ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯ ಪುಸ್ತಕ ಕೇಸರೀಕರಣ ನಿಲ್ಲಿಸಿ

Last Updated 27 ಮೇ 2022, 15:05 IST
ಅಕ್ಷರ ಗಾತ್ರ

ಕೋಲಾರ: ‘ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ಶಾಲಾ ಪಠ್ಯಪುಸ್ತಕಗಳನ್ನು ಕೇಸರೀಕರಣಗೊಳಿಸುತ್ತಿದ್ದು, ಕೂಡಲೇ ಪಠ್ಯ ಪರಿಷ್ಕರಣೆ ನಿಲ್ಲಿಸಬೇಕು. ‍ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಅವರನ್ನು ವಜಾಗೊಳಿಸಬೇಕು’ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಗೊಲ್ಲಹಳ್ಳಿ ಶಿವಪ್ರಸಾದ್ ಆಗ್ರಹಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಸೇರಿದಂತೆ ಶೈಕ್ಷಣಿಕವಾಗಿ ಹಲವು ಗೊಂದಲಗಳಿಗೆ ಕಾರಣವಾಗುತ್ತಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರಾಜೀನಾಮೆ ನೀಡಬೇಕು. ಇಲ್ಲವಾದರೆ ಮುಖ್ಯಮಂತ್ರಿಗಳೇ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು’ ಎಂದು ಒತ್ತಾಯಿಸಿದರು.

‘‍ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಏಳೂ ಸದಸ್ಯರು ಬ್ರಾಹ್ಮಣರಾಗಿದ್ದು, ಅವರೆಲ್ಲರೂ ದಲಿತ, ಹಿಂದುಳಿದ ಹಾಗೂ ಮುಸ್ಲಿಂ ವಿರೋಧಿ ನಿಲುವು ತಳೆದಿದ್ದಾರೆ. ಇಂತಹ ಸಮಿತಿಯಿಂದ ಮಕ್ಕಳಿಗೆ ಸಮಾನತೆ, ವಿಶ್ವಮಾನವ ಸಂದೇಶ ಸಾರುವ ಪಠ್ಯ ನಿರೀಕ್ಷಿಸಲಾಗದು. ಕುವೆಂಪು ಅವರ ನಾಡಗೀತೆಗೆ ಅವಮಾನ ತೋರಿದ್ದು, ರೋಹಿತ್‌ ಚಕ್ರತೀರ್ಥ ಕೈಗೆ ಪಠ್ಯ ಪರಿಷ್ಕರಣೆ ಜವಾಬ್ದಾರಿ ಒಪ್ಪಿಸಿದ ಸರ್ಕಾರದ ನಿರ್ಧಾರ ಸರಿಯಲ್ಲ’ ಎಂದು ಕಿಡಿಕಾರಿದರು.

‘ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005ರಡಿ ಸಾಹಿತಿ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯು ಸಾಮಾಜಿಕ ನ್ಯಾಯ, ಲಿಂಗ ಸಮಾನತೆ, ಪ್ರಾದೇಶಿಕತೆ ಒಳಗೊಂಡಂತೆ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಪಠ್ಯಕ್ರಮ ರೂಪಿಸಿತ್ತು. ಆ ಪಠ್ಯಗಳನ್ನು ಮಕ್ಕಳು ಕಲಿಯುತ್ತಿದ್ದರು. ಆದರೆ. ಪ್ರಸ್ತುತ ಪರಿಷ್ಕೃತ ಪಠ್ಯಗಳಲ್ಲಿ 10ರಲ್ಲಿ 9 ಬ್ರಾಹ್ಮಣ ಲೇಖಕರದ್ದು. 6 ಮಂದಿ ಪರಿಶಿಷ್ಟ, ಹಿಂದುಳಿದ ವರ್ಗದವರ ಪಠ್ಯ ಕೈಬಿಡಲಾಗಿದೆ. ಹೆಣ್ಣು ಮಕ್ಕಳನ್ನು ಕೀಳಾಗಿ ಕಾಣಲಾಗಿದೆ. ಸ್ವಾಮಿ ವಿವೇಕಾನಂದರ ಪಠ್ಯ ತಿರುಚಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕತ್ತಿ ಸಂಪ್ರದಾಯ: ‘ಬಿಜೆಪಿಯವರು ದೇಶದಲ್ಲಿ ಹಿಂಸೆ, ಕೌರ್ಯ ಹೆಚ್ಚಾಗುವಂತೆ ಮಾಡುತ್ತಿದ್ದಾರೆ. ಪೆನ್ನು ಹಿಡಿಯುವ ಮಕ್ಕಳ ಕೈಗೆ ಕತ್ತಿ ಕೊಡುವ ಸಂಪ್ರದಾಯ ಬೆಳೆಸಲು ಹೊರಟಿದ್ದಾರೆ. ಪರಿಸರ ಸಂರಕ್ಷಣೆ, ವೈಚಾರಿಕತೆ ಬೆಳೆಸುವ ಮತ್ತು ಪ್ರೋತ್ಸಾಹಿಸುವ ಪಠ್ಯ ತರದೆ ಸಮಾಜದ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಮಕ್ಕಳನ್ನು ಶಾಲೆ, ಶಿಕ್ಷಣದಿಂದ ದೂರವಿಡಬೇಕಾದ ಪರಿಸ್ಥಿತಿ ಎದುರಾಗಲಿದೆ’ ಎಂದು ದಲಿತ ಮುಖಂಡ ಎನ್‌.ವೆಂಕಟೇಶ್‌ ಕಳವಳ ವ್ಯಕ್ತಪಡಿಸಿದರು.

ರೈತಪರ ಹೋರಾಟಗಾರ ಕೃಷ್ಣಾರೆಡ್ಡಿ, ಮುಖಂಡ ಸಿ.ಜೆ.ನಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT