ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಬೀದಿಗೆ ಬಿತ್ತು ಬೀದಿಬದಿ ವ್ಯಾಪಾರಿಗಳ ಬದುಕು

ಚಿಂತಾಮಣಿ ನಗರ ವ್ಯಾಪ್ತಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಂದಿ ವ್ಯಾಪಾರಿಗಳು
Last Updated 23 ಜನವರಿ 2023, 4:27 IST
ಅಕ್ಷರ ಗಾತ್ರ

ಚಿಂತಾಮಣಿ: ‘ಕೆಲವು ಯೋಜನೆಗಳು ಅನುಷ್ಠಾನಗೊಂಡಿದ್ದರೂ ನೈಜ ಫಲಾನುಭವಿಗಳನ್ನು ತಲುಪುತ್ತಿಲ್ಲ. ಸರ್ಕಾರದ ಯೋಜನೆಗಳನ್ನು ಜನಪ್ರತಿನಿಧಿಗಳ ಹಿಂಬಾಲಕರು ಕಬಳಿಸುತ್ತಿದ್ದಾರೆ. ಬೀದಿ ಬದಿಯಲ್ಲಿ ಕುಳಿತು ವ್ಯಾಪಾರ ಮಾಡುವವರು ಎಲ್ಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ’– ಹೀಗೆ ಆಕ್ರೋಶ ವ್ಯಕ್ತಪಡಿಸುತ್ತಾರೆ ಚಿಂತಾಮಣಿಯ ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದ ಪದಾಧಿಕಾರಿಗಳು.

ಚಿಂತಾಮಣಿ ನಗರದ ಎಂ.ಜಿ. ರಸ್ತೆ, ಜೋಡಿ ರಸ್ತೆ, ಚೇಳೂರು ರಸ್ತೆ, ಆಜಾದ್ ಚೌಕ, ಅಂಜನಿ ಬಡಾವಣೆ, ಎನ್.ಆರ್.‌ ಬಡಾವಣೆ ಸೇರಿ ನಗರದ ಬಹುತೇಕ ಬಡಾವಣೆಗಳ ರಸ್ತೆಗಳ ಬದಿಗಳಲ್ಲಿ ಬೀದಿಬದಿ ವ್ಯಾಪಾರ ನಡೆಯುತ್ತದೆ. ಕೆಲವರು ಕುಳಿತು ವ್ಯಾಪಾರ ಮಾಡಿದರೆ, ಕೆಲವರು ತಳ್ಳುವ ಗಾಡಿಗಳಲ್ಲಿ, ಮತ್ತಷ್ಟು ಮಂದಿ ಟೆಂಪೊ‌ಗಳನ್ನು ನಿಲ್ಲಿಸಿಕೊಂಡು ವ್ಯಾಪಾರ ಮಾಡುವರು.

ಇಂತಹ ಬೀದಿಬದಿ ವ್ಯಾಪಾರಿಗಳ ಬದುಕನ್ನು ಹಸನುಗೊಳಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಅವು ವ್ಯಾಪಾರಿಗಳನ್ನು ತಲುಪಿವೆಯೇ? ಅವರ ಬದುಕಿನಲ್ಲಿ ಸ್ವಲ್ಪವಾದರೂ ಬದಲಾವಣೆ ಆಗಿದೆಯೇ ಎಂದರೆ ‘ವ್ಯಾಪಾರಿಗಳೇ ಇಲ್ಲ’ ಎಂದು ಉತ್ತರಿಸುತ್ತಾರೆ.

ನಗರದಲ್ಲಿ ಒಂದು ಸಾವಿರ ಮಂದಿ ಬೀದಿ ಬದಿ ವ್ಯಾಪಾರಸ್ಥರು ಇದ್ದಾರೆ. ಅದರಲ್ಲಿ 850 ಮಂದಿ ನಗರಸಭೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಚಿಂತಾಮಣಿಯ ರಸ್ತೆಗಳ ಬದಿ ವ್ಯಾಪಾರ ಮಾಡುವ ನೂರಾರು ಕುಟುಂಬಗಳ ಬದುಕು ಹಸನಾಗಿಲ್ಲ. ಬಿಸಿಲು, ಮಳೆ, ಗಾಳಿ ಎನ್ನದೆ ದುಡಿದರೂ ಜೀವನ ಸಾಗಿಸುವುದು ದುಸ್ತರವಾಗಿದೆ. ಬೀದಿ ಬದಿ ವ್ಯಾಪಾರಿಗಳ ಹಿತಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ವ್ಯಾಪಾರದ ಸ್ಥಳದಲ್ಲಿ ಸುರಕ್ಷತೆ, ಸಾಮಾಜಿಕ ಭದ್ರತೆ, ಆರೋಗ್ಯಕರ ಸವಲತ್ತು ಪಡೆಯುವ ಹಕ್ಕುಗಳು ಇವೆ. ಬೀದಿ ಬದಿಯ ವ್ಯಾಪಾರಸ್ಥರ ಅನುಕೂಲಕ್ಕಾಗಿಯೇ ಕೇಂದ್ರ ಸರ್ಕಾರ 2014ರಲ್ಲಿ ಕಾನೂನು ಜಾರಿಗೆ ತಂದಿದೆ.

‘ವ್ಯಾಪಾರಿಗಳ ಹಿತಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಕಾನೂನು, ಯೋಜನೆಗಳು ಕಾಗದದ ಮೇಲಿವೆ. ಯಾವುದೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಯೋಜನೆಗಳನ್ನು ರೂಪಿಸಿ ಪ್ರಚಾರ ಪಡೆಯುವುದು ಮುಖ್ಯವಲ್ಲ. ಸಮರ್ಪಕವಾಗಿ ಅನುಷ್ಠಾನಗೊಂಡು ಫಲಾನುಭವಿಗಳಿಗೆ ತಲುಪಿದಾಗ ಮಾತ್ರ ವ್ಯಾಪಾರಿಗಳ ಬದುಕು ಹಸನಾಗುತ್ತದೆ’ ಎಂದು ಬೀದಿ ಬದಿ ವ್ಯಾಪಾರಸ್ಥ ಒಕ್ಕೂಟದ ಅಧ್ಯಕ್ಷ ಸಯ್ಯದ್ ಸೂಫಿ ನುಡಿಯುವರು.

ಬೀದಿ ಬದಿಯ ವ್ಯಾಪಾರಿಗಳಿಗೆ ಪುನರ್ವಸತಿ ಕಲ್ಪಿಸುವ ಯೋಜನೆಗಳು ಸಹ ಒಂದು ಪಕ್ಷದ ಕಾರ್ಯಕರ್ತರ ಪಾಲಾಗುತ್ತಿವೆ ಎಂಬ ಆರೋಪಗಳಿವೆ. ಫಲಾನುಭವಿಗಳಿಗೆ ನಗರಸಭೆಯಿಂದ ಗುರುತಿನ ಚೀಟಿ ವಿತರಿಸುವಲ್ಲೂ ರಾಜಕೀಯ ನುಸುಳುತ್ತದೆ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಕರೆ ತರುವವರಿಗೆ ಮಾತ್ರ ಚೀಟಿ ಮಾಡಿಕೊಡಲಾಗುತ್ತದೆ. ಸಮರ್ಪಕವಾಗಿ ಸಮೀಕ್ಷೆ ನಡೆಸಿ ನೈಜ ಫಲಾನುಭವಿಗಳಿಗೆ ಗುರುತಿನ ಚೀಟಿ ನೀಡಿ ಸರ್ಕಾರದ ಸವಲತ್ತುಗಳನ್ನು ಪಡೆಯಲು ನೆರವಾಗಬೇಕು ಎಂದು ವ್ಯಾಪಾರಿಗಳು ಮನವಿ ಮಾಡುತ್ತಾರೆ.

ನಿರುಪಯುಕ್ತ ಮಳಿಗೆಗಳು: ನಗರದಲ್ಲಿ ರಾಮಕುಂಟೆ ಪ್ರದೇಶ, ಗ್ರಂಥಾಲಯ ಸಮೀಪ ₹1.15 ಕೋಟಿ ಖರ್ಚು ಮಾಡಿ ನಿರ್ಮಿಸಿರುವ ಮಳಿಗೆಗಳು ಶಿಥಿಲವಾಗಿ ನಿರುಪಯುಕ್ತವಾಗಿವೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಮೂರು ಕಡೆ ಮಳಿಗೆಗಳನ್ನು
ನಿರ್ಮಿಸಿಕೊಡಬೇಕು.

ಕೇವಲ 5*5 ಅಡಿಯ ಅತ್ಯಂತ ಚಿಕ್ಕ ಮಳಿಗೆಗಳಾಗಿವೆ. ಬಾಗಿಲುಗಳು ಇಲ್ಲ. ಪ್ರತಿನಿತ್ಯ ಬೆಳಿಗ್ಗೆ ವ್ಯಾಪಾರದ ವಸ್ತುಗಳನ್ನು ಆಟೊಗಳಲ್ಲಿ ತೆಗೆದುಕೊಂಡು ಹೋಗಬೇಕು. ಸಂಜೆ ವಾಪಸ್ ತರಬೇಕು. ನಿತ್ಯ ಆಟೊಗೆ ಬಾಡಿಗೆ ರೂಪದಲ್ಲಿ ₹100-150 ನೀಡಬೇಕು. ರಾಮಕುಂಟೆ ಪ್ರದೇಶದಲ್ಲಿ ಖಾಸಗಿ ಬಸ್ ನಿಲ್ದಾಣ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಅದನ್ನು ಮಾಡಿಲ್ಲ. ಬಸ್ ನಿಲ್ದಾಣ ಇಲ್ಲದಿದ್ದರೆ ಅಲ್ಲಿಗೆ ಯಾರು ಹೋಗುವುದಿಲ್ಲ. ಹೇಗೆ ವ್ಯಾಪಾರ ಮಾಡುವುದು ಎಂದು ವ್ಯಾಪಾರಿಗಳು ಪ್ರಶ್ನಿಸುತ್ತಾರೆ.

ಬೀದಿ ಬದಿ ವ್ಯಾಪಾರಿಗಳ ಮಳಿಗೆಗಳು ಬಸ್ ನಿಲ್ದಾಣ ಅಥವಾ ಪ್ರಮುಖ ವೃತ್ತಗಳ ಸಮೀಪ ಇರಬೇಕು. ವಿದ್ಯುತ್, ಕುಡಿಯುವ ನೀರು, ಶೌಚಾಲಯ ಮತ್ತಿತರ ಕನಿಷ್ಠ ಸೌಲಭ್ಯಗಳಿರಬೇಕು. ಇಂತಹ ಯಾವುದೇ ವ್ಯವಸ್ಥೆಯೂ ಇಲ್ಲದ ಕಡೆ ಹೇಗೆ ವ್ಯಾಪಾರ
ಮಾಡುವುದು. ಬೀದಿ ಬದಿ ವ್ಯಾಪಾ
ರಸ್ಥರ ಅಭಿವೃದ್ಧಿಗಾಗಿಯೇ ರೂಪಿಸಿರುವ ಡೇ ನಲ್ಮ್ ಯೋಜನೆಯು ಸಹ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಬೀದಿ ಬದಿ ವ್ಯಾಪಾರಸ್ಥರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು. ಮನೆಗಳನ್ನು ನಿರ್ಮಿಸಿಕೊಡಬೇಕು ಅಥವಾ ನಿವೇಶನ ನೀಡಿ ಮನೆ ನಿರ್ಮಾಣಕ್ಕೆ ಅನುದಾನ ನೀಡಬೇಕು. ವ್ಯಾಪಾರ ಮಾಡುತ್ತಿರುವ ಸ್ಥಳಗಳಲ್ಲಿ ಅಥವಾ ಸಮೀಪದಲ್ಲಿ ಮಳಿಗೆಗಳನ್ನು ನಿರ್ಮಿಸಿಕೊಡಬೇಕು. ಕನಿಷ್ಠ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಒದಗಿಸಿಕೊಡುವುದು ಸೇರಿದಂತೆ 11 ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಸಾಮಾನ್ಯಸಭೆಯಲ್ಲಿ ಚರ್ಚೆ

ಬೀದಿ ಬದಿ ವ್ಯಾಪಾರಿಗಳ ಬೇಡಿಕೆಗಳ ಕುರಿತು ನಗರಸಭೆಯ ಸಾಮಾನ್ಯ ಸಭೆಗಳಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಈಗಾಗಲೇ ನಿರ್ಮಾಣ ಮಾಡಿರುವ ಮಳಿಗೆಗಳಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿ ವಿತರಣೆಗೆ ಕ್ರಮಕೈಗೊಳ್ಳಲಾಗುವುದು.

ರಾಘವೇಂದ್ರ ಗುರು, ನಗರಸಭೆ, ಪೌರಾಯುಕ್ತರು, ಚಿಂತಾಮಣಿ

ನಗರಸಭೆಯ ವೈಫಲ್ಯ

ಬೀದಿ ಬದಿ ವ್ಯಾಪಾರಸ್ಥರ ಹಿತರಕ್ಷಣೆಗಾಗಿಯೇ ಕೇಂದ್ರ ಸರ್ಕಾರ ಪ್ರತ್ಯೇಕ ಕಾಯ್ದೆ ರೂಪಿಸಿದ್ದರೂ ಸ್ಥಳೀಯ ನಗರಸಭೆ ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಗಮನಹರಿಸಿಲ್ಲ. ಬೀದಿ ಬದಿ ವ್ಯಾಪಾರಿಗಳು ಸಾಮಾಜಿಕ ಭದ್ರತೆ ಇಲ್ಲದೆ ಅಲೆಮಾರಿಗಳಾಗಿ ಬದುಕುವಂತಾಗಿದೆ.

ರೆಡ್ಡಮ್ಮ, ಉಪಾಧ್ಯಕ್ಷೆ, ಬೀದಿ ಬದಿ ವ್ಯಾಪಾರಿಗಳ ಒಕ್ಕೂಟ, ಚಿಂತಾಮಣಿ

ಸೌಲಭ್ಯ ಒದಗಿಸಬೇಕು

ಬೀದಿ ಬದಿ ವ್ಯಾಪಾರಿಗಳು ಕೂಡ ಸಮಾಜಕ್ಕೆ ಅತ್ಯವಶ್ಯ ಎಂಬುದನ್ನು ಮರೆಯಬಾರದು. ನಮ್ಮ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಕೇಂದ್ರದ ಕಾಯ್ದೆಯಂತೆ ಸಾಲ ಮತ್ತಿತರ ಸೌಲಭ್ಯಗಳನ್ನು ಒದಗಿಸಬೇಕು.

ಪಾರ್ವತಮ್ಮ, ಬೀದಿ ಬದಿ ವ್ಯಾಪಾರಿ, ಚಿಂತಾಮಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT