ಗುರುವಾರ , ಜುಲೈ 29, 2021
21 °C
ರೈತರು– ಕಾರ್ಮಿಕರ ಹಿತ ಕಾಯುವಲ್ಲಿ ವಿಫಲ: ಆರೋಪ

ಕೇಂದ್ರ– ರಾಜ್ಯ ಸರ್ಕಾರದ ವಿರುದ್ಧ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರೈತರು ಹಾಗೂ ಕಾರ್ಮಿಕರ ಹಿತ ಕಾಯುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿವೆ ಎಂದು ಆರೋಪಿಸಿ ಕಾಂಗ್ರೆಸ್ ಕಿಸಾನ್ ಖೇತ್ ಘಟಕದ ಸದಸ್ಯರು ಇಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

‘ದೇಶವು ಮೊದಲೇ ಆರ್ಥಿಕ ಬಿಕ್ಕಟ್ಟಿನಿಂದ ನರಳುತ್ತಿತ್ತು. ಕೊರೊನಾ ಸೋಂಕಿನ ಕಾರಣಕ್ಕೆ ಲಾಕ್‌ಡೌನ್‌ ಜಾರಿಯಾದ ನಂತರ ದೇಶದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಇದರಿಂದ ಕೃಷಿಕರು, ಕಾರ್ಮಿಕರು, ಬಡವರು, ದಲಿತರ ಬದುಕು ಬರ್ಬರವಾಗಿದೆ’ ಎಂದು ಧರಣಿನಿರತರು ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರ ಬಡ ಜನರ ಬದುಕು ಸುಧಾರಿಸುವ ಪ್ರಯತ್ನ ಮಾಡುತ್ತಿಲ್ಲ. ಬದಲಿಗೆ ಬಂಡವಾಳಶಾಹಿಗಳು ಹಾಗೂ ಕಾರ್ಪೊರೇಟ್‌ ಕಂಪನಿಗಳಿಗೆ ಸಾರ್ವಜನಿಕರ ಸಂಪನ್ಮೂಲಗಳ ನೆರವು ನೀಡುತ್ತಿದೆ. ಕೋವಿಡ್‌–19ನ ಸಂದರ್ಭ ಬಳಸಿಕೊಂಡು ತೆರೆಮರೆಯಲ್ಲಿ ಸುಗ್ರೀವಾಜ್ಞೆ ಮೂಲಕ ಜನವಿರೋಧಿ ಕಾನೂನು ಜಾರಿಗೊಳಿಸುತ್ತಿದೆ’ ಎಂದು ಕಾಂಗ್ರೆಸ್ ಕಿಸಾನ್ ಖೇತ್ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್ ದೂರಿದರು.

‘ಸರ್ಕಾರವು ರೈತರನ್ನು ಲೂಟಿ ಮಾಡಲು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದೆ. ಎಪಿಎಂಸಿಗಳನ್ನು ನಿಯಂತ್ರಣದಿಂದ ಮುಕ್ತಗೊಳಿಸಿ ಕಾರ್ಪೊರೇಟ್‌ ಕಂಪನಿಗಳ ಲೂಟಿಗೆ ಅವಕಾಶ ನೀಡಿದೆ. ಕೊರೊನಾ ಕಾರಣಕ್ಕೆ ಕೇಂದ್ರ ಘೋಷಿಸಿರುವ ₹ 20 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್‌ ದೊಡ್ಡ ಸುಳ್ಳಿನ ಕಂತೆ. ಜನರ ತಲಾ ಆದಾಯ ಹೆಚ್ಚಿಸುವ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ದೇಶವನ್ನು ಪಾರು ಮಾಡುವ ನೀತಿ ಜಾರಿಗೆ ತಂದಿಲ್ಲ’ ಎಂದು ಕಿಡಿಕಾರಿದರು.

ಭರವಸೆ ಹುಸಿ: ‘ಕೈಗಾರಿಕೆಗಳು ಸ್ಥಗಿತಗೊಂಡಿರುವುದರಿಂದ ಕಾರ್ಮಿಕರಿಗೆ ಜೀವನ ನಡೆಸುವುದು ಕಷ್ಟವಾಗಿದೆ. ಜನರ ಖಾತೆಗೆ ಹಣ ತುಂಬುವುದಾಗಿ ಕೇಂದ್ರ ನೀಡಿರುವ ಭರವಸೆ ಹುಸಿಯಾಗಿದೆ. ಜನಸಾಮಾನ್ಯರು ಹಣಕ್ಕಾಗಿ ಪ್ರತಿನಿತ್ಯ ಬ್ಯಾಂಕ್‌ಗೆ ಅಲೆಯುವಂತಾಗಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಒಬಿಸಿ ಘಟಕದ ಅಧ್ಯಕ್ಷ ಮಂಜುನಾಥ್ ಆರೋಪಿಸಿದರು.

‘ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸಬೇಕು. ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ಎಲ್ಲಾ ಸಮುದಾಯದ ಜನರಿಗೂ ಹಣಕಾಸು ನೆರವು ನೀಡಬೇಕು. ಇಲ್ಲವಾದರೆ ರೈತರು, ಕಾರ್ಮಿಕರು ಬೀದಿಗಿಳಿದು ಹೋರಾಟ ಮಾಡುತ್ತಾರೆ’ ಎಂದು ಧರಣಿನಿರತರು ಎಚ್ಚರಿಕೆ ನೀಡಿದರು.

ಕಾಂಗ್ರೆಸ್‌ ಕಿಸಾನ್ ಖೇತ್ ಜಿಲ್ಲಾ ಘಟಕದ ಸದಸ್ಯರಾದ ಪದಾಧಿಕಾರಿಗಳಾದ ಉದಯಶಂಕರ್, ಅಶೋಕ್, ನಾಗಣ್ಣ, ಚಂದ್ರಶೇಖರ್, ಶಿವಪ್ಪ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು