ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಫೆ.11ರಿಂದ ರಾಜ್ಯ ಮಾಸ್ಟರ್‌ ಅಥ್ಲೆಟಿಕ್ಸ್‌

ಕೂಟದಲ್ಲಿ 300ಕ್ಕೂ ಅಧಿಕ ಅಥ್ಲೀಟ್‌ಗಳು ಭಾಗಿ ನಿರೀಕ್ಷೆ: ರಂಗನಾಥ್‌
Last Updated 3 ಫೆಬ್ರುವರಿ 2023, 6:11 IST
ಅಕ್ಷರ ಗಾತ್ರ

ಕೋಲಾರ: ಕರ್ನಾಟಕ ಮಾಸ್ಟರ್‌ ಅಥ್ಲೆಟಿಕ್‌ ಸಂಸ್ಥೆ ಹಾಗೂ ಕೋಲಾರ ಜಿಲ್ಲಾ ವೆಟರನ್ಸ್‌ ಅಥ್ಲೆಟಿಕ್‌ ಸಂಸ್ಥೆ ಆಶ್ರಯದಲ್ಲಿ 41ನೇ ರಾಜ್ಯ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟವನ್ನು ಫೆ.11 ಮತ್ತು 12 ರಂದು ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ನಡೆಸಲಾಗುವುದು ಎಂದು ರಾಷ್ಟ್ರೀಯ ವೆಟರನ್ಸ್‌ ಅಥ್ಲೆಟಿಕ್‌ ಸಂಸ್ಥೆ ಅಧ್ಯಕ್ಷ ಎಂ.ಆರ್‌.ರಂಗನಾಥ್‌ ತಿಳಿಸಿದರು.

‘ರಾಜ್ಯದ 31 ಜಿಲ್ಲೆಗಳಿಂದ 300ಕ್ಕೂ ಅಧಿಕ ಅಥ್ಲೀಟ್‌ಗಳು ಭಾಗವಹಿಸುವ ನಿರೀಕ್ಷೆಯಿದೆ. ಅವರಲ್ಲಿ 80ಕ್ಕೂ ಹೆಚ್ಚು ಮಹಿಳಾ ಅಥ್ಲೀಟ್‌ಗಳು ಪಾಲ್ಗೊಳ್ಳುತ್ತಿದ್ದು, 75 ವರ್ಷದ ವಯೋಮಾನದವರೂ ಇರುತ್ತಾರೆ. ಹೊರಗಿನಿಂದ ಬರುವ ಕ್ರೀಡಾಪಟುಗಳಿಗೆ ವಸತಿ, ತಿಂಡಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದು ಗುರುವಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಸ್ವಾತಂತ್ರ್ಯ ಅಮೃತಮಹೋತ್ಸವ ಅಂಗವಾಗಿ 11ರಂದು ಬೆಳಿಗ್ಗೆ 8 ಗಂಟೆಗೆ ಕೋಲಾರಮ್ಮ ದೇಗುಲದಿಂದ ಕ್ರೀಡಾಂಗಣದವರೆಗೆ ಕ್ರೀಡಾಜ್ಯೋತಿ ಓಟವಿರಲಿದೆ’ ಎಂದರು.

‘ಮುಕ್ತ ಕ್ರೀಡಾಕೂಟ ಇದಾಗಿದ್ದು, 30 ವರ್ಷಕ್ಕೆ ಮೇಲಿನ ಯಾರೂ ಪಾಲ್ಗೊಳ್ಳಬಹುದು. ಕ್ರೀಡಾಪಟುಗಳು ಸಂಸ್ಥೆಯ ಸದಸ್ಯರಾಗಿರುವುದು ಕಡ್ಡಾಯವಾಗಿದೆ. 30ರಿಂದ 65 ವಯಸ್ಸಿನವರಿಗೆ ₹ 500, 65ರಿಂದ 75 ವಯಸ್ಸಿನವರಿಗೆ ₹350 ಹಾಗೂ 75ಕ್ಕಿಂತ ಹೆಚ್ಚು ವಯಸ್ಸಿನವರಿಗೆ ₹ 100 ಪ್ರವೇಶ ಶುಲ್ಕ ವಿಧಿಸಲಾಗಿದೆ. 65 ರಿಂದ 80 ವರ್ಷ ವಯಸ್ಸಿನವರು ಯಾವುದಾದರೂ ಮೂರು ಕ್ರೀಡೆಗಳಲ್ಲಿ ಭಾಗವಹಿಸಬಹುದು. ಅವರು ದೇಹ ಕ್ಷಮತೆ ಪ್ರಮಾಣಪತ್ರ ತರಬೇಕು. ಪ್ರವೇಶ ಪತ್ರಗಳನ್ನು ಆಯಾ ಜಿಲ್ಲಾ ಕಾರ್ಯದರ್ಶಿ ಮೂಲಕ ಸಲ್ಲಿಸಬೇಕು. ದಾಖಲೆಗಳೊಂದಿಗೆ ಜಿಲ್ಲಾ ಸಂಸ್ಥೆಯಲ್ಲಿ ₹100 ಪಾವತಿಸಿ ಫೆ.10ರ ವರೆಗೆ ದಾಖಲು ಮಾಡಿಕೊಳ್ಳಬಹುದು’ ಎಂದು ಅವರು ವಿವರಿಸಿದರು.

ಕ್ರೀಡಾಕೂಟದ ನಿರ್ದೇಶಕ ಪಿಎಸ್‌ಬಿ ನಾಯ್ಡು (ಬಾಲು) ಮಾತನಾಡಿ, ‘ಈ ಕ್ರೀಡಾಕೂಟ ಆಯ್ಕೆ ಟ್ರಯಲ್ಸ್‌ ಕೂಡ. ಮೊದಲ ಮೂರು ಸ್ಥಾನ ಪಡೆಯುವ ಅಥ್ಲೀಟ್‌ಗಳು ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಅಥ್ಲೆಟಿಕ್‌ ಕ್ರೀಡಾಕೂಟಕ್ಕೆ ಆಯ್ಕೆ ಆಗಲಿದ್ದಾರೆ. ಅವರಿಗೆ ಟ್ರ್ಯಾಕ್‌ ಸೂಟ್‌ ನೀಡಲಾಗುವುದು’ ಎಂದರು.

ಜಿಲ್ಲೆಯ ಕ್ರೀಡಾಪಟುಗಳು ಮಾಹಿತಿಗೆ ಜಿಲ್ಲಾ ಕಾರ್ಯದರ್ಶಿ ನಾಗೇಶ್‌, ಮೊ: 9483663666 ಸಂಪರ್ಕಿಸಬಹುದು.

ಜಿಲ್ಲಾ ವೆಟರನ್ಸ್‌ ಅಥ್ಲೆಟಿಕ್‌ ಸಂಸ್ಥೆ ಅಧ್ಯಕ್ಷ ಸದಾಶಿವರೆಡ್ಡಿ, ಉಪಾಧ್ಯಕ್ಷ ಕೆ.ಜಯದೇವ್‌, ಕಾರ್ಯದರ್ಶಿ ನಾಗೇಶ್, ಖಜಾಂಚಿ ರೋಹನ್‌ ಕುಮಾರ್‌, ಕೋರ್‌ ಕಮಿಟಿ ನಿರ್ದೇಶಕಿ ಕುರ್ಕಿ ರಾಜೇಶ್ವರಿ, ರಾಜ್ಯ ಸಂಸ್ಥೆ ಖಜಾಂಚಿ ಸಾವಿತ್ರಿ, ರಾಜ್ಯ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಎಚ್‌.ಜಯರಾಮಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT