ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌: ಕಾಂಗ್ರೆಸ್‌ ಆಕ್ರೋಶ, ಬಿಜೆಪಿ ಸಂಭ್ರಮ

ಶ್ರೀನಿವಾಸಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ: ಪುನಃ ಗೊಂದಲ
Last Updated 16 ಫೆಬ್ರುವರಿ 2021, 2:59 IST
ಅಕ್ಷರ ಗಾತ್ರ

ಕೆಜಿಎಫ್‌: ತಾಲ್ಲೂಕಿನ ಶ್ರೀನಿವಾಸಸಂದ್ರ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಸೋಮವಾರ ಪುನಃ ಗೊಂದಲ ಉಂಟಾಯಿತು. ಚುನಾವಣೆ ಪ್ರಕ್ರಿಯೆ ನಡೆಯದೆ, ಹಿಂದೆ ನಡೆದ ಚುನಾವಣೆಯ ಪ್ರಕಾರವೇ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯನ್ನು ಚುನಾವಣಾಧಿಕಾರಿ ಪ್ರಕಟಿಸಿದರು.

ಚುನಾವಣಾಧಿಕಾರಿಯ ನಡವಳಿಕೆಯನ್ನು ಕಾಂಗ್ರೆಸ್ಸಿಗರು ಪ್ರತಿಭಟಿಸಿದರು. ಆದರೆ ಚುನಾವಣಾಧಿಕಾರಿ ನ್ಯಾಯಸಮ್ಮತವಾಗಿ ನಡೆದುಕೊಂಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.

ಫೆ. 9ರಂದು ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ರಘು ಮತ್ತು ಶೋಭಾ ಶ್ರೀನಿವಾಸ್‌ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಚುನಾಯಿತರಾದರು.

‘ಚುನಾವಣೆಯಲ್ಲಿ ಅಕ್ರಮ ನಡೆದಿದೆ. ಪಾರದರ್ಶಕತೆಯಿಂದ ನಡೆದಿಲ್ಲ. ಮೂರು ಬಾರಿ ಚುನಾವಣೆ ನಡೆಸಲಾಗಿದೆ. ಮತಪತ್ರಗಳನ್ನು ಚುನಾವಣಾಧಿಕಾರಿಯೇ ಹರಿದುಹಾಕಿದ್ದಾರೆ. ಆದ್ದರಿಂದ ಪುನಃ ಚುನಾವಣೆ ನಡೆಸಬೇಕು’ ಎಂದು ಶಾಸಕಿ ಎಂ.ರೂಪಕಲಾ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಚುನಾವಣಾಧಿಕಾರಿ ಡಾ.ರಾಮು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಗೊಂದಲ ಉಂಟಾಗಿರುವುದರಿಂದ ಚುನಾವಣೆಯನ್ನು ಮುಂದಕ್ಕೆ ಹಾಕಲಾಗಿದೆ ಎಂದು ಚುನಾವಣಾಧಿಕಾರಿ ನಂತರ ಪ್ರಕಟಿಸಿದ್ದರು.

ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಹಣಾಹಣಿ ಇದ್ದ ಚುನಾವಣೆ ಸೋಮವಾರ ನಿರ್ಧಾರವಾಗಿತ್ತು. ಚುನಾವಣಾಧಿಕಾರಿ ಡಾ.ರಾಮು ಚುನಾವಣೆ ಕೇಂದ್ರವಾದ ಶ್ರೀನಿವಾಸಸಂದ್ರ ಗ್ರಾಮ ಪಂಚಾಯಿತಿಗೆ ಬಂದು, ನಡವಳಿ ದಾಖಲಿಸಿದರು. ಈ ಹಂತದಲ್ಲಿ ಕಚೇರಿಯಲ್ಲಿದ್ದ 9 ಮಂದಿ ಬಿಜೆಪಿ ಬೆಂಬಲಿತ ಸದಸ್ಯರು ತಾವು ಹಳೇ ಚುನಾವಣೆ ಪ್ರಕ್ರಿಯೆಗೆ ಬದ್ದರಾಗಿರುವುದಾಗಿ ಪ್ರಕಟಿಸಿ ಹೊರನಡೆದರು. ಆದರೆ ಕಚೇರಿಯಲ್ಲಿದ್ದ ಕಾಂಗ್ರೆಸ್ ಬೆಂಬಲಿತ ಸದಸ್ಯರು ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಪಟ್ಟು ಹಿಡಿದು ಕುಳಿತರು. ಆದರೆ ಚುನಾವಣೆ ಅಧಿಕಾರಿ ಫೆ. 9ರಂದು ನಡೆದ ಚುನಾವಣೆಯ ಪ್ರಕ್ರಿಯೆಯಂತೆ ರಘು ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಶೋಭಾ ಶ್ರೀನಿವಾಸ್ ಆಯ್ಕೆಯಾಗಿದ್ದಾರೆ ಎಂದು ನಡವಳಿಯಲ್ಲಿ ನಮೂದಿಸಿದರು. ನಂತರ ಪೊಲೀಸರ ಬೆಂಗಾವಲಿನಲ್ಲಿ ಗ್ರಾಮದಿಂದ ತೆರಳಿದರು.

ಚುನಾವಣಾಧಿಕಾರಿಯ ನಡವಳಿಯಿಂದ ಕುಪಿತರಾದ ಶಾಸಕಿ ಎಂ.ರೂಪಕಲಾ, ಜಿಲ್ಲಾಧಿಕಾರಿಗೆ ದೂರವಾಣಿ ಮೂಲಕ ದೂರು ನೀಡಿದರು. ನಂತರ ಸ್ಥಳಕ್ಕೆ ಆಗಮಿಸಿದ ಉಪ ವಿಭಾಗಾಧಿಕಾರಿ ಸೋಮಶೇಖರ್‌ ಅವರನ್ನು ಕಾಂಗ್ರೆಸ್‌ ಕಾರ್ಯಕರ್ತರು ಅಡ್ಡಗಟ್ಟಿದರು. ‘ಚುನಾವಣೆಯಲ್ಲಿ ಮೋಸ ನಡೆದಿದೆ. ಚುನಾವಣೆ ಪ್ರಕ್ರಿಯೆ ಸರಿಯಾಗಿಲ್ಲ. ಈ ಭಾಗದಲ್ಲಿ ಗೆದ್ದಿರುವ ಬಡ ಗ್ರಾಮ ಪಂಚಾಯಿತಿ ಸದಸ್ಯರಿಗೆ ಅನ್ಯಾಯವಾಗಬಾರದು. ಚುನಾವಣೆ ವೇಳಾ ಪಟ್ಟಿಯಂತೆ ನಾಮಪತ್ರ ಸಲ್ಲಿಕೆಯಾಗಿಲ್ಲ. 9 ಸದಸ್ಯರಿಂದ ಸಹಿ ತೆಗೆದುಕೊಂಡು ಪ್ರಕ್ರಿಯೆ ಮುಗಿಸಲಾಗಿದೆ. ಜಿಲ್ಲಾಧಿಕಾರಿಗೆ ಹಿಂದೆಯೇ ದೂರು ಕೊಟ್ಟು ಚುನಾವಣಾಧಿಕಾರಿಯನ್ನು ಬದಲಾಯಿಸಿ ಎಂದು ಕೇಳಿಕೊಂಡಿದ್ದೆ. ಆದರೂ ಅದೇ ಚುನಾವಣಾಧಿಕಾರಿಯನ್ನು ಪುನಃ ನೇಮಕ ಮಾಡಲಾಗಿದೆ’ ಎಂದು ಶಾಸಕಿ ರೂಪಕಲಾ ಆಕ್ರೋಶ ವ್ಯಕ್ತಪಡಿಸಿದರು.

‘ಚುನಾವಣಾಧಿಕಾರಿ ಶಾಮೀಲಾಗಿದ್ದಾರೆ. ಬೇರೆ ಪಕ್ಷದವರ ವಾಹನದಲ್ಲಿ ಸಂಚರಿಸುತ್ತಿದ್ದಾರೆ. ನಮ್ಮ ಫೋನ್ ತೆಗೆಯುವುದಿಲ್ಲ. ಮಫ್ತಿಯಲ್ಲಿರುವ ಪೊಲೀಸರ ಫೋನ್ ತೆಗೆದು ಮಾತನಾಡುತ್ತಾರೆ. ಅವರನ್ನು ಕೂಡಲೇ ಸಸ್ಪೆಂಡ್‌ ಮಾಡಬೇಕು. ಗ್ರಾಮ ಪಂಚಾಯಿತಿ ಸದಸ್ಯರನ್ನು ನಾಯಿಗಿಂತ ಕಡೆಯಾಗಿ ಅವರು ನೋಡುತ್ತಿದ್ದಾರೆ. ಚುನಾವಣೆ ಪ್ರಕ್ರಿಯೆ ಮುಗಿಯುವ ಮುನ್ನವೇ ಚುನಾವಣೆ ಕೇಂದ್ರದಿಂದ ಪರಾರಿಯಾಗಿದ್ದಾರೆ. ಮೊಬೈಲ್ ಸ್ವಿಚ್‌ ಆಫ್ ಮಾಡಿಕೊಂಡಿದ್ದಾರೆ’ ಎಂದು ದೂರಿದರು.

ಶಾಸಕಿಯನ್ನು ಸಮಾಧಾನ ಪಡಿಸಲು ಯತ್ನಿಸಿದ ಉಪ ವಿಭಾಗಾಧಿಕಾರಿ, ಚುನಾವಣೆ ಪ್ರಕ್ರಿಯೆ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಲಾಗುವುದು. ಅದರಂತೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳುತ್ತಾರೆ ಎಂದು ಭರವಸೆ ನೀಡಿದರು. ನಂತರ ಕೋಲಾರ ಜಿಲ್ಲಾಧಿಕಾರಿಯನ್ನು ಖುದ್ದಾಗಿ ಕಂಡು ನ್ಯಾಯ ಕೋರುವುದಾಗಿ ಶಾಸಕಿ ರೂಪಕಲಾ, ಹತ್ತು ಮಂದಿ ಸದಸ್ಯರು ಕೋಲಾರಕ್ಕೆ ತೆರಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT