ಶುಕ್ರವಾರ, ಸೆಪ್ಟೆಂಬರ್ 25, 2020
24 °C
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬಾಲಕಿಯರ ಮೇಲುಗೈ: 16,923 ವಿದ್ಯಾರ್ಥಿಗಳು ಉತ್ತೀರ್ಣ

ಕೋಲಾರ ಜಿಲ್ಲೆಯಲ್ಲಿ ಶೇ 89.94 ಎಸ್‌ಎಸ್‌ಎಲ್‌ಸಿ ಫಲಿತಾಂಶ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೋವಿಡ್‌–19 ಸಂಕಷ್ಟದ ನಡುವೆಯೂ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯು ಶೇ 89.94 ಫಲಿತಾಂಶ ಸಾಧನೆ ಮಾಡಿದೆ.

ಜಿಲ್ಲೆಯಲ್ಲಿ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ 18,823 ವಿದ್ಯಾರ್ಥಿಗಳ ಪೈಕಿ 16,923 ಮಂದಿ ಉತ್ತೀರ್ಣರಾಗಿದ್ದಾರೆ. ಹಿಂದಿನ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ 1.80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಜಿಲ್ಲೆಯ ಘನತೆ ಹೆಚ್ಚಿಸಿದ್ದಾರೆ. 113 ಶಾಲೆಗಳು ಶೇ 100ರ ಫಲಿತಾಂಶ ಸಾಧನೆ ಮಾಡಿವೆ.

ಪ್ರತಿ ವರ್ಷದಂತೆ ಈ ಬಾರಿಯೂ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದಿದ್ದ ಕುಳಿತಿದ್ದ 9,380 ಬಾಲಕರಲ್ಲಿ 8,280 ಮಂದಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಕುಳಿತಿದ್ದ 9,443 ಬಾಲಕಿಯರ ಪೈಕಿ 8,649 ಮಂದಿ ಉತ್ತೀರ್ಣರಾಗಿದ್ದಾರೆ. ಬಾಲಕರ ಸಂಖ್ಯೆಗೆ ಹೋಲಿಸಿದರೆ ಶೇ 3ರಷ್ಟು ಹೆಚ್ಚು ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ.

ಒಟ್ಟಾರೆ ಸರ್ಕಾರಿ ಶಾಲೆಗಳಿಂದ 7,863 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 6,799 ಮಂದಿ ಉತ್ತೀರ್ಣರಾಗುವ ಮೂಲಕ ಶೇ 86.47 ಫಲಿತಾಂಶ ಬಂದಿದೆ. ಅನುದಾನಿತ ಪ್ರೌಢ ಶಾಲೆಗಳ 4,032 ವಿದ್ಯಾರ್ಥಿಗಳು ಪರೀಕ್ಷೆಗೆ ಬರೆದಿದ್ದು, ಇವರಲ್ಲಿ 3,596 ಮಂದಿ ಉತ್ತೀರ್ಣರಾಗುವ ಮೂಲಕ ಶೇ 89.19 ಫಲಿತಾಂಶ ಬಂದಿದೆ.

ಅನುದಾನರಹಿತ ಶಾಲೆಗಳ 7,055 ಮಂದಿ ಪರೀಕ್ಷೆಗೆ ಕುಳಿತಿದ್ದು, 6,696 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 94.9ರಷ್ಟು ಫಲಿತಾಂಶ ಲಭಿಸಿದೆ.

ಶೇ 100ರ ಸಾಧನೆ: ಈ ಬಾರಿ 113 ಶಾಲೆಗಳಿಗೆ ಶೇ 100ರಷ್ಟು ಫಲಿತಾಂಶ ಲಭಿಸಿದೆ. 25 ಸರ್ಕಾರಿ ಶಾಲೆ, 13 ಅನುದಾನಿತ ಹಾಗೂ 75 ಅನುದಾನರಹಿತ ಶಾಲೆಗಳು ಈ ಗೌರವಕ್ಕೆ ಪಾತ್ರವಾಗಿವೆ.

ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಬಂಗಾರಪೇಟೆ ತಾಲ್ಲೂಕು 4, ಕೆಜಿಎಫ್ 2, ಕೋಲಾರ 5, ಮಾಲೂರು 1, ಮುಳಬಾಗಿಲು 8 ಹಾಗೂ ಶ್ರೀನಿವಾಸಪುರ ತಾಲ್ಲೂಕಿನ 5 ಶಾಲೆಗಳು ಶೇ 100ರಷ್ಟು ಫಲಿತಾಂಶ ಗಳಿಸಿವೆ. ಅನುದಾನಿತ ಶಾಲೆಗಳಲ್ಲಿ ಕೋಲಾರ 2, ಮಾಲೂರು 1, ಮುಳಬಾಗಿಲು 7 ಮತ್ತು ಶ್ರೀನಿವಾಸಪುರ ತಾಲ್ಲೂಕಿನ 3 ಶಾಲೆಗಳು ಈ ಗೌರವಕ್ಕೆ ಪಾತ್ರವಾಗಿವೆ.

ಅನುದಾನರಹಿತ ಶಾಲೆಗಳಲ್ಲಿ ಕೋಲಾರ 22, ಬಂಗಾರಪೇಟೆ 11, ಮಾಲೂರು 12, ಶ್ರೀನಿವಾಸಪುರ 17 ಹಾಗೂ ಮುಳಬಾಗಿಲು ತಾಲ್ಲೂಕಿನ 12 ಶಾಲೆಗಳಿಗೆ ಶೇ 100ರಷ್ಟು ಫಲಿತಾಂಶ ಬಂದಿದೆ.

ಫೋನ್‌ಇನ್‌: ‘ಲಾಕ್‌ಡೌನ್ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 10 ಫೋನ್ಇನ್ ಕಾರ್ಯಕ್ರಮ ನಡೆಸಲಾಗಿತ್ತು. ಎಲ್ಲಾ 354 ಶಾಲೆಗಳ ಮಕ್ಕಳೊಂದಿಗೆ ಸಂವಾದ ನಡೆಸಲಾಗಿತ್ತು. ಮಕ್ಕಳಿಗೆ 6 ಸೆಟ್ ಪ್ರಶ್ನೆಪತ್ರಿಕೆ, ನನ್ನನ್ನೊಮ್ಮೆ ಗಮನಿಸಿ ಪ್ರಶ್ನೆಕೋಠಿ, ಕಾಲಕಾಲಕ್ಕೆ ಶಿಕ್ಷಕರ ಮಾರ್ಗದರ್ಶನ ನೀಡಲಾಗಿತ್ತು. ಇದರಿಂದ ಉತ್ತಮ ಫಲಿತಾಂಶ ಸಾಧನೆ ಮಾಡಲು ಸಾಧ್ಯವಾಯಿತು’ ಎಂದು ಎಸ್ಸೆಸ್ಸೆಲ್ಸಿ ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.