ಬುಧವಾರ, ಸೆಪ್ಟೆಂಬರ್ 18, 2019
25 °C
ಪೋಷಣ್‌ ಅಭಿಯಾನದಲ್ಲಿ ಜಿಲ್ಲಾಧಿಕಾರಿ ಮಂಜುನಾಥ್‌ ಕಿವಿಮಾತು

ಅಪೌಷ್ಟಿಕತೆ ಮುಕ್ತ ಭಾರತಕ್ಕೆ ಪಣ ತೊಡಿ

Published:
Updated:
Prajavani

ಕೋಲಾರ: ‘ಮಗು ಜನಿಸಿದ ದಿನದಿಂದ 6 ವರ್ಷದವರೆಗೆ ದೈಹಿಕ ಬೆಳವಣಿಗೆ ಕುಂಠಿತವಾಗದಂತೆ ಪೌಷ್ಟಿಕ ಆಹಾರ ನೀಡಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಕಿವಿಮಾತು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸೊಸೈಟಿ ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪೋಷಣ್‌ ಅಭಿಯಾನ ಹಾಗೂ ಅಭಿರಂಗ ಮಕ್ಕಳ ನಾಟಕೋತ್ಸವ ಉದ್ಘಾಟನೆ ಮಾತನಾಡಿದರು.

‘ತಾಯಿ ಮತ್ತು ಮಕ್ಕಳ ಪೋಷಣೆ ಮಾಡುವುದು ದೊಡ್ಡ ಸವಾಲು. ಕೇಂದ್ರ ಸರ್ಕಾರ 2017–18ರಲ್ಲಿ ಪೋಷಣ್ ಅಭಿಯಾನ ಆರಂಭಿಸಿತು. ದೇಶದ 550 ಜಿಲ್ಲೆಯಲ್ಲಿ ಮೂರು ಹಂತದಲ್ಲಿ ಈ ಅಭಿಯಾನ ಪೂರ್ಣಗೊಳಿಸುವ ಉದ್ದೇಶ ಹೊಂದಿದೆ. ಈ ಅಭಿಯಾನದ ಧ್ಯೇಯದಂತೆ ಅಪೌಷ್ಟಿಕತೆ ಮುಕ್ತ ಭಾರತ ನಿರ್ಮಾಣಕ್ಕೆ ಪಣ ತೊಡಬೇಕು’ ಎಂದರು.

‘ಮೊದಲ ವಾರದಲ್ಲಿ ಎಲ್ಲಾ ಇಲಾಖೆಗಳ ಸಹಕಾರದಲ್ಲಿ ಸಾವಿರ ದಿನಗಳ ಪೋಷಣ್‌ ಅಭಿಯಾನದ ಮಾಹಿತಿ ಒಳಗೊಂಡಂತೆ ಅಂಗನವಾಡಿ, ಶಾಲೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ರೂಪಿಸಲಾಗುವುದು. ಪೌಷ್ಟಿಕ ಆಹಾರ ಸೇವನೆ, ರಕ್ತಹೀನತೆ, ಅತಿಸಾರ ಭೇದಿ ತಡೆ, ವೈಯುಕ್ತಿಕ ಸ್ವಚ್ಛತೆ, ಶುದ್ಧ ನೀರು ಸೇವನೆ, ಕೈ ತೊಳೆಯುವ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.

‘ಪೋಷಣ್‌ ಅಭಿಯಾನವು ಸಮುದಾಯ ಆಧಾರಿತ ಕಾರ್ಯಕ್ರಮವಾಗಿದೆ. 3ನೇ ಮತ್ತು 4ನೇ ವಾರದಲ್ಲಿ ಸ್ತ್ರೀಶಕ್ತಿ ಸಂಘ, ಗ್ರಾಮ ವಿಕಾಸ, ಗ್ರಾಮಸಭೆ, ಜಾಥಾ, ಸಿರಿಧಾನ್ಯ ಮೇಳದ ಮೂಲಕ ಸಮತೋಲನ ಆಹಾರ ಸೇವನೆ ಬಗ್ಗೆ ಅಂಗನವಾಡಿ ಕೇಂದ್ರ ಹಾಗೂ ಶಾಲೆಗಳಲ್ಲಿ ಪ್ರಚಾರ ಆಂದೋಲನ ನಡೆಸಬೇಕು’ ಎಂದು ಸಲಹೆ ನೀಡಿದರು.

‘ಆಹಾರ ಭದ್ರತೆ ಕಾಯ್ದೆ ತಂಡವು ಜಿಲ್ಲೆಯ ವಿವಿಧಡೆ ಭೇಟಿ ನೀಡಿ ಪರಿಶೀಲಿಸಿದಾಗ ಅಂಗನವಾಡಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಸಾರ್ವಜನಿಕರಿಗೆ ಪೌಷ್ಟಿಕ ಆಹಾರ ವಿತರಣೆಗೆ ಅಡ್ಡಿಯಾಗಲಿದೆ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಸೇವಾನಿರತ ಕಿರಿಯ ಶುಶ್ರೂಷಕರು (ಎಎನ್‌ಎಂ) ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು. ಸ್ವಚ್ಛತೆ ಕಾಪಾಡಬೇಕು. ಪರಿಸರ ರಕ್ಷಣೆಗೆ ಗಿಡ ಮರ ಬೆಳೆಸಬೇಕು’ ಎಂದರು.

ಅರ್ಹರು ವಂಚಿತ: ‘ಸರ್ಕಾರ ಹಲವು ಯೋಜನೆ ಜಾರಿಗೊಳಿಸಿದ್ದರೂ ಅವುಗಳ ಪ್ರಯೋಜನ ಅರ್ಹರಿಗೆ ತಲುಪುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅರ್ಹರು ಸರ್ಕಾರಿ ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅರವಿಂದ್‌ ಬೇಸರ ವ್ಯಕ್ತಪಡಿಸಿದರು.

‘ಸರ್ಕಾರದ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಅಂಗನವಾಡಿ ಕೇಂದ್ರಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಂಗನವಾಡಿಗಳಲ್ಲಿನ ಮೂಲಸೌಕರ್ಯ ಸಮಸ್ಯೆ ಪರಿಹರಿಸಬೇಕು’ ಎಂದು ಮನವಿ ಮಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕಿ ಪಾಲಿ ಸಾಮಾಜಿಕ ಬೆಳವಣಿಗೆ, ವ್ಯಕ್ತಿತ್ವ ವಿಕಸನ, ಪ್ರತಿಭೆಗಳಿಗೆ ಉತ್ತೇಜನ, ಕಲಾಶ್ರೀ ಪ್ರಶಸ್ತಿ ಕುರಿತು ಮಾಹಿತಿ ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ, ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ಚಂದನ್, ಶಿಶು ಅಭಿವೃದ್ಧಿ ಅಧಿಕಾರಿ ಡಾ.ಪ್ರೇಮಾ, ಆರೋಗ್ಯ ಶಿಕ್ಷಣಾಧಿಕಾರಿ ಪ್ರಸನ್ನ ಪಾಲ್ಗೊಂಡಿದ್ದರು.

Post Comments (+)