ಶನಿವಾರ, ನವೆಂಬರ್ 26, 2022
23 °C

ರಸ್ತೆ ಕಾಮಗಾರಿ ಕಳಪೆಯಾಗಿದ್ದರೆ ಕಠಿಣ ಕ್ರಮ: ಗುತ್ತಿಗೆದಾರರಿಗೆ ಮುನಿರತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಕೋಲಾರ ಜಿಲ್ಲೆಯ ರಸ್ತೆಗಳು ಹದಗೆಟ್ಟಿದ್ದು, ಅ.10ರಿಂದ ಐದು ದಿನ ಪ್ರತಿ ತಾಲ್ಲೂಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಗುತ್ತಿಗೆದಾರರನ್ನೂ ಕರೆಸುತ್ತೇನೆ. ಕಾಮಗಾರಿ ಕಳಪೆಯಾಗಿದ್ದರೆ ಅಂಥವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಎಚ್ಚರಿಕೆ ನೀಡಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ರಸ್ತೆ ಕಾಮಗಾರಿಯ ಗುಣಮಟ್ಟ ಪರಿಶೀಲನೆ ಕಾರ್ಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸರ್ಕಾರಕ್ಕೂ ಗುತ್ತಿಗೆದಾರರಿಗೂ ಸಂಬಂಧವಿಲ್ಲ, ಕಾರ್ಯಾದೇಶ ಕೊಟ್ಟ ಮೇಲೆ ಗುಣಮಟ್ಟದ ಕಾಮಗಾರಿ ಮಾಡಿರಲೇಬೇಕು. ತಪ್ಪು ಮಾಡಿದವರು ತಪ್ಪಿಸಿಕೊಂಡು ಹೋಗಲು ಬಿಡುವುದಿಲ್ಲ’ ಎಂದರು. 

‘ಹಿಂದೆ ಯಾರು ಕೆಲಸ ಮಾಡಿದ್ದಾರೆ, ಯಾರು ಗುಣಮಟ್ಟ ಪರಿಶೀಲಿಸಿದ್ದಾರೆ ಅವರೆಲ್ಲರೂ ಇರಬೇಕು. ಈಗ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನೂ ಪರಿಶೀಲಿಸಲಾಗುವುದು. ಕದ್ದುಮುಚ್ಚಿ ಕೆಲಸ ಮಾಡುವ ಪ್ರಮೇಯವೇ ಇಲ್ಲ. ಗುತ್ತಿಗೆದಾರರ ಆರೋಪಗಳಿಗೆ ಹೆದರಿ ಹಿಂದೆ ಹೋಗುವ ಮಾತೇ ಇಲ್ಲ’ ಎಂದು ನುಡಿದರು.

‘ನನ್ನ ಮೇಲೆ ಆರೋಪ ಮಾಡಿದ ಕೂಡಲೇ₹  50 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ಕ್ರಿಮಿನಲ್ ಪ್ರಕರಣವನ್ನೂ ದಾಖಲಿಸಲಾಗಿದೆ. ಗುತ್ತಿಗೆದಾರರ ಸಂಘದ 19 ಮಂದಿ ಹೆಸರನ್ನೂ ನಮೂದಿಸಿದ್ದೇನೆ. ಎಲ್ಲರಿಗೂ ನೋಟಿಸ್‌ ಹೋಗಿದೆ. ಎಲ್ಲರೂ ನ್ಯಾಯಾಲಯಕ್ಕೆ ಬಂದು ಉತ್ತರ ನೀಡಿ, ದಾಖಲೆ ಹಾಜರುಪಡಿಸಬೇಕು’ ಎಂದರು.

‘ಆರೋಪ ಮಾಡಿದ ತಕ್ಷಣ ಕಾಮಗಾರಿಯ ಪರಿಶೀಲನೆ ಮಾಡುವುದಿಲ್ಲ ಎನ್ನುವುದು ಅವರ ಭ್ರಮೆ. ಒಬ್ಬ ವ್ಯಕ್ತಿಯ ಮೇಲೆ ಸುಳ್ಳು ಆರೋಪ ಮಾಡಿದರೆ ಅದರ ಪರಿಣಾಮ ಹೇಗಿರುತ್ತದೆ ಎನ್ನುವುದನ್ನು ತೋರಿಸುತ್ತೇನೆ. ಜಿಲ್ಲೆಯ ರಸ್ತೆಗಳಲ್ಲಿ ಯಾರಾದರೂ ಓಡಾಡಲು ಸಾಧ್ಯವೇ? ಅವರ ಮನಃಸಾಕ್ಷಿ ಒಪ್ಪುವಂಥ ಕೆಲಸ ಮಾಡುವುದು ಬೇಡವೇ’ ಎಂದು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು