು ಬೆಳೆಗಾರರಿಗೆ ನಷ್ಟ ಉಂಟಾಗುತ್ತದೆ. ಆಗ ವರ್ತಕರು ರೈತರಿಗೆ ನಷ್ಟ ಪರಿಹಾರ ನೀಡಲು ಸಿದ್ಧರಿದ್ದಾರಾ?’ ಎಂದು ಪ್ರಶ್ನಿಸಿದರು. ಈ ಹಂತದಲ್ಲಿ, ಮಾರುಕಟ್ಟೆ ತೆರೆಯುವಂತೆ ಒತ್ತಾಯಿಸುತ್ತಿದ್ದ ವರ್ತಕರು ಮೌನ ವಹಿಸಿದ್ದರು.

ಎಪಿಎಂಸಿ ಅಧ್ಯಕ್ಷ ಎನ್‌.ರಾಜೇಂದ್ರ ಪ್ರಸಾದ್‌ ಮಾತನಾಡಿ, ಮಾರುಕಟ್ಟೆ ಸಮಿತಿ ಮೂಲ ಸೌಕರ್ಯ ಕಲ್ಪಿಸಲು ಬದ್ಧವಾಗಿದೆ. ಮಾರುಕಟ್ಟೆಯಲ್ಲಿ ಕುಡಿಯುವ ನೀರು, ಶೌಚಾಲಯ, ವಿದ್ಯುತ್‌ ಸೌಕರ್ಯ ಕಲ್ಪಿಸಲಾಗುವುದು. ಸೋಂಕು ನಿವಾರಕ ಔಷಧಿ ಸಿಂಪಡಣೆ ಸುರಂಗದ ಮೂಲಕ ಪ್ರವೇಶ ನೀಡಲಾಗುವುದು. ಮಾರುಕಟ್ಟೆಗೆ ಬರುವ ವಾಹನಗಳಿಗೆ ವೈರಾಣು ಸೋಂಕು ನಿವಾರಕ ಔಷಧ
ಸಿಂಪಡಣೆ ಮಾಡಲಾಗುವುದು. ಹೊರಗಡೆಯಿಂದ ಬರುವ ಲಾರಿ ಚಾಲಕರು ಹಾಗೂ ಕ್ಲೀನರ್‌ಗಳ ಆರೋಗ್ಯ ತಪಾಸಣೆ ನಡೆಸಲಾಗುವುದು. ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸಲಾಗುವುದು ಹಾಗೂ ಊಟ ಒದಗಿಸಲಾಗುವುದು ಎಂದು ಹೇಳಿದರು.

ವರ್ತಕರ ಸಮಿತಿ ಸದಸ್ಯರು ಮಾವಿನ ವಹಿವಾಟು ನಡೆಯುವ ಸಂದರ್ಭದಲ್ಲಿ ಅನುಸರಿಸುವ ಕ್ರಮಗಳ ಕುರಿತು ಮಾಹಿತಿ ನೀಡಿತು. ಮಾರುಕಟ್ಟೆಯಲ್ಲಿ ಅಂತರ ಕಾಯ್ದುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್‌.ಆನಂದ್‌, ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಶ್ರೀನಿವಾಸ್‌, ಪುರಸಭೆ ಮುಖ್ಯಾಧಿಕಾರಿ ಎನ್‌.ಮೋಹನ್‌ ಕುಮಾರ್‌, ಎಪಿಎಂಸಿ ಕಾರ್ಯದರ್ಶಿ ವೇಣುಗೋಪಾಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT