ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಿಗೆ ಹಾಡಿನಿಂದ ಸಾತ್ವಿಕ ಉದ್ದೀಪನ: ಜಿ.ಅರಿವು ಶಿವಪ್ಪ

Last Updated 2 ಫೆಬ್ರುವರಿ 2021, 15:35 IST
ಅಕ್ಷರ ಗಾತ್ರ

ಕೋಲಾರ: ‘ಹಾಡು ಬರೀ ಹಾಡಲ್ಲ. ಹಾಡು ಎನ್ನುವುದು ಒಂದು ಹಬ್ಬ. ಯಾರು ಹಾಡುಗಾರರಿರುತ್ತಾರೋ ಅವರು ಪ್ರತಿನಿತ್ಯ ಹಬ್ಬ ಅನುಭವಿಸುತ್ತಾರೆ’ ಎಂದು ನಗರದ ಸರ್ಕಾರಿ ಮಹಿಳಾ ಕಾಲೇಜಿನ ಉಪನ್ಯಾಸಕ ಜಿ.ಅರಿವು ಶಿವಪ್ಪ ಅಭಿಪ್ರಾಯಪಟ್ಟರು.

ಈ ನೆಲ ಈ ಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ, ಗಮನ ಮಹಿಳಾ ಸಮೂಹ ಸಂಸ್ಥೆ, ಸ್ವರ್ಣ ಭೂಮಿ ಪ್ರತಿಷ್ಠಾನದ ಸಹಯೋಗದಲ್ಲಿ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜನಪದ ಗಾಯನ ಕಲಿಕಾ ಶಿಬಿರ ಉದ್ಘಾಟಿಸಿ ಮಾತನಾಡಿ, ‘ಹಾಡು ಎನ್ನುವುದು ಜನರನ್ನು ಸಾತ್ವಿಕವಾಗಿ ಉದ್ದೀಪನಗೊಳಿಸಿ ಉತ್ತಮ ಮಾರ್ಗದಲ್ಲಿ ಸಾಗಲು ಸಹಕಾರಿಯಾಗುತ್ತದೆ’ ಎಂದು ಹೇಳಿದರು.

‘ಓಶೋ ರಜನೀಶ್ ಬಹಳ ದೊಡ್ಡ ತತ್ವಜ್ಞಾನಿ ಮತ್ತು ಪ್ರಪಂಚವನ್ನು ಪ್ರಭಾವಿಗೊಳಿಸಿದ ವ್ಯಕ್ತಿ. ಅವರು ಹಾಡನ್ನು ಹೇಗೆಲ್ಲಾ ಅನುಭವಿಸಬಹುದು ಎಂಬ ಬಗ್ಗೆ ತಿಳಿಸಿದ್ದಾರೆ. ಜೀವನದಲ್ಲಿ ಏನೂ ಇಲ್ಲ ಎಂಬುವವರ ಮನದಲ್ಲೂ ಹಾಡು ಚೈತನ್ ತುಂಬಿ ಚೇತರಿಸಿಕೊಳ್ಳುವಂತೆ ಮಾಡುತ್ತದೆ’ ಎಂದು ತಿಳಿಸಿದರು.

‘ಸಿಖ್ ಧರ್ಮಗುರು ಗುರುನಾನಕ್‌ ಹೆಚ್ಚಿಗೆ ಮಾತನಾಡುತ್ತಿರಲಿಲ್ಲ. ಅವರು ಬರೆದಿರುವ ಬರವಣಿಗೆಯನ್ನೇ ಹಾಡು, ರೂಪಕ ಮತ್ತು ಪ್ರವಚನದ ಮೂಲಕವೇ ಪ್ರಚಾರ ಮಾಡುತ್ತಿದ್ದರು. ಕೈವಾರ ನಾರಾಯಣಪ್ಪ ಅವರು ಸಹ ಹಾಡಿನ ಮೂಲಕವೇ ಇಂದಿಗೂ ಪ್ರಚಲಿತರಾಗಿ ಉಳಿದಿದ್ದಾರೆ. ಅವರು ವಿಶೇಷ ಸಂದೇಶವನ್ನು ಹಾಡಿನ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದಾರೆ’ ಎಂದು ವಿವರಿಸಿದರು.

‘ಕೈವಾರ ನಾರಾಯಣಪ್ಪ ಅವರು ಒಂದು ಪ್ರದೇಶಕ್ಕೆ ಸೀಮಿತವಾಗದೆ ಗಡಿ ಆಚೆಗೂ ಆಂಧ್ರಪ್ರದೇಶದಲ್ಲಿ ಹೆಚ್ಚು ಪ್ರಚಲಿತಗೊಂಡಿದ್ದಾರೆ. ತೆಲುಗು ಭಾಷೆಯಲ್ಲೂ ಹೆಚ್ಚು ಬರೆದಿದ್ದಾರೆ. ಘಟ್ಟಹಳ್ಳಿ ಅಂಜನಪ್ಪ ಇಂದಿಗೂ ಹಾಡಿನ ಮೂಲಕ ನಮ್ಮ ನಡುವೆ ಉಳಿದಿದ್ದಾರೆ’ ಎಂದು ಸ್ಮರಿಸಿದರು.

‘ಹಾಡು ಎಂದರೆ ಜೀವಂತವಾಗಿ ಉಳಿಸುವುದು. ಸೂಫಿ ಗುರುಗಳು ಹಾಡು ಹೇಗೆಲ್ಲಾ ಕೆಲಸ ಮಾಡುತ್ತದೆ ಎಂದು ತೋರಿಸಿಕೊಟ್ಟರು. ಹಿಂದೂ ಧರ್ಮದ ಭಕ್ತಿ ಚಳವಳಿ, ಕ್ರೈಸ್ತ ಧರ್ಮದ ಭಜನೆ ಸೇರಿದಂತೆ ಎಲ್ಲಾ ಧರ್ಮದಲ್ಲೂ ಹಾಡು, ಸಂಗೀತ ಬಳಸಿಕೊಂಡಿದ್ದೇವೆ. ರಾಜ್ಯದಲ್ಲಿ ದಲಿತ ಚಳವಳಿಯು ಹಾಡುಗಳಿಂದ ಹೆಚ್ಚು ಪ್ರಚಲಿತಗೊಂಡಿತು. ಹಾಡು ಒಬ್ಬರಿಂದ ಒಬ್ಬರಿಗೆ ಸಂದೇಶ ರವಾನಿಸುತ್ತದೆ. ಗಾಂಧೀಜಿ ಸಹ ಸ್ವಾತಂತ್ರ ಹೋರಾಟಕ್ಕೆ ಹಾಡುಗಳನ್ನು ಬಳಸಿಕೊಂಡಿದ್ದರು’ ಎಂದರು.

ಮೆರುಗು ನೀಡುತ್ತವೆ: ‘ಹಳೇ ಸಂಸ್ಕೃತಿ ಉಳಿಸುವ ಕೆಲಸವಾಗುತ್ತಿದೆ. ಪೂರ್ವಜರು ತಮ್ಮ ಮಾತುಗಳನ್ನು ಹಾಡಿನ ಮೂಲಕ ತಿಳಿಸುತ್ತಿದ್ದರು. ವಿಶೇಷವಾಗಿ ಹಾಡುಗಳು ಸಭೆ ಸಮಾರಂಭಗಳಿಗೆ ಮೆರುಗು ನೀಡುತ್ತವೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್ ಹೇಳಿದರು.

‘ಜೀವನದಲ್ಲಿ ಕಲಿಯುವ ಶಾಲಾ ಶಿಕ್ಷಣಕ್ಕಿಂತ ಕವಿತೆ, ಕಲೆ, ಸಾಹಿತ್ಯ, ಸಂಗೀತ ನೀಡುವ ಶಿಕ್ಷಣವು ಹೆಚ್ಚು ಜೀವನಾನುಭವ ನೀಡುತ್ತದೆ. ಜೀವನವನ್ನು ಸರಿ ದಾರಿಯಲ್ಲಿ ಕೊಂಡೊಯ್ಯಲು ಸಂಗೀತ ಸಹಕಾರಿ’ ಎಂದು ಸೊಸೈಟಿ ಫಾರ್ ಇನ್ಫಾರ್ಮಲ್‌ ಎಜುಕೇಶನ್ ಡೆವಲಪ್‌ಮೆಂಟ್‌ ಸ್ಟಡೀಸ್ ಸಂಸ್ಥೆ ಕಾರ್ಯದರ್ಶಿ ಜಾರ್ಜ್ ಕುಟ್ಟಿ ಅಭಿಪ್ರಾಯಪಟ್ಟರು.

ನಗರಸಭೆ ಸದಸ್ಯೆ ಸಂಗೀತಾ, ಗಮನ ಮಹಿಳಾ ಸಮೂಹದ ಸಂಸ್ಥೆ ಸದಸ್ಯೆ ಶಾಂತಮ್ಮ, ಸ್ವರ್ಣ ಭೂಮಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಶಿವಕುಮಾರ್‌, ಈ ನೆಲ ಈ ಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಬಿ.ವೆಂಕಟಾಚಲಪತಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT