ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ: ಕೋಲಾರ ಜಿಲ್ಲೆಗೆ ದಾಖಲೆಯ ಫಲಿತಾಂಶ

ಜಿಲ್ಲೆಯ 5 ಬಾಲಕಿಯರು ರಾಜ್ಯಕ್ಕೆ ಪ್ರಥಮ: ಗುಣಾತ್ಮಕತೆಯಲ್ಲೂ ಗೌರವ ದಾಖಲು
Last Updated 19 ಮೇ 2022, 12:52 IST
ಅಕ್ಷರ ಗಾತ್ರ

ಕೋಲಾರ: ರಾಜ್ಯದಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಶೇ 94.53ರಷ್ಟು ದಾಖಲೆಯ ಫಲಿತಾಂಶ ಬಂದಿದೆ. ‘ಎ’ ಶ್ರೇಣಿ ಪಡೆದ ಜಿಲ್ಲೆಗಳ ಪಟ್ಟಿಯಲ್ಲಿ ಕೋಲಾರವೂ ಸ್ಥಾನ ಪಡೆದುಕೊಳ್ಳುವ ಮೂಲಕ ಘನತೆ ಹೆಚ್ಚಿದೆ.

ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದ 19,928 ವಿದ್ಯಾರ್ಥಿಗಳ ಪೈಕಿ 18,839 ಮಂದಿ ಉತ್ತೀರ್ಣರಾಗಿದ್ದಾರೆ. ಜಿಲ್ಲೆಯ 5 ವಿದ್ಯಾರ್ಥಿನಿಯರು 625ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ. 8 ಮಂದಿ 624 ಅಂಕ, 14 ಮಂದಿ 623 ಅಂಕ, 13 ಮಂದಿ 622 ಅಂಕ, 27 ಮಂದಿ 621 ಅಂಕ ಮತ್ತು 31 ಮಂದಿ 620 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.

ಕೋಲಾರದ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿಗಳಾದ ತೇಜಸ್ವಿನಿ ಚೌವಾಣ್‌ ಮತ್ತು ಎ.ಕಾರ್ಣಿಕಾ ತಲಾ 625 ಅಂಕ ಗಳಿಸಿದ್ದಾರೆ. ಉಳಿದಂತೆ ಕೋಲಾರದ ಸೈನಿಕ್ ಪಬ್ಲಿಕ್ ಶಾಲೆಯ ಶ್ರೀಲಕ್ಷ್ಮೀ, ಮುಳಬಾಗಿಲಿನ ಅಮರಜ್ಯೋತಿ ಶಾಲೆಯ ಪ್ರಿಯಾಂಕ, ಕೆಜಿಎಫ್‌ನ ಬಿಇಎಂಎಲ್ ಶಾಲೆಯ ಅಮೂಲ್ಯ 625 ಅಂಕ ಗಳಿಸಿ ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ಬಾಲಕಿಯರ ಮೇಲುಗೈ: ಪ್ರತಿ ವರ್ಷದಂತೆ ಈ ಬಾರಿಯೂ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದ 10,028 ಬಾಲಕರಲ್ಲಿ 9,367 ಮಂದಿ ಉತ್ತೀರ್ಣರಾಗಿ ಶೇ 93.41 ಫಲಿತಾಂಶ ಬಂದಿದೆ. ಪರೀಕ್ಷೆಗೆ ಕುಳಿತಿದ್ದ 9,900 ಬಾಲಕಿಯರಲ್ಲಿ 9,472 ಮಂದಿ ಉತ್ತೀರ್ಣರಾಗುವ ಮೂಲಕ ಶೇ 95.67ರಷ್ಟು ಫಲಿತಾಂಶ ಬಂದಿದೆ. ಜಿಲ್ಲೆಗೆ ಮೊದಲಿಗರಾಗಿರುವ ಎಲ್ಲಾ ಐದು ಮಂದಿಯೂ ಬಾಲಕಿಯರೇ ಆಗಿದ್ದಾರೆ.


ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ಶ್ರೀನಿವಾಸಪುರ ತಾಲ್ಲೂಕಿನ ಸೋಮಯಾಜಲಪಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಸುರೇಂದ್ರರಾಜು 620 ಅಂಕ ಗಳಿಸಿ ಸರ್ಕಾರಿ ಶಾಲೆಗಳಲ್ಲಿ ಮೊದಲಿಗರಾಗಿದ್ದಾರೆ.

ಶ್ರೀನಿವಾಸಪುರ ಪ್ರಥಮ: ಶೇ 97.19ರ ಫಲಿತಾಂಶದೊಂದಿಗೆ ಶ್ರೀನಿವಾಸಪುರ ತಾಲ್ಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಶೇ 95.82ರ ಫಲಿತಾಂಶದೊಂದಿಗೆ ಕೋಲಾರ ದ್ವಿತೀಯ, ಶೇ 94.55 ಫಲಿತಾಂಶದೊಂದಿಗೆ ಮುಳಬಾಗಿಲು ತೃತೀಯ, ಶೇ 93.79 ಫಲಿತಾಂಶದೊಂದಿಗೆ ಬಂಗಾರಪೇಟೆ 4ನೇ ಸ್ಥಾನ, ಶೇ 92.72 ಫಲಿತಾಂಶ ಸಾಧನೆಯೊಂದಿಗೆ ಕೆಜಿಎಫ್‍ ತಾಲ್ಲೂಕಿಗೆ 5ನೇ ಸ್ಥಾನ ಹಾಗೂ ಶೇ 92.39 ಫಲಿತಾಂಶದೊಂದಿಗೆ ಮಾಲೂರು ತಾಲ್ಲೂಕಿಗೆ 6ನೇ ಸ್ಥಾನ ಲಭಿಸಿದೆ.

ಗುಣಾತ್ಮಕ ಸಾಧನೆ: ಉತ್ತೀರ್ಣರಾಗಿರುವ 18,839 ವಿದ್ಯಾರ್ಥಿಗಳ ಪೈಕಿ 17,255 ಮಂದಿ ಶೇ 60ಕ್ಕಿಂತ ಹೆಚ್ಚು ಅಂಕ ಗಳಿಸುವ ಮೂಲಕ ಗುಣಾತ್ಮಕತೆಯಲ್ಲೂ ಜಿಲ್ಲೆ ಉತ್ತಮ ಸಾಧನೆ ಮಾಡಿದೆ.

ಈ ಬಾರಿಯ ಫಲಿತಾಂಶದಲ್ಲಿ ಎ+ ಶ್ರೇಣಿಯಲ್ಲಿ 3,762 ಮಂದಿ, ಎ ಶ್ರೇಣಿಯಲ್ಲಿ 5,437 ಮಂದಿ, ಬಿ+ ಶ್ರೇಣಿಯಲ್ಲಿ 4,877, ಬಿ ಶ್ರೇಣಿಯಲ್ಲಿ 3,179 ಮಂದಿ ಸಾಧನೆ ಮಾಡಿದ್ದು, ಸಿ ಶ್ರೇಣಿಯಲ್ಲಿ 1,377 ಮಂದಿ ಮಾತ್ರ ತೇರ್ಗಡೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT