ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ: ಮೌಲ್ಯಮಾಪನಕ್ಕೆ ಸಿದ್ಧತೆ ಮಾಡಿ: ಡಿಡಿಪಿಐ ರತ್ನಯ್ಯ ಸೂಚನೆ

Last Updated 8 ಜುಲೈ 2020, 14:04 IST
ಅಕ್ಷರ ಗಾತ್ರ

ಕೋಲಾರ: ‘ಕೋವಿಡ್ ಮಾರ್ಗಸೂಚಿಯಡಿ ಶಿಕ್ಷಕರ ಸುರಕ್ಷತೆಯೊಂದಿಗೆ ಎಸ್ಸೆಸ್ಸೆಲ್ಸಿ ಮೌಲ್ಯಮಾಪನಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್‌ ಸೂಚನೆ ನೀಡಿದ್ದಾರೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಡಿಡಿಪಿಐ) ಕೆ.ರತ್ನಯ್ಯ ತಿಳಿಸಿದರು.

ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಪ್ರಕ್ರಿಯೆ ಸಂಬಂಧ ಇಲ್ಲಿ ಬುಧವಾರ ನಡೆದ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಸುಗಮವಾಗಿ ಮೌಲ್ಯಮಾಪನ ಪ್ರಕ್ರಿಯೆ ನಡೆಸಬೇಕು. ಮೌಲ್ಯಮಾಪನಕ್ಕೆ ಬರುವ ಶಿಕ್ಷಕರ ಆರೋಗ್ಯ ಮುಖ್ಯ’ ಎಂದು ಹೇಳಿದರು.

‘ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿಯಮಾನುಸಾರ ಈಗಾಗಲೇ ಮೌಲ್ಯಮಾಪಕರನ್ನು ನೇಮಿಸಿ ಅವರಿಗೆ ಆನ್‌ಲೈನ್‌ನಲ್ಲಿ ಆದೇಶಪತ್ರ ರವಾನಿಸಲಾಗಿದೆ. ಜಂಟಿ ಹಾಗೂ ಉಪ ಮುಖ್ಯ ಮೌಲ್ಯಮಾಪಕರು ಗುರುವಾರ (ಜುಲೈ 9) ಹಾಜರಾಗುತ್ತಾರೆ. ಅವರು ಗುರುವಾರ ಮತ್ತು ಶುಕ್ರವಾರ ಮೌಲ್ಯಮಾಪನಕ್ಕೆ ಅಗತ್ಯ ಸಿದ್ಧತೆ ನಡೆಸುತ್ತಾರೆ’ ಎಂದು ವಿವರಿಸಿದರು.

‘ಉಪ ಮುಖ್ಯ ಮೌಲ್ಯಮಾಪಕರಿಗೆ ಆಯಾ ಕೇಂದ್ರದಲ್ಲೇ ತರಬೇತಿ ನೀಡಲಿದ್ದು, ಭಾನುವಾರದ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜುಲೈ 13ರಿಂದ ಪೂರ್ಣ ಪ್ರಮಾಣದಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗುತ್ತದೆ. ಮೌಲ್ಯಮಾಪನ ಕೇಂದ್ರದಲ್ಲಿ ಶಿಕ್ಷಕರ ಸುರಕ್ಷತೆ ದೃಷ್ಟಿಯಿಂದ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್‌ ಬಳಕೆ ಮತ್ತು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.

6 ಕೇಂದ್ರ: ‘ನಗರದ 6 ಕೇಂದ್ರಗಳಲ್ಲಿ ಎಲ್ಲಾ ಆರು ವಿಷಯಗಳಿಗೆ ಪ್ರತ್ಯೇಕವಾಗಿ ಮೌಲ್ಯಮಾಪನ ನಡೆಯುತ್ತದೆ. ಈಗಾಗಲೇ ಎಲ್ಲಾ ಕೇಂದ್ರಗಳಿಗೆ ಉಸ್ತುವಾರಿ ಅಧಿಕಾರಿಗಳನ್ನು ನೇಮಿಸಲಾಗಿದೆ. ಕೇಂದ್ರಗಳಲ್ಲಿ ಶಿಕ್ಷಕರಿಗೆ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಆಸನ ವ್ಯವಸ್ಥೆ ಮಾಡಲಾಗಿದೆ. ಶಿಕ್ಷಕರು ಮನೆಯಿಂದಲೇ ಕುಡಿಯುವ ನೀರು ತರಬೇಕು’ ಎಂದು ಹೇಳಿದರು.

‘ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿದಷ್ಟೇ ಮುನ್ನಚ್ಚರಿಕೆ ಕ್ರಮದೊಂದಿಗೆ ಮೌಲ್ಯಮಾಪನ ಪ್ರಕ್ರಿಯೆ ನಡೆಸಬೇಕು. ಸುರಕ್ಷತೆ ವಿಚಾರದಲ್ಲಿ ಸಣ್ಣ ಲೋಪವೂ ಆಗಬಾರದು’ ಎಂದು ಎಚ್ಚರಿಕೆ ನೀಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷಾ ಜಿಲ್ಲಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಡಿವೈಪಿಸಿ ಮೋಹನ್‌ಬಾಬು, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್, ವಿಷಯ ಪರಿವೀಕ್ಷಕರಾದ ಕೃಷ್ಣಪ್ಪ, ಶಶಿವಧನ, ಗಾಯತ್ರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT