ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲರ ಅನಿರ್ದಿಷ್ಟಾವಧಿ ಧರಣಿ ಆರಂಭ

ಜಿಲ್ಲಾ ನ್ಯಾಯಾಲಯ: ನೂತನ ಕಟ್ಟಡ ನಿರ್ಮಾಣಕ್ಕೆ ಒತ್ತಾಯ
Last Updated 10 ಮಾರ್ಚ್ 2022, 15:45 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾ ನ್ಯಾಯಾಲಯಕ್ಕೆ ನೂತನ ಕಟ್ಟಡ ನಿರ್ಮಿಸುವಂತೆ ಒತ್ತಾಯಿಸಿ ಜಿಲ್ಲಾ ವಕೀಲರ ಸಂಘದ ಸದಸ್ಯರು ಇಲ್ಲಿ ಗುರುವಾರ ನ್ಯಾಯಾಲಯದ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ನ್ಯಾಯಾಲಯದ ಕಲಾಪ ಬಹಿಷ್ಕರಿಸಿದ ವಕೀಲರು, ‘ಜಿಲ್ಲಾ ನ್ಯಾಯಾಲಯ ಸಂಕೀರ್ಣವು ನೂರು ವರ್ಷದಷ್ಟು ಹಳೆಯದಾಗಿದ್ದು, ನಿರ್ವಹಣೆಯಿಲ್ಲದೆ ಶಿಥಿಲಗೊಂಡಿದೆ. ಪ್ರಕರಣಗಳು ಹಾಗೂ ಕಕ್ಷಿದಾರರ ಸಂಖ್ಯೆಗೆ ಅನುಗುಣವಾಗಿ ನ್ಯಾಯಾಲಯ ವಿಸ್ತಾರವಾಗಿಲ್ಲದ ಕಾರಣ ಕಲಾಪಕ್ಕೆ ಸಮಸ್ಯೆಯಾಗುತ್ತಿದೆ. ನ್ಯಾಯಾಲಯಕ್ಕೆ ನೂತನ ಕಟ್ಟಡ ನಿರ್ಮಿಸುವಂತೆ ಮನವಿ ಮಾಡಿದರೂ ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನ್ಯಾಯಾಲಯಕ್ಕೆ ನೂತನ ಕಟ್ಟಡ ನಿರ್ಮಿಸುವಂತೆ 9 ವರ್ಷಗಳಿಂದ ಒತ್ತಾಯಿಸುತ್ತಿದ್ದೇವೆ. 3 ವರ್ಷಗಳ ಹಿಂದೆಯೇ ಹೊಸ ಕಟ್ಟಡ ನಿರ್ಮಾಣಕ್ಕೆ ₹ 25 ಕೋಟಿ ಮಂಜೂರಾಗಿದೆ, ಕಟ್ಟಡ ನಿರ್ಮಾಣದ ಸಂಬಂಧ ಜಿಲ್ಲಾಡಳಿತ, ನ್ಯಾಯಾಧೀಶರು ಸ್ಥಳ ಪರಿಶೀಲನೆ ನಡೆಸಿದ್ದರೂ ಅನಗತ್ಯ ವಿಳಂಬ ಮಾಡಲಾಗುತ್ತಿದೆ’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀಧರ್ ದೂರಿದರು.

‘ಹೈಕೋರ್ಟ್‌ನ ಪ್ರಮುಖರು ಉದ್ದೇಶಿತ ನ್ಯಾಯಾಲಯ ಸಂಕೀರ್ಣಕ್ಕೆ ಲಭ್ಯವಿರುವ ಜಾಗ ಪರಿಶೀಲಿಸಿ ಹೋಗಿದ್ದರು. ನಂತರ ಹಲವು ಬಾರಿ ಸ್ಥಳ ಪರಿಶೀಲನೆ ನಡೆದಿದ್ದು, ನೂತನ ಕಟ್ಟಡ ನಿರ್ಮಾಣದ ಭರವಸೆ ಕಡತದಲ್ಲೇ ಉಳಿದಿದೆ. ಜಿಲ್ಲೆಯ ಬಂಗಾರಪೇಟೆ, ಮುಳಬಾಗಿಲಿನಲ್ಲಿ ನೂತನ ನ್ಯಾಯಾಲಯ ಸಂಕೀರ್ಣ ನಿರ್ಮಿಸಲಾಗಿದೆ. ಆದರೆ, ಜಿಲ್ಲಾ ಕೇಂದ್ರದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಿಸಲು ಸರ್ಕಾರ ಮೀನಮೇಷ ಎಣಿಸುತ್ತಿದೆ’ ಎಂದು ಆರೋಪಿಸಿದರು.

ಸೌಕರ್ಯಗಳಿಲ್ಲ: ‘ನ್ಯಾಯಾಲಯ ಸಂಕೀರ್ಣ ತುಂಬಾ ಕಿರಿದಾಗಿದ್ದು, ಸ್ಥಳಾವಕಾಶದ ಕೊರತೆಯಿದೆ. ವಾಹನ ನಿಲುಗಡೆಗೆ ಸೂಕ್ತ ಸ್ಥಳ, ಶೌಚಾಲಯ, ವಕೀಲರಿಗೆ ವಿಶ್ರಾಂತಿ ಕೊಠಡಿ, ಕೂರಲು ಆಸನಗಳು, ಕುಡಿಯುವ ನೀರು, ಅಂಗವಿಕಲರು ಮತ್ತು ವಯೋವೃದ್ಧರಿಗೆ ಲಿಫ್ಟ್‌ ಸೌಕರ್ಯವಿಲ್ಲ. ಹೈಕೋರ್ಟ್ ನ್ಯಾಯಮೂರ್ತಿಗಳು ಸ್ಥಳಕ್ಕೆ ಬಂದು ನೂತನ ಕಟ್ಟಡದ ಬೇಡಿಕೆ ಈಡೇರಿಸುವ ಭರವಸೆ ಕೊಡಬೇಕು. ಆವರೆಗೆ ಕಲಾಪ ಬಹಿಷ್ಕರಿಸಿ ಹೋರಾಟ ಮುಂದುವರಿಸುತ್ತೇವೆ’ ಎಂದು ಧರಣಿನಿರತರು ಎಚ್ಚರಿಕೆ ನೀಡಿದರು.

ವಕೀಲರಾದ ಕೆ.ವಿ.ಶಂಕರಪ್ಪ, ಬಿಸಪ್ಪಗೌಡ, ಪಿ.ಎನ್.ಕೃಷ್ಣಾರೆಡ್ಡಿ, ಅಮರೇಂದ್ರ, ಎಂ.ಕೃಷ್ಣ, ಶ್ರೀನಿವಾಸ್‌, ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ವಿ.ಆನಂದ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT