ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷಾ ಕೇಂದ್ರ: ಪುನರ್‌ ಪರಿಶೀಲನೆ

ಸುಸೂತ್ರವಾಗಿ ಪರೀಕ್ಷೆ ನಡೆಸಿ: ಡಿಡಿಪಿಐ ರತ್ನಯ್ಯ ಸೂಚನೆ
Last Updated 28 ಜೂನ್ 2020, 13:14 IST
ಅಕ್ಷರ ಗಾತ್ರ

ಕೋಲಾರ: ಕೊರೊನಾ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಅವಲೋಕನೆಗಾಗಿ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಅವರು ಸೋಮವಾರ (ಜೂನ್‌ 29) ಜಿಲ್ಲೆಗೆ ಆಗಮಿಸುತ್ತಿರುವ ಕಾರಣ ಡಿಡಿಪಿಐ ಕೆ.ರತ್ನಯ್ಯ ಕೇಂದ್ರಗಳಲ್ಲಿನ ವ್ಯವಸ್ಥೆಯನ್ನು ಭಾನುವಾರ ಪುನರ್‌ ಪರಿಶೀಲಿಸಿದರು.

ತಾಲ್ಲೂಕಿನ ವೇಮಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿದ ರತ್ನಯ್ಯ, ‘ಗಣಿತ ಮತ್ತು ದ್ವಿತೀಯ ಭಾಷೆ ಪರೀಕ್ಷೆಯನ್ನು ಹೆಚ್ಚು ಮುಂಜಾಗ್ರತೆಯಿಂದ ನಡೆಸಿದ್ದೀರಿ. ಅದೇ ರೀತಿ ಮುಂದಿನ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಿ’ ಎಂದು ಸಿಬ್ಬಂದಿಗೆ ತಾಕೀತು ಮಾಡಿದರು.

ಮಕ್ಕಳು ಕೇಂದ್ರದೊಳಗೆ ಬರುವಾಗ ಮತ್ತು ಪರೀಕ್ಷೆ ಮುಗಿಸಿ ಹೊರ ಹೋಗುವಾಗ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ರಚಿಸಲಾಗಿದ್ದ ಬಾಕ್ಸ್‌ಗಳು ಮಳೆಗೆ ಹಾಳಾಗಿರುವುದನ್ನು ಗಮನಿಸಿದ ಡಿಡಿಪಿಐ ಹೊಸದಾಗಿ ಬಾಕ್ಸ್ ರಚಿಸುವಂತೆ ಸೂಚನೆ ನೀಡಿದರು.
ಕೇಂದ್ರದ ಆವರಣ, ಎಲ್ಲಾ ಕೊಠಡಿಗಳು ಮತ್ತು ಡೆಸ್ಕ್‌ಗಳಿಗೆ ಸ್ಯಾನಿಟೈಸ್ ಮಾಡಿರುವುದು ಮತ್ತು ಶೌಚಾಲಯಗಳ ಸ್ವಚ್ಛತೆಯನ್ನು ಡಿಡಿಪಿಐ ಪರಿಶೀಲಿಸಿದರು.

ಸಚಿವರ ಮೆಚ್ಚುಗೆ: ‘ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆ ಸಂಬಂಧ ನಡೆಸಲಾದ ಅಣಕು ಪರೀಕ್ಷೆ ವಿಡಿಯೋ ತುಣುಕನ್ನು ಶಿಕ್ಷಣ ಸಚಿವರು ಈಗಾಗಲೇ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ಈವರೆಗೆ ನಡೆದ ಪರೀಕ್ಷೆಗಳಲ್ಲಿ ವಹಿಸಿದ ಕ್ರಮಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ’ ಎಂದು ವಿವರಿಸಿದರು.

‘ಒಟ್ಟಾರೆ 6 ದಿನದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಉತ್ಸಾಹದಿಂದ ಕೋವಿಡ್ ಮಾರ್ಗಸೂಚಿ ಅನ್ವಯ ನಡೆಸುತ್ತಿದ್ದೇವೆ. ಇಲಾಖೆ ಸಿಬ್ಬಂದಿಯು ಪ್ರತಿ ದಿನವೂ ಮೊದಲ ದಿನದ ಪರೀಕ್ಷೆ ಎಂದೇ ಭಾವಿಸಿ ಪರೀಕ್ಷೆ ನಡೆಸುತ್ತಿದ್ದಾರೆ. ಮಕ್ಕಳಲ್ಲಿ ಯಾವುದೇ ಗೊಂದಲ, ಭಯವಿಲ್ಲ. ಎಲ್ಲರೂ ಖುಷಿಯಿಂದಲೇ ಪರೀಕ್ಷೆಗೆ ಬರುತ್ತಿದ್ದಾರೆ. ಮಕ್ಕಳ ಆತಂಕ ನಿವಾರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ಸಣ್ಣ ಪುಟ್ಟ ಲೋಪವಾಗದಂತೆ ಕ್ರಮ ವಹಿಸಿದ್ದೇವೆ. ಹತ್ತಾರು ಬಾರಿ ಸಭೆ ನಡೆಸಿ ಮಾರ್ಗದರ್ಶನದ ಜತೆಗೆ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಕ್ಕಳಿಗೂ ಜಾಗೃತಿ ಮೂಡಿಸಿದ್ದೇವೆ’ ಎಂದು ತಿಳಿಸಿದರು.

ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ದೈಹಿಕ ಶಿಕ್ಷಣ ಅಧೀಕ್ಷಕ ಮಂಜುನಾಥ್, ವೇಮಗಲ್ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಸಿ.ಎನ್.ಪ್ರದೀಪ್‌ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT