ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ಮಾಡಿ

ಸಾಲ ವಿತರಣೆ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಹೇಳಿಕೆ
Last Updated 7 ಏಪ್ರಿಲ್ 2021, 15:57 IST
ಅಕ್ಷರ ಗಾತ್ರ

ಕೋಲಾರ: ‘ಬ್ಯಾಂಕ್ ಹಾಗೂ ಸೊಸೈಟಿಗಳ ಸಿಬ್ಬಂದಿ ಪ್ರಾಮಾಣಿಕತೆ ಮತ್ತು ಬದ್ಧತೆಯೊಂದಿಗೆ ಎಚ್ಚರಿಕೆಯ ಹೆಜ್ಜೆಯಿಡಿ. ಇಲ್ಲವಾದರೆ ಟೀಕಾಕಾರರ ಬಾಯಿಗೆ ಆಹಾರವಾಗಬೇಕಾಗುತ್ತದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಎಚ್ಚರಿಕೆ ನೀಡಿದರು.

ತಾಲ್ಲೂಕಿನ ಸುಗಟೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ಮತ್ತು ಡಿಸಿಸಿ ಬ್ಯಾಂಕ್‌ ಸಹಯೋಗದಲ್ಲಿ ಸುಗಟೂರಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತರಿಗೆ ಕೆಸಿಸಿ ಬೆಳೆ ಸಾಲ ವಿತರಿಸಿ ಮಾತನಾಡಿ, ‘ಪ್ರಾಮಾಣಿಕತೆ ಇದ್ದರೆ ಯಾರಿಗೂ ಹೆದರಬೇಕಿಲ್ಲ’ ಎಂದು ತಿಳಿಸಿದರು.

‘ಈ ಹಿಂದೆ ಬ್ಯಾಂಕ್ ದಿವಾಳಿಯಾಗಿ ಮುಚ್ಚುವ ಹಂತಕ್ಕೆ ತಲುಪಿದ್ದಾಗ ಯಾರೂ ಮಾತನಾಡಲಿಲ್ಲ, ಅವಿಭಜಿತ ಜಿಲ್ಲೆಯ ರೈತರು, ಮಹಿಳೆಯರು ಸಾಲ ಸೌಲಭ್ಯದಿಂದ ವಂಚಿತರಾದಾಗ ಯಾರೂ ತುಟಿ ಬಿಚ್ಚಲಿಲ್ಲ. ಈಗ ಬ್ಯಾಂಕ್ ಉತ್ತಮ ಸಾಧನೆ ಮಾಡಿ ಅವಿಭಜಿತ ಜಿಲ್ಲೆಯಲ್ಲಿ ಮನೆ ಮಾತಾಗಿದೆ. ಇಂತಹ ಸಂದರ್ಭದಲ್ಲಿ ಎಲ್ಲರ ಚಿತ್ತ ಬ್ಯಾಂಕ್ ಮತ್ತು ಸೊಸೈಟಿಗಳತ್ತ ನೆಟ್ಟಿದೆ. ಹೀಗಾಗಿ ಟೀಕೆ ಸಾಮಾನ್ಯ’ ಎಂದರು.

‘ರೈತರು ಮತ್ತು ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವುದು ಬ್ಯಾಂಕ್‌ನ ಗುರಿ. ಈ ಕಾರ್ಯದಲ್ಲಿ ರಾಜಿ ಬೇಡ, ಕೆಲಸವನ್ನು ಬದ್ಧತೆಯಿಂದ ಮಾಡಿ. ಆಡಳಿತದಲ್ಲಿ ತಪ್ಪು ಹೆಜ್ಜೆಯಿಟ್ಟರೆ ನಮ್ಮ ತಪ್ಪುಗಳಿಗಾಗಿ ಕಾಯುತ್ತಿರುವ ಕೆಲವು ಟೀಕಾಕಾರರಿಗೆ ಆಹಾರ ಸಿಕ್ಕಂತಾಗುತ್ತದೆ’ ಎಂದು ಹೇಳಿದರು.

‘ಸುಗಟೂರು ಸೊಸೈಟಿ ₹ 30 ಕೋಟಿಗೂ ಹೆಚ್ಚು ಸಾಲ ವಿತರಿಸಿ ಸಾಧನೆ ಮಾಡಿದೆ. ಸಾಲ ವಸೂಲಾತಿಯಲ್ಲೂ ಅತ್ಯುತ್ತಮ ಸಾಧನೆ ತೋರಿದೆ. ಸೊಸೈಟಿಗೆ ಸುಸಜ್ಜಿತ ಕಟ್ಟಡ ಇಲ್ಲದಿರುವುದು ಬೇಸರದ ಸಂಗತಿ. ನಿವೇಶನ ಹುಡುಕಿ ಸುಸಜ್ಜಿತ ಜನಸ್ನೇಹಿ ವ್ಯವಸ್ಥೆಯಿರುವ ಕಟ್ಟಡ ನಿರ್ಮಿಸಲು ಸಹಕರಿಸಬೇಕು’ ಎಂದು ಬ್ಯಾಂಕ್ ನಿರ್ದೇಶಕ ಸೋಮಣ್ಣ ಮನವಿ ಮಾಡಿದರು.

ಆರೋಗ್ಯ ಮುಖ್ಯ: ‘ಆರೋಗ್ಯ ರಕ್ಷಣೆ ಅತಿ ಮುಖ್ಯ, ಬಡ, ಮಧ್ಯಮ ವರ್ಗದ ಜನ ಖಾಸಗಿ ಔಷಧ ಮಾರಾಟ ಮಳಿಗೆಗಳಲ್ಲಿ ಔಷಧ ಮಾತ್ರೆ ಖರೀದಿಸಲು ಕಷ್ಟವಿದೆ. ಇಂತಹ ಸಂದರ್ಭದಲ್ಲಿ ಜನರಿಕ್ ಔಷಧ ಮಳಿಗೆ ತೆರೆದು ಜನರಿಗೆ ಸೇವೆ ಸಲ್ಲಿಸುವ ಭಾಗ್ಯ ಸೊಸೈಟಿಗಳಿಗೆ ಸಿಕ್ಕಿದೆ. ಶೀಘ್ರವೇ ಮಳಿಗೆ ತೆರೆಯಿರಿ’ ಎಂದು ಬ್ಯಾಂಕ್‌ ನಿರ್ದೇಶಕ ಎಂ.ಎಲ್‌.ಅನಿಲ್‌ಕುಮಾರ್‌ ಸಲಹೆ ನೀಡಿದರು.

‘ಡಿಸಿಸಿ ಬ್ಯಾಂಕ್‌ನಲ್ಲಿ ಮೈಕ್ರೊ ಎಟಿಎಂ ಸೇವೆಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಕೆಸಿಸಿ ಸಾಲ ಪಡೆದ ರೈತರು ಬಡ್ಡಿ ಕಟ್ಟಬೇಕಿಲ್ಲ. ಸಕಾಲಕ್ಕೆ ಅಸಲು ಪಾವತಿಸಿ ಬ್ಯಾಂಕ್‌ನ ನಂಬಿಕೆ ಉಳಿಸಿಕೊಳ್ಳಿ’ ಎಂದು ಬ್ಯಾಂಕ್ ನಿರ್ದೇಶಕ ದಯಾನಂದ್‌ ಮನವಿ ಮಾಡಿದರು.

ಸುಗಟೂರು ಸೊಸೈಟಿ ಅಧ್ಯಕ್ಷ ಟಿ.ವಿ.ತಿಮ್ಮರಾಯಪ್ಪ, ಉಪಾಧ್ಯಕ್ಷ ವೆಂಕಟರಾಮರೆಡ್ಡಿ, ನಿರ್ದೇಶಕರಾದ ಎ.ಸಿ.ಭಾಸ್ಕರ್, ರಮಣರೆಡ್ಡಿ, ವೆಂಕಟರಮಣಪ್ಪ, ಗೋಪಾಲಪ್ಪ, ಹನುಮೇಗೌಡ, ಸಿಇಒ ಪುಟ್ಟರಾಜು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT