ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಪೊದಲ್ಲಿ ಬೀದಿ ನಾಟಕ ಪ್ರದರ್ಶನ

ರಸ್ತೆ ಸುರಕ್ಷತಾ ಸಪ್ತಾಹ: ಸಂಚಾರ ನಿಯಮ ಪಾಲನೆ ಅರಿವು
Last Updated 29 ಜನವರಿ 2020, 13:48 IST
ಅಕ್ಷರ ಗಾತ್ರ

ಕೋಲಾರ: ಇಲ್ಲಿನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್‌ ಡಿಪೊದಲ್ಲಿ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಬಿಎಂಟಿಸಿ ನೌಕರರು ಬುಧವಾರ ‘ಬದುಕಿ -ಬದುಕಿಸು’ ಬೀದಿ ನಾಟಕ ಪ್ರದರ್ಶಿಸಿ ಸಂಚಾರ ನಿಯಮ ಪಾಲನೆಯ ಅರಿವು ಮೂಡಿಸಿದರು.

ಬಿಎಂಟಿಸಿ ಸಾಂಸ್ಕೃತಿಕ ಕಲಾ ತಂಡವು ಸಂಸ್ಥೆಯ ಅಧಿಕಾರಿಗಳು ಮತ್ತು ನೌಕರರ ಸಮ್ಮುಖದಲ್ಲಿ ಪ್ರದರ್ಶಿಸಿದ ಬೀದಿ ನಾಟಕವು ಸಾರಿಗೆ ಸಂಸ್ಥೆಯ ಮಹತ್ವದ ಬಗ್ಗೆ ಅರಿವು ಮೂಡಿಸಿತು. ಸಂಸ್ಥೆ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಏನೆಲ್ಲಾ ಸುರಕ್ಷತೆ ಸಿಗುತ್ತದೆ, ಪ್ರಯಾಣಿಕರು ಹೇಗೆ ವರ್ತಿಸಬೇಕು, ಸಿಬ್ಬಂದಿ ಸಂಸ್ಥೆಯನ್ನು ಹೇಗೆ ಗೌರವಿಸಬೇಕೆಂಬ ವಿಚಾರವನ್ನು ಕಲಾವಿದರು ಮನಮುಟ್ಟುವಂತೆ ಅಭಿನಯಿಸಿದರು.

ಸಣ್ಣ ಪುಟ್ಟ ತಪ್ಪಿನಿಂದ ಅಪಘಾತ ಸಂಭವಿಸುತ್ತವೆ, ಅಪಘಾತ ಸಂಭವಿಸಿದಾಗ ಸಾರ್ವಜನಿಕರು ಹೇಗೆ ಬಸ್‌ಗಳ ಮೇಲೆ ಕಲ್ಲು ತೂರಿ ನಾಶ ಪಡಿಸುತ್ತಾರೆ, ಇದರಿಂದ ಆಗುವ ಪರಿಣಾಮವೇನು, ಸಾರ್ವಜನಿಕರೊಂದಿಗೆ ಸಿಬ್ಬಂದಿ ಮತ್ತು ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಹೇಗೆ ವರ್ತಿಸಬೇಕೆಂಬ ವಿಚಾರವನ್ನು ನಾಟಕದ ಮೂಲಕ ಪ್ರಸ್ತುತಪಡಿಸಲಾಯಿತು.'

ವಿನೂತನ ಪ್ರಯತ್ನ: ನಾಟಕಕ್ಕೆ ಚಾಲನೆ ನೀಡಿದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್, ‘ಅಪಘಾತಗಳ ಕುರಿತು ಸಾರ್ವಜನಿಕರಿಗೆ ಹಾಗೂ ಸಿಬ್ಬಂದಿಗೆ ಅರಿವು ಮೂಡಿಸಲು ಬೀದಿ ನಾಟಕದ ವಿನೂತನ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ವಿವರಿಸಿದರು.

‘ಕೋಲಾರ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರ ಬಸ್ ನಿಲ್ದಾಣ ಹಾಗೂ ಡಿಪೊಗಳಲ್ಲಿ ಬೀದಿ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ವೇಳಾಪಟ್ಟಿ ಪ್ರಕಟಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಸುರಕ್ಷತೆಗೆ ಒತ್ತು ಕೊಡಿ: ‘ರಸ್ತೆ ಸುರಕ್ಷತಾ ಸಪ್ತಾಹದ ಭಾಗವಾಗಿ ಕೆಎಸ್‌ಆರ್‌ಟಿಸಿ ಸಂಸ್ಥೆಯು ವಿವಿಧ ಕಾರ್ಯಕ್ರಮ ನಡೆಸುತ್ತಿದೆ. ವಾಹನ ಚಾಲಕರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ಅಪಘಾತ ಸಂಭವಿಸುತ್ತಿವೆ. ಚಾಲಕರು ಈ ಸಂಗತಿ ಅರಿತು ಸುರಕ್ಷಿತಾ ಚಾಲನೆಗೆ ಒತ್ತು ಕೊಡಬೇಕು’ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಾಘವೇಂದ್ರ ಕಿವಿಮಾತು ಹೇಳಿದರು.

‘ಬಸ್‌ ನಿರ್ವಾಹಕರು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಾಹನದ ಫುಟ್‌ಬೋರ್ಡ್‌ ಭಾಗದಲ್ಲಿ ನಿಂತು ಪ್ರಯಾಣಿಸುವುದಕ್ಕೆ ಅವಕಾಶ ಕೊಡಬಾರದು’ ಎಂದು ಸಲಹೆ ನೀಡಿದರು.

ನಗರದ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಬೀದಿ ನಾಟಕ ಪ್ರದರ್ಶಿಸಲಾಯಿತು. ಕೆಎಸ್‌ಆರ್‌ಟಿಸಿ ಪ್ರಾದೇಶಿಕ ಸಾರಿಗೆ ಕಚೇರಿ ಸೂಪರಿಂಟೆಂಡೆಂಟ್‌ ಬಂಡಿಗಲಿ, ವಿಭಾಗೀಯ ತಾಂತ್ರಿಕ ಎಂಜಿನಿಯರ್‌ ಸತೀಶ್, ಕಾರ್ಮಿಕ ಅಧಿಕಾರಿ ನಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT