ಸೋಮವಾರ, ಸೆಪ್ಟೆಂಬರ್ 27, 2021
22 °C
ವಿದ್ಯಾರ್ಥಿನಿಯರಾದ ವರ್ಷಿಣಿ–ಪೂರ್ವಿ ರಾಜ್ಯಕ್ಕೆ ಪ್ರಥಮ

ಎಸ್ಸೆಸ್ಸೆಲ್ಸಿ ಫಲಿತಾಂಶ: ಜಿಲ್ಲೆಗೆ ಎ ಶ್ರೇಣಿ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ರಾಜ್ಯದಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ‘ಎ’ ಶ್ರೇಣಿ ಪಡೆದ ಜಿಲ್ಲೆಗಳ ಪಟ್ಟಿಯಲ್ಲಿ ಕೋಲಾರವೂ ಸ್ಥಾನ ಪಡೆದುಕೊಳ್ಳುವ ಮೂಲಕ ಜಿಲ್ಲೆಯ ಘನತೆ ಹೆಚ್ಚಿದೆ.

ಜಿಲ್ಲೆಯ 117 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಎಲ್ಲಾ 19,382 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಗುಣಮಟ್ಟದಲ್ಲಿ ಜಿಲ್ಲೆಗೆ ಕಳೆದ ಬಾರಿಗಿಂತ ಈ ಬಾರಿ ಉತ್ತಮ ಸ್ಥಾನ ಲಭಿಸಿದೆ. ಕೋವಿಡ್ ಸಂಕಷ್ಟದ ನಡುವೆಯೂ ಜುಲೈ 19 ಮತ್ತು 22ರಂದು ಇತಿಹಾಸದಲ್ಲೇ ಮೊದಲ ಬಾರಿಗೆ ಬಹು ಆಯ್ಕೆ ಮಾದರಿ ಪ್ರಶ್ನೆಪತ್ರಿಕೆ ನೀಡಿ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲಾಗಿತ್ತು.

ಐಚ್ಛಿಕ ವಿಷಯಗಳಾದ ಗಣಿತ, ವಿಜ್ಞಾನ, ಸಮಾಜ ವಿಜ್ಞಾನಕ್ಕೆ ಒಂದೇ ದಿನ ತಲಾ 40 ಅಂಕಗಳಂತೆ 120 ಅಂಕಗಳಿಗೆ ಹಾಗೂ ಭಾಷಾ ವಿಷಯಗಳಾದ ಕನ್ನಡ, ಇಂಗ್ಲೀಷ್, ಹಿಂದಿ ವಿಷಯಕ್ಕೆ ತಲಾ 40 ಅಂಕದಂತೆ 120 ಅಂಕಗಳಿಗೆ ಎರಡು ದಿನ ಪರೀಕ್ಷೆ ನಡೆದಿತ್ತು.

ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ ಕೀರ್ತಿ ಶಿಕ್ಷಣ ಇಲಾಖೆಗೆ ಲಭಿಸಿದ್ದು, ಇದೀಗ ಫಲಿತಾಂಶವೂ ಹೊರ ಬಂದಿದೆ. ಮಕ್ಕಳು ವಿಷಯವಾರು 40 ಅಂಕಗಳಿಗೆ ಪಡೆದ ಅಂಕಗಳನ್ನು 80 ಅಂಕಗಳಿಗೆ ಬದಲಿಸಿ, ಅದಕ್ಕೆ ಆಂತರಿಕ ಅಂಕಗಳನ್ನು ಸೇರಿಸಿ 625 ಅಂಕಗಳಿಗೆ ಇದೀಗ ಫಲಿತಾಂಶ ಘೋಷಿಸಲಾಗಿದೆ.

ಜಿಲ್ಲೆಯಲ್ಲಿ 19,382 ಮಂದಿ ಹೊಸ ಶಾಲಾ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 10,048 ಬಾಲಕರು ಮತ್ತು 9,334 ಬಾಲಕಿಯರಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ. ಖಾಸಗಿಯಾಗಿ ಪರೀಕ್ಷೆ ಬರೆದಿದ್ದ 378 ಬಾಲಕರು ಮತ್ತು 142 ಬಾಲಕಿಯರು ಸೇರಿ ಒಟ್ಟು 520 ಮಂದಿ ಉತ್ತೀರ್ಣರಾಗಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ 11,804 ಮಕ್ಕಳು ಪರೀಕ್ಷೆ ತೆಗೆದುಕೊಂಡಿದ್ದು, ಇವರಲ್ಲಿ 6,346 ಮಂದಿ ಬಾಲಕರು ಹಾಗೂ 5,458 ಬಾಲಕಿಯರು ಇದ್ದಾರೆ. ನಗರ ಪ್ರದೇಶಲ್ಲಿ 3,702 ಬಾಲಕರು ಹಾಗೂ 3,876 ಬಾಲಕಿಯರು ಪರೀಕ್ಷೆ ಬರೆದಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ.

ರೈತನ ಪುತ್ರಿ ಪ್ರಥಮ: ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು 625ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಮೊದಲಿಗರಾಗಿದ್ದು, ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಕೆಜಿಎಫ್ ನಗರದ ಸೇಂಟ್‌ ಥೆರೆಸಾ ಬಾಲಕಿಯರ ಪ್ರೌಢ ಶಾಲೆ ವಿದ್ಯಾರ್ಥಿನಿ ಸಿ.ವರ್ಷಿಣಿ ಈ ಸಾಧನೆ ಮಾಡಿದ್ದಾರೆ. ಈ ಸಾಧಕಿಯು ಕೆಜಿಎಫ್‌ನ ಗೌತಮ ನಗರದಲ್ಲಿ ಕ್ಷೌರದಂಗಡಿ ಇಟ್ಟುಕೊಂಡಿರುವ ಎಂ.ಚಂದ್ರಶೇಖರ್ ಅವರ ಪುತ್ರಿಯಾಗಿದ್ದು, ವೈದ್ಯೆಯಾಗುವ ಆಶಯ ಹೊಂದಿದ್ದಾಳೆ.

ಶ್ರೀನಿವಾಸಪುರ ಹೊರವಲಯದ ಬೈಯಪ್ಪಲ್ಲಿಯ ಬೈರವೇಶ್ವರ ಶಾಲೆ ವಿದ್ಯಾರ್ಥಿನಿ ಕೆ.ಪೂರ್ವಿ 625 ಅಂಕ ಗಳಿಸಿದ್ದಾಳೆ. ಈ ವಿದ್ಯಾರ್ಥಿನಿ ಶ್ರೀನಿವಾಸಪುರ ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ರೈತ ಕೃಷ್ಣಾರೆಡ್ಡಿ ಅವರ ಪುತ್ರಿ.
‘ಮುಂದೆ ವೈದ್ಯೆಯಾಗಬೇಕೆಂಬ ಕನಸಿದೆ. ವೈದ್ಯೆಯಾಗಿ ಗ್ರಾಮೀಣ ಪ್ರದೇಶದಲ್ಲಿ ಬಡವರ ಸೇವೆ ಮಾಡುತ್ತೇನೆ’ ಎಂದು ಪೂರ್ವಿ ‘ಪ್ರಜಾವಾಣಿ’ ಜತೆ ಸಂತಸ ಹಂಚಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು