ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ಅಭಿವೃದ್ಧಿ ನಿರ್ಲಕ್ಷಿಸಿದರೆ ವಜಾ

ಸಭೆಯಲ್ಲಿ ಸಿಬ್ಬಂದಿಗೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಎಚ್ಚರಿಕೆ
Last Updated 12 ಅಕ್ಟೋಬರ್ 2019, 14:07 IST
ಅಕ್ಷರ ಗಾತ್ರ

ಕೋಲಾರ: ‘ಬ್ಯಾಂಕ್‌ನ ಅಭಿವೃದ್ಧಿ ನಿರ್ಲಕ್ಷಿಸಿದರೆ ಮುಲಾಜಿಲ್ಲದೆ ಕೆಲಸದಿಂದ ವಜಾಗೊಳಿಸುತ್ತೇವೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.

ಇಲ್ಲಿ ಶನಿವಾರ ನಡೆದ ಡಿಸಿಸಿ ಬ್ಯಾಂಕ್‌ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಬ್ಯಾಂಕ್ ಸಿಬ್ಬಂದಿಯ ಕುಟುಂಬ ಪೋಷಣೆಗೆ ಎಲ್ಲಾ ಸೌಕರ್ಯ ನೀಡಿದೆ. ಸಮಾಜದಲ್ಲಿ ಗೌರವದಿಂದ ಬದುಕಲು ಅಗತ್ಯ ವೇತನ ನೀಡುತ್ತಿದ್ದು, ಬದ್ಧತೆಯಿಂದ ಕೆಲಸ ಮಾಡಬೇಕು’ ಎಂದು ಸೂಚಿಸಿದರು.

‘ಬಡವರ ಸೇವೆಯೇ ದೇವರ ಸೇವೆಯೆಂದು ಪರಿಗಣಿಸಬೇಕು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು, ಮಹಿಳೆಯರ ಹಿತದೃಷ್ಟಿಯಿಂದ, ವೇತನದ ಋಣ ತೀರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಅಹಂಕಾರ ಬೇಡ. ಸಿಬ್ಬಂದಿ ಅರ್ಥಿಕವಾಗಿ ಸದೃಢರಾಗಲು ಬ್ಯಾಂಕ್ ನೆರವಾಗಿದೆ. ಅದೇ ರೀತಿ ಸಿಬ್ಬಂದಿ ಬ್ಯಾಂಕ್‌ ಸದೃಢಗೊಳಿಸಬೇಕು’ ಎಂದು ಕಿವಿಮಾತು ಹೇಳಿದರು.

‘ನಾನು ಬ್ಯಾಂಕ್‌ನ ದಂಡ ನಾಯಕನಲ್ಲ. ಬದಲಿಗೆ ಬ್ಯಾಂಕ್‌ನ ಗುಲಾಮನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಸಿಬ್ಬಂದಿಯ ಕರ್ತವ್ಯದಲ್ಲಿ ಲೋಪವಾದರೆ ವರ್ಗಾವಣೆ, ಹಿಂಬಡ್ತಿ, ನೋಟಿಸ್ ಜಾರಿಯಂತಹ ಕ್ರಮ ಜರುಗಿಸುವುದಿಲ್ಲ. ಬದಲಿಗೆ ನೇರವಾಗಿ ಕೆಲಸದಿಂದ ವಜಾ ಮಾಡುತ್ತೇವೆ’ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ನೋಟಿಸ್ ಜಾರಿಗೊಳಿಸಿ: ‘ಮುಂದಿನ ಪ್ರಗತಿ ಪರಿಶೀಲನಾ ಸಭೆಯೊಳಗೆ ಎರಡೂ ಜಿಲ್ಲೆಗಳ ಎಲ್ಲಾ ಶಾಖೆಗಳು ಗೃಹ ಸಾಲ ವಸೂಲಿ ಮಾಡಬೇಕು. ವಸೂಲಾಗದ ಸಾಲ (ಎನ್‌ಪಿಎ) ಕಂಡುಬಂದರೆ ಸಹಿಸುವುದಿಲ್ಲ. ಗೃಹ ಸಾಲ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ಜಾರಿ ಮಾಡಿ ಆಸ್ತಿ ಹರಾಜು ಹಾಕಲು ಸುಪ್ರೀಂ ಕೋರ್ಟ್ ಸರ್‌ಪ್ರೈಸ್ ಆ್ಯಕ್ಟ್ ಅನ್ವಯ ಅಧಿಕಾರ ನೀಡಿದೆ. 2ಕ್ಕಿಂತ ಹೆಚ್ಚು ಕಂತು ಬಾಕಿ ಉಳಿಸಿಕೊಂಡುವರಿಗೆ ನೋಟಿಸ್ ಜಾರಿ ಮಾಡಿ’ ಎಂದು ಆದೇಶಿಸಿದರು.

‘ಬ್ಯಾಂಕ್‌ನ ಹಣಕಾಸು ವ್ಯವಹಾರದಲ್ಲಿ ಶಿಸ್ತು ಇರಬೇಕು. ಮುಲಾಜು ತೋರಿ ಒಳ್ಳೆಯವರಾದರೆ ಭವಿಷ್ಯದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಒಂದು ಸುಳ್ಳು ಹೇಳಿದರೆ ಅದನ್ನು ಮುಚ್ಚಲು 100 ಸುಳ್ಳು ಹೇಳಬೇಕಾಗುತ್ತದೆ’ ಎಂದರು.

ಲೆಕ್ಕ ಪರಿಶೋಧನೆ: ‘ಪ್ರತಿ ತಿಂಗಳು ಲೆಕ್ಕ ಪರಿಶೋಧನಾ ವರದಿ ಸಲ್ಲಿಸಬೇಕು. ಠೇವಣಿಗಳಲ್ಲಿ ಪ್ರಗತಿ ಸಾಧಿಸಲು ಶಾಖೆಗಳಲ್ಲಿ ಪ್ರತಿ ತಿಂಗಳು ಸಭೆ ನಡೆಸಿ ಯೋಜನೆ ರೂಪಿಸಬೇಕು. ಪ್ರತಿ ಶಾಖೆಯಿಂದ ಕನಿಷ್ಠ ₹ 3 ಕೋಟಿ ಠೇವಣಿ ಸಂಗ್ರಹಿಸಬೇಕು’ ಎಂದು ಗುರಿ ನೀಡಿದರು.

‘ಎಪಿಎಂಸಿ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳೊಂದಿಗೆ ನಿರಂತರ ಸಂಪರ್ಕ ಹೊಂದಿರಬೇಕು. ಪ್ರತಿ ಸಂಘವು ಡಿಸಿಸಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವಂತೆ ನೋಡಿಕೊಳ್ಳಿ. ಠೇವಣಿ ಹೆಚ್ಚಿದರೆ ಮಾತ್ರ ಹೆಚ್ಚು ಸಾಲ ಸೌಲಭ್ಯ ಕಲ್ಪಿಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎ.ನಾಗರಾಜ್, ನಿರ್ದೇಶಕರಾದ ಕೆ.ವಿ.ದಯನಂದ್, ಹನುಮಂತರೆಡ್ಡಿ, ಸೋಮಣ್ಣ, ಎಂ.ಎಲ್‌.ಅನಿಲ್‌ಕುಮಾರ್‌, ನೀಲಕಂಠೇಗೌಡ, ನರಸಿಂಹರೆಡ್ಡಿ, ರಾಮಚಂದ್ರರೆಡ್ಡಿ, ಮೋಹನ್‌ರೆಡ್ಡಿ, ನಾಗಿರೆಡ್ಡಿ, ವ್ಯವಸ್ಥಾಪಕ ನಿರ್ದೇಶಕ ರವಿಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT