ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

Last Updated 23 ಅಕ್ಟೋಬರ್ 2020, 15:56 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಮೊದಲಿಗರಾಗಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ’ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಸಹಕಾರಿ ಒಕ್ಕೂಟವು ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಾದ ಸಾಯಿ ಮೇಘನಾ ಹಾಗೂ ನೀರಜ್ ರೆಡ್ಡಿ ಅವರನ್ನು ಸನ್ಮಾನಿಸಿ ಮಾತನಾಡಿದರು.

‘ಈ ಹಿಂದೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯನ್ನು ಕೊನೆ ಸ್ಥಾನದಿಂದ ಹುಡುಕಬೇಕಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಇದರಿಂದ ಒಟ್ಟಾರೆ ಫಲಿತಾಂಶ ಸುಧಾರಿಸಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ವಿದ್ಯಾರ್ಥಿಗಳ ಸಾಧನೆಯ ಹಿಂದೆ ಶಿಕ್ಷಣ ಇಲಾಖೆ, ಶಿಕ್ಷಕರ ಪರಿಶ್ರಮವಿದೆ. ಇಂತಹ ಸಾಧನೆ ಮಾಡಿದ ಮಕ್ಕಳನ್ನು ಗುರುತಿಸಿ ಗೌರವಿಸಿದರೆ ಇತರೆ ಮಕ್ಕಳಿಗೆ ಓದಲು ಪ್ರೇರಣೆಯಾಗುತ್ತದೆ. ಸಾಧಕ ವಿದ್ಯಾರ್ಥಿಗಳು ಇತರೆ ಮಕ್ಕಳಿಗೆ ಮಾದರಿ’ ಎಂದು ಹೇಳಿದರು.

‘ವಿದ್ಯಾರ್ಥಿನಿ ಸಾಯಿ ಮೇಘನಾ ಜಿಲ್ಲೆಯ ಮಾಲೂರು ತಾಲ್ಲೂಕಿನ ದಿನ್ನೇರಿ ಹಾರೋಹಳ್ಳಿಯ ಶ್ರೀನಿವಾಸಪ್ಪ ಮತ್ತು ರತ್ನಕುಮಾರಿ ರೈತ ದಂಪತಿಯ ಮಗಳು. ವಿದ್ಯಾರ್ಥಿ ನೀರಜ್‌ರೆಡ್ಡಿ ಕ್ಯಾಸಂಬಳ್ಳಿಯ ಪ್ರಭಾಕರರೆಡ್ಡಿ ಹಾಗೂ ಮಂಜುಳಾ ದಂಪತಿಯ ಪುತ್ರ’ ಎಂದು ವಿವರಿಸಿದರು.

‘ಜಿಲ್ಲೆಯ ವಿದ್ಯಾರ್ಥಿಗಳ ಈ ಸಾಧನೆ ಇತರೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ. ಈ ಹಿಂದೆ ಜಿಲ್ಲೆಗೆ ಎಂದೂ ಪ್ರಥಮ ಸ್ಥಾನ ಬಂದಿರಲಿಲ್ಲ. ಆದರೆ, ಜಿಲ್ಲೆಯ ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ’ ಎಂದು ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಅ.ಮು.ಲಕ್ಷ್ಮೀನಾರಾಯಣ ಹೇಳಿದರು.

ಒಕ್ಕೂಟದ ಉಪಾಧ್ಯಕ್ಷ ಎಸ್.ವಿ.ಗೋವರ್ಧನರೆಡ್ಡಿ, ನಿರ್ದೇಶಕರಾದ ಸುರೇಶ್, ಡಿ.ಆರ್.ರಾಮಚಂದ್ರಗೌಡ, ಅರುಣಮ್ಮ, ಗೋಪಾಲಪ್ಪ, ರಮೇಶ್, ರುದ್ರಸ್ವಾಮಿ, ಕೆ.ಎಂ.ಮಂಜುನಾಥ್, ಪಿ.ಎಂ.ವೆಂಕಟೇಶ್, ವಿ.ರಘುಪತಿರೆಡ್ಡಿ, ಕೆ.ಟಿ.ಬೈರೇಗೌಡ, ಪಾಪಣ್ಣ, ಶಂಕರನಾರಾಯಣಗೌಡ, ನಾಗರಾಜ್, ಸಹಕಾರ ಸಂಘಗಳ ಉಪ ನಿಬಂಧಕ ಸಿದ್ದನಗೌಡ ನೀಲಪ್ಪನವರ್, ಸಿಇಒ ಕೆ.ಎನ್.ಭಾರತಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT