ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಪವಾಗದಂತೆ ಎಚ್ಚರ ವಹಿಸಿ: ಜಿಲ್ಲಾಧಿಕಾರಿ ಜೆ.ಮಂಜುನಾಥ್

ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ
Last Updated 29 ಜನವರಿ 2020, 12:33 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ನಡೆಯುವ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ವಿವಿಧ ಜಿಲ್ಲೆಗಳ ಸ್ಪರ್ಧಿಗಳು ಬರುತ್ತಿದ್ದು, ಊಟ ಹಾಗೂ ವಸತಿ ಸೌಕರ್ಯದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಿ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಸಿದ್ಧತೆ ಸಂಬಂಧ ಇಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಜಿಲ್ಲಾ ಕೇಂದ್ರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಫೆ.5ರಿಂದ 7ರವರೆಗೆ ಮೂರು ದಿನಗಳ ಕಾಲ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ನಡೆಯುತ್ತದೆ’ ಎಂದರು.

‘ಇವೆಂಟ್ ಮ್ಯಾನೇಜ್‌ಮೆಂಟ್‌ ಏಜೆನ್ಸಿಯು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರೂ ಜಿಲ್ಲೆಗೆ ಅತಿಥಿಗಳಾಗಿ ಬರುವ ರಾಜ್ಯದ ಬೇರೆ ಜಿಲ್ಲೆಗಳ ಮಕ್ಕಳಿಗೆ ಯಾವುದೇ ಸಮಸ್ಯೆಯಾಗದಂತೆ ಎಚ್ಚರ ವಹಿಸುವುದು ಅಧಿಕಾರಿಗಳ ಜವಾಬ್ದಾರಿ. ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳುವುದರಿಂದ ಹೆಚ್ಚು ಎಚ್ಚರ ವಹಿಸಿ ಕೆಲಸ ಮಾಡಿ’ ಎಂದು ತಿಳಿಸಿದರು.

‘ರಾಜ್ಯದ ಎಲ್ಲಾ ಜಿಲ್ಲೆಗೂ ಒಬ್ಬೊಬ್ಬರಂತೆ ವಿವಿಧ ಇಲಾಖೆ ಅಧಿಕಾರಿಗಳನ್ನು ಸಂಪರ್ಕಾಧಿಕಾರಿಯಾಗಿ ನೇಮಿಸಿ ಆಯಾ ಜಿಲ್ಲೆಗೆ ಅವರ ದೂರವಾಣಿ ಸಂಖ್ಯೆ ನೀಡಿ. ಆ ಜಿಲ್ಲೆಯ ಮಕ್ಕಳ ಊಟ, ವಸತಿ, ಮೂಲಸೌಕರ್ಯದ ಉಸ್ತುವಾರಿಯನ್ನು ಆ ಅಧಿಕಾರಿ ನಿರ್ವಹಿಸಬೇಕು. ಶಿಕ್ಷಣ ಇಲಾಖೆ ಜತೆಗೆ ಇಲಾಖೆ ಅಧಿಕಾರಿಗಳು ಸಹಕಾರ ನೀಡಬೇಕು. ಇದು ಜಿಲ್ಲೆಯ ಘನತೆ ಪ್ರಶ್ನೆ. ರಾಜ್ಯ ಮಟ್ಟದ ಕಾರ್ಯಕ್ರಮವಾಗಿರುವುದರಿಂದ ಲೋಪವಾದರೆ ಸಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಶುಶ್ರೂಷಕಿ ನಿಯೋಜಿಸಿ: ‘ಮಕ್ಕಳು ಉಳಿದುಕೊಳ್ಳುವ ಪ್ರತಿ ವಸತಿ ಸ್ಥಳದಲ್ಲೂ ತಲಾ ಓಬ್ಬರು ಶುಶ್ರೂಷಕಿಯನ್ನು ಪ್ರಥಮ ಚಿಕಿತ್ಸೆ ಸಿದ್ಧತೆಯೊಂದಿಗೆ ನಿಯೋಜಿಸಬೇಕು. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಆಂಬುಲೆನ್ಸ್‌ ವ್ಯವಸ್ಥೆ ಮಾಡಬೇಕು. ಪ್ರವಾಸೋದ್ಯಮ ಇಲಾಖೆಯು ಜಿಲ್ಲೆಯ ಪ್ರವಾಸಿತಾಣಗಳ ವಿವರವುಳ್ಳ ಕೈಪಿಡಿ ಸಿದ್ಧಪಡಿಸಿ ಮಕ್ಕಳಿಗೆ ಕೊಡಬೇಕು’ ಎಂದು ಹೇಳಿದರು.

‘ಮಕ್ಕಳಿಗಾಗಿ ಸಿದ್ಧಪಡಿಸುವ ಊಟ, ತಿಂಡಿಯನ್ನು ಆಹಾರ ಸುರಕ್ಷತಾ ಅಧಿಕಾರಿಗಳು ದೃಢೀಕರಿಸಿದ ನಂತರವಷ್ಟೇ ವಿತರಣೆ ಮಾಡಬೇಕು. ಸ್ವಚ್ಚತೆಗೆ ಒತ್ತು ಕೊಡಿ. ಮಕ್ಕಳಿಗೆ ಶೌಚಾಲಯ, ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಿ. ಇಡೀ ಕಾರ್ಯಕ್ರಮ ಹಾಗೂ ವಸತಿ ನಿಲಯಗಳಿಗೆ ಪೊಲೀಸ್‌ ಬಂದೋಬಸ್ತ್‌ ಒದಗಿಸಬೇಕು’ ಎಂದರು.

ಪ್ರತ್ಯೇಕ ಕೌಂಟರ್‌: ‘ದೂರದ ಜಿಲ್ಲೆಗಳ ಮಕ್ಕಳು ಫೆ.4ರಂದು ಸಂಜೆ ಬರುವ ಹಿನ್ನಲೆ ಅವರ ನೋಂದಣಿಗೆ ಪ್ರತ್ಯೇಕ ಕೌಂಟರ್ ತೆರೆಯಿರಿ. ಕಾರ್ಯಕ್ರಮ ಫೆ.5ರಂದು ಉದ್ಘಾಟನೆಯಾಗಲಿದ್ದು, ಫೆ.5 ಮತ್ತು 6ರಂದು ಸಂಜೆ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ’ ಎಂದು ಸಲಹೆ ನೀಡಿದರು.

‘ಕಾರ್ಯಕ್ರಮ ನಡೆಯುವ ಸ್ಥಳ ಹಾಗೂ ಮಕ್ಕಳು ಉಳಿದುಕೊಳ್ಳುವ ವಸತಿನಿಲಯಗಳಲ್ಲಿ ನಿರಂತರ ವಿದ್ಯುತ್ ಸರಬರಾಜಿಗೆ ಬೆಸ್ಕಾಂ ಸಿಬ್ಬಂದಿ ಕ್ರಮ ಕೈಗೊಳ್ಳಬೇಕು. ಮಕ್ಕಳಿಗೆ ಯಾವುದೇ ಸಮಸ್ಯೆಯಾಗದಂತೆ ಶಿಕ್ಷಣ ಇಲಾಖೆ ಜತೆಗೆ ನಗರಸಭೆ ಹಾಗೂ ಎಲ್ಲಾ ಇಲಾಖೆಗಳು ಸಹಕಾರ ನೀಡಬೇಕು’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪುಷ್ಪಲತಾ, ಶಿಕ್ಷಣಾಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಆರ್.ಅಶೋಕ್, ಕೆ.ಎಸ್.ನಾಗರಾಜಗೌಡ, ಉಮಾದೇವಿ, ಕೆಂಪಯ್ಯ, ಡಿವೈಪಿಸಿ ಮೋಹನ್‌ಬಾಬು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT