ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ | ಧೃತಿಗೆಡಬೇಡಿ: ಕೆ.ರತ್ನಯ್ಯ ಸಲಹೆ

Last Updated 22 ಜುಲೈ 2020, 14:25 IST
ಅಕ್ಷರ ಗಾತ್ರ

ಕೋಲಾರ: ‘ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಸೋಲನ್ನು ಸವಾಲಾಗಿ ಸ್ವೀಕರಿಸಿ ಮತ್ತೆ ಪರೀಕ್ಷೆ ಬರೆದು ಉತ್ತೀರ್ಣರಾಗುವ ಧನಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಸಲಹೆ ನೀಡಿದರು.

ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಈಗಾಗಲೇ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆಗಸ್ಟ್ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ. ವಿದ್ಯಾರ್ಥಿಗಳಲ್ಲಿ ಸಹಜವಾಗಿ ಫಲಿತಾಂಶದ ಬಗ್ಗೆ ಕುತೂಹಲ ಹೆಚ್ಚಿದೆ’ ಎಂದರು.

‘ಎಸ್ಸೆಸ್ಸೆಲ್ಸಿ ಪರೀಕ್ಷೆ ನಿಗದಿತ ಸಮಯಕ್ಕಿಂತ 3 ತಿಂಗಳು ತಡವಾಗಿ ನಡೆದಿದೆ. ಇದರಿಂದ ಕೆಲ ಮಕ್ಕಳಿಗೆ ಅನುತ್ತೀರ್ಣದ ಭಯ ಕಾಡುತ್ತಿರಬಹುದು. ಫಲಿತಾಂಶದ ಬಗ್ಗೆ ಹೆದರಿಕೆ ಬೇಕಿಲ್ಲ. ಅನುತ್ತೀರ್ಣರಾದರೂ ಧೃತಿಗೆಡುವ ಅಗತ್ಯವಿಲ್ಲ. ಕೆಲವೇ ದಿನದಲ್ಲಿ ಪೂರಕ ಪರೀಕ್ಷೆ ಬರಲಿದ್ದು, ಮತ್ತೊಮ್ಮೆ ಪರೀಕ್ಷೆ ಬರೆದು ಉತ್ತೀರ್ಣರಾಗಬಹುದು’ ಎಂದು ತಿಳಿಸಿದರು.

‘ಪರೀಕ್ಷೆಯಲ್ಲಿ ಅನಿರೀಕ್ಷಿತವಾಗಿ ಅನುತ್ತೀರ್ಣರಾದರೂ ಭಯ, ಋಣಾತ್ಮಕ ಮನಸ್ಥಿತಿಯಿಂದ ತಪ್ಪು ಆಲೋಚನೆ ಮಾಡಬಾರದು. ಸೋಲೇ ಗೆಲುವಿನ ಮೆಟ್ಟಿಲು ಎಂಬ ಮಾತು ನೆನಪಿಸಿಕೊಳ್ಳಿ. ಶಿಕ್ಷಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಗೆಲುವಿಗೆ ಹಾದಿ ಕಂಡುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದ್ದಾರೆ.

ಪರೀಕ್ಷೆ ಯಶಸ್ವಿ: ‘ಕೊರೊನಾ ಸಂಕಷ್ಟದ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇದಕ್ಕೆ ಪೋಷಕರು, ವಿದ್ಯಾರ್ಥಿಗಳ ಸ್ಪಂದನೆಯೇ ಕಾರಣ. ಇಲಾಖೆಯು ಫೋನ್ ಇನ್ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿ ಅನುಮಾನ ಪರಿಹರಿಸಿತ್ತು. ಚಂದನ ವಾಹಿನಿಯಲ್ಲಿ ಮಕ್ಕಳಿಗೆ ಪುನರ್ಮನನ ತರಗತಿ ಸಹ ನಡೆಸಲಾಗಿತ್ತು’ ಎಂದು ವಿವರಿಸಿದರು.

‘ಪರೀಕ್ಷಾ ಫಲಿತಾಂಶದ ವಿಚಾರವಾಗಿ ಪೋಷಕರು ಮಕ್ಕಳನ್ನು ನಿಂದಿಸಬಾರದು. ಮಕ್ಕಳನ್ನು ಇತರೆ ಮಕ್ಕಳೊಂದಿಗೆ ಹೋಲಿಕೆ ಮಾಡಿ ಮನಸ್ಸಿಗೆ ನೋವಾಗುವಂತೆ ಮಾತನಾಡಬಾರದು. ಜೀವನದಲ್ಲಿ ಅನೇಕ ಪರೀಕ್ಷೆ ಎದುರಿಸುವಾಗ ಇದೇ ಅಂತಿಮವಲ್ಲ. ಮತ್ತೆ ಮತ್ತೆ ಅವಕಾಶವಿದೆ. ಫಲಿತಾಂಶದ ಸಂದರ್ಭದಲ್ಲಿ ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸಬೇಕು ಮತ್ತು ಮಕ್ಕಳಿಗೆ ಧೈರ್ಯ ತುಂಬಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT