ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಕ್ಷೇಪ ಪತ್ತೆಗೆ ಡ್ರಿಲ್ಲಿಂಗ್ ಶುರು

ಕೆಜಿಎಫ್‌ನಲ್ಲಿ ಚಿನ್ನ, ಪೆಲ್ಲಾಡಿಯಂ ದೊರೆಯುವ ನಿರೀಕ್ಷೆ
Last Updated 30 ಸೆಪ್ಟೆಂಬರ್ 2020, 4:23 IST
ಅಕ್ಷರ ಗಾತ್ರ

ಕೆಜಿಎಫ್: ಕೇಂದ್ರ ಗಣಿ ಖಾತೆಯ ಸೂಚನೆ ಮೇರೆಗೆ ಡಿಕೆಹಳ್ಳಿ ಪ್ಲಾಂಟೇಷನ್ ಬಳಿ ಇರುವ ಬ್ಯಾಟರಾಯನ ಬ್ಲಾಕ್‌ನಲ್ಲಿ ಎಂಇಸಿಎಲ್ ತಂಡ ಖನಿಜ ನಿಕ್ಷೇಪಗಳನ್ನು ಪತ್ತೆ ಹಚ್ಚಲು ಡ್ರಿಲ್ಲಿಂಗ್ ಕಾಮಗಾರಿಯನ್ನು ಮಂಗಳವಾರ ಶುರು ಮಾಡಿತು.

ಬಿಜಿಎಂಎಲ್ ಪ್ರಭಾರ ವ್ಯವಸ್ಥಾಪಕ ನನ್ಮದಿ ಸೆಲ್ವಂ ಡ್ರಿಲ್ಲಿಂಗ್ ಯಂತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ
ನೀಡಿದರು.

ನಾಗಪುರದಲ್ಲಿರುವ ಎಂಇಸಿಎಲ್ ಮುಖ್ಯ ಕಚೇರಿಯ ಸೂಚನೆಯಂತೆ 30 ಜನರ ತಂಡ ನಗರಕ್ಕೆ ಆಗಮಿಸಿದೆ. ಜಮ್ಶೆಡ್‌ಪುರದಿಂದ ಡ್ರಿಲ್ಲಿಂಗ್ ಮಾಡುವ ಒಂದು ಯಂತ್ರ ಬಂದಿದೆ. ಎಂಇಸಿಎಲ್‌ನ ಎಂಜಿನಿಯರ್ ರಂಜಿತ್ ಗೌತಂ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು.

ಪೂಜೆ ನೆರವೇರಿಸಿ ಮಾತನಾಡಿದ ನನ್ಮದಿ ಸೆಲ್ವಂ, ಖನಿಜಗಳ ನಿಕ್ಷೇಪ ಪತ್ತೆಗೆ ಕೇಂದ್ರ ಸರ್ಕಾರವು ₹98 ಲಕ್ಷ ಮಂಜೂರು ಮಾಡಿದೆ. ಎಂಇಸಿಎಲ್ ನಿಕ್ಷೇಪಗಳ ಪತ್ತೆಗೆ ಡ್ರಿಲ್ಲಿಂಗ್ ಶುರು ಮಾಡಿದೆ. ಕೆಜಿಎಫ್ ಮತ್ತು ಸುತ್ತಮುತ್ತಲಿನ 18 ಪ್ರದೇಶಗಳಲ್ಲಿ ನಿಕ್ಷೇಪಗಳ ಪತ್ತೆಗೆ ಶ್ರಮಿಸಲಾಗುವುದು. ಮೂರು ತಿಂಗಳಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಬೇಕಾಗಿದೆ
ಎಂದರು.

ನಗರದಲ್ಲಿರುವ ಸೈನೈಡ್ ಗುಡ್ಡದಲ್ಲಿ ಕೂಡ ಚಿನ್ನದ ನಿಕ್ಷೇಪಗಳನ್ನು ಪತ್ತೆ ಹಚ್ಚಲಾಗುವುದು. ಈಚೆಗೆ ಸೈನೈಡ್ ಗುಡ್ಡದಿಂದ ಒಂದು ಲೋಡ್ ಮಣ್ಣನ್ನು ಪರೀಕ್ಷೆಗಾಗಿ ಹೈದರಾಬಾದ್‌ಗೆ ಕಳಿಸಲಾಗಿದೆ. ಹಿಂದೆ ಚಿನ್ನ ತೆಗೆದು ಬಿಟ್ಟ ಮಣ್ಣಿನಲ್ಲಿ ಕೂಡ ಚಿನ್ನ ಮತ್ತು ಪೆಲ್ಲಾಡಿಯಂ ನಿಕ್ಷೇಪವನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಹಿನ್ನೆಲೆ: ಬಿಜಿಎಂಎಲ್ ಪ್ರದೇಶದಲ್ಲಿ ಉಪಯೋಗವಾಗದೆ ಇರುವ ಸಾವಿರಾರು ಎಕರೆ ಖಾಲಿ ಜಾಗವನ್ನು ಕೈಗಾರಿಕೆ ಅಭಿವೃದ್ಧಿಗೆ ಉಪಯೋಗಿಸಿಕೊಳ್ಳಬೇಕೆಂದು ರಾಜ್ಯ ಸರ್ಕಾರ ಬಯಸಿತ್ತು. ಈ ಸಂಬಂಧವಾಗಿ ಆಗಸ್ಟ್ 28 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಕೇಂದ್ರ ಗಣಿ ಖಾತೆ ಸಚಿವ ಪ್ರಲ್ಹಾದ್ ಜೋಷಿ ಮತ್ತು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಗಣಿ ಸಚಿವರು, ಗಣಿ ಪ್ರದೇಶದಲ್ಲಿರುವ ಖಾಲಿ ಜಾಗದಲ್ಲಿ ಖನಿಜ ಸಿಗುವ ಬಗ್ಗೆ ಸರ್ವೆ ಮಾಡಲಾಗುವುದು. ಖನಿಜ ಸಿಕ್ಕರೆ ಗಣಿಗಾರಿಕೆಯನ್ನು ಪ್ರಾರಂಭಿಸುತ್ತೇವೆ. ಇಲ್ಲವಾದಲ್ಲಿ ಕೈಗಾರಿಕೆಗಳಿಗೆ ಜಾಗವನ್ನು ನೀಡಲು ಪರಿಶೀಲಿಸಲಾಗುವುದು ಎಂದು ತಿಳಿಸಿದ್ದರು. ಆರು ತಿಂಗಳೊಳಗೆ ಸರ್ವೆ ಮಾಡಲು ಸೂಚಿಸಿದ್ದೇನೆ ಎಂದು ಮಾಹಿತಿ
ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT