ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ: ಕೋಲಾರ ಪ್ರಥಮ ಸ್ಥಾನಕ್ಕೇರಲಿ -ಗಾಯತ್ರಿದೇವಿ

ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿ
Last Updated 27 ಫೆಬ್ರುವರಿ 2021, 14:30 IST
ಅಕ್ಷರ ಗಾತ್ರ

ಕೋಲಾರ: ‘ಮಕ್ಕಳಿಗೆ ಯೋಗ್ಯತಾ ಪತ್ರ ನೀಡುವುದಕ್ಕಿಂತ ಅವರನ್ನು ಯೋಗ್ಯರಾಗಿಸಿ. ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ ಪ್ರಥಮ ಸ್ಥಾನಕ್ಕೇರಲು ಶ್ರಮಿಸಿ’ ಎಂದು ರಾಜ್ಯ ಶಿಕ್ಷಣ, ಸಂಶೋಧನಾ, ತರಬೇತಿ ಸಂಸ್ಥೆ (ಡಿಎಸ್‍ಆರ್‍ಇಟಿ) ಜಂಟಿ ನಿರ್ದೇಶಕಿ ಗಾಯತ್ರಿದೇವಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳ, ಶಾಲೆಗಳಲ್ಲಿ ಹಾಜರಾತಿ ಉತ್ತಮಪಡಿಸುವುದು ಮತ್ತು ಶಾಲೆಗಳಲ್ಲಿ ಮೂಲಸೌಕರ್ಯ ಕುರಿತು ಇಲ್ಲಿ ಶನಿವಾರ ನಡೆದ ಕೋಲಾರ ಹಾಗೂ ಮುಳಬಾಗಿಲು ತಾಲ್ಲೂಕು ಸರ್ಕಾರಿ, ಅನುದಾನಿತ, ಖಾಸಗಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಭೆಯಲ್ಲಿ ಮಾತನಾಡಿದರು.

‘ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 5ನೇ ಸ್ಥಾನ ಮತ್ತು ಗುಣಾತ್ಮಕ ಫಲಿತಾಂಶದಲ್ಲಿ ರಾಜ್ಯದಲ್ಲೇ 2ನೇ ಸ್ಥಾನದ ಹೆಗ್ಗಳಿಕೆ ಪಡೆದಿತ್ತು. ಈ ಬಾರಿ ಎರಡರಲ್ಲೂ ಜಿಲ್ಲೆ ಪ್ರಥಮ ಸ್ಥಾನ ಗಳಿಸಬೇಕು. ಯಾವುದೇ ವಿದ್ಯಾರ್ಥಿ ಅನುತ್ತೀರ್ಣವಾಗಬಾರದು’ ಎಂದು ತಿಳಿಸಿದರು.

‘1.50 ಕೋಟಿ ಮಕ್ಕಳು, 85 ಸಾವಿರ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳು, 5 ಲಕ್ಷ ಶಿಕ್ಷಕರು ಮತ್ತು 2.50 ಕೋಟಿ ಪೋಷಕರ ಸಂಪರ್ಕದಲ್ಲಿರುವ ಅತಿ ದೊಡ್ಡ ಇಲಾಖೆ ನಮ್ಮದು. ಸಮಾಜಕ್ಕೆ ಮಾರ್ಗದರ್ಶನ, ಮಾನವ ಸಂಪನ್ಮೂಲ ನೀಡುವ ಹೊಣೆ ಶಿಕ್ಷಣ ಇಲಾಖೆ ಮೇಲಿದೆ’ ಎಂದು ಹೇಳಿದರು.

ಯಜಮಾನರು: ‘ಮುಖ್ಯ ಶಿಕ್ಷಕರು ಮನೆಯ ಯಜಮಾನರಿದ್ದಂತೆ. ಸಹ ಶಿಕ್ಷಕರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರಬೇಕು. ಅವರ ಮನವೊಲಿಸಿ ಬೋಧನೆ ಗಟ್ಟಿಗೊಳಿಸಬೇಕು. ಕೋವಿಡ್ ಸಂದರ್ಭದಲ್ಲಿ ಕಲಿಕೆಯಲ್ಲಿ ಆರೋಗ್ಯಕರ ಜೀವನ ಶೈಲಿ ಅತಿ ಮುಖ್ಯ. ಕೋವಿಡ್ ಸುರಕ್ಷತಾ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಿ. ಮುಖ್ಯ ಶಿಕ್ಷಕರು ಮಕ್ಕಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ಉತ್ತಮ ಸಂಬಂಧ ಹೊಂದಬೇಕು’ ಎಂದರು.

‘ದೇಹಬಲ, ಆತ್ಮಬಲ, ಮನೋಬಲ ಸೇರಿದರೆ ಸಾಧನೆ ಸಾಧ್ಯ. ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಇತರೆ ಮಕ್ಕಳಿಗೆ ಹೋಲಿಕೆ ಮಾಡಿ ಟೀಕಿಸಿದಿರಿ. ಪೋಷಕರ ಸಭೆ ಕರೆದು ಮಕ್ಕಳ ಪ್ರಗತಿ ತಿಳಿಸಿ. ಸಾಮಾನ್ಯ ವಿದ್ಯಾರ್ಥಿಯನ್ನು ಅಸಮಾನ್ಯರಾಗಿಸುವ ಶಕ್ತಿ ಶಿಕ್ಷಕರಲ್ಲಿದೆ. ಫೋನ್‌ಇನ್ ಕಾರ್ಯಕ್ರಮದ ಮೂಲಕ ಮಕ್ಕಳು, ಪೋಷಕರಿಗೆ ಇಲಾಖೆ ಹತ್ತಿರವಾಗಬೇಕು’ ಎಂದು ಸಲಹೆ ನೀಡಿದರು.

ಪ್ರಶ್ನೆಪತ್ರಿಕೆ ಸುಲಭ: ‘ಇಲಾಖೆಯ ಕ್ರಿಯಾ ಯೋಜನೆ ಪಾಲಿಸಿ, ಅಧ್ಯಾಯವಾರು ಪ್ರಶ್ನೆಪತ್ರಿಕೆ ನೀಡಿದ್ದೇವೆ. ತೆರೆದ ಪುಸ್ತಕ ಪರೀಕ್ಷೆ ನಡೆಸಿ ಕಲಿಕೆ ದೃಢೀಕರಣ ಮಾಡಿಕೊಂಡು ನಂತರ ನೋಡದೇ ಉತ್ತರ ಬರೆಸಿ. ಕೋವಿಡ್ ಹಿನ್ನೆಲೆಯಲ್ಲಿ ಪ್ರಶ್ನೆಪತ್ರಿಕೆ ಸುಲಭವಾಗಲಿದೆ. ಪಠ್ಯ ಅಭ್ಯಾಸದ ಪ್ರಶ್ನೆಗಳಿಗೆ ಮಕ್ಕಳು ಸಿದ್ಧರಾದರೆ ಯಶಸ್ಸು ಖಚಿತ. ಶೇ 10ರಷ್ಟು ಮಾತ್ರ ಕಠಿಣ ಪ್ರಶ್ನೆಗಳು ಇರಲಿವೆ’ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಜಿಲ್ಲಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ವಿವರಿಸಿದರು.

‘ಜಿಲ್ಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಈವರೆಗೆ 20,228 ಮಕ್ಕಳು ಹೆಸರು ನೋಂದಾಯಿಸಿದ್ದಾರೆ. ಈ ಪೈಕಿ 19,342 ಮಂದಿ ಶಾಲಾ ವಿದ್ಯಾರ್ಥಿಗಳಿದ್ದಾರೆ. ಸ್ಯಾಟ್ಸ್‌ನಲ್ಲಿ ಮಕ್ಕಳ ಹಾಜರಾತಿ ಸರಿಯಾಗಿ ದಾಖಲು ಮಾಡುತ್ತಿಲ್ಲ. ಮುಖ್ಯ ಶಿಕ್ಷಕರು ಕನಿಷ್ಠ 12 ತಾಸು ತರಗತಿ ತೆಗೆದುಕೊಳ್ಳಿ’ ಎಂದು ಸೂಚಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಗೌಡ, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರುದ್ರಪ್ಪ, ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವಧನ, ಇಸಿಒಗಳಾದ ಮುನಿರತ್ನಯ್ಯಶೆಟ್ಟಿ, ರಂಜಿತ್‌ಕುಮಾರ್‌ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT