ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೌರ್ಜನ್ಯ ಆರೋಪ: ಕೆಲಸ ಬಹಿಷ್ಕರಿಸಿ ಪೌರ ಕಾರ್ಮಿಕರ ಧರಣಿ

ನಗರಸಭೆ ಸದಸ್ಯ ಮುರಳಿಗೌಡ ದೌರ್ಜನ್ಯ: ಆರೋಪ
Last Updated 23 ಜನವರಿ 2020, 16:22 IST
ಅಕ್ಷರ ಗಾತ್ರ

ಕೋಲಾರ: ನಗರಸಭೆ 14ನೇ ವಾರ್ಡ್‌ ಸದಸ್ಯ ಎಸ್.ಆರ್.ಮುರಳಿಗೌಡ ಅವರು ಪೌರ ಕಾರ್ಮಿಕರನ್ನು ಅವಾಚ್ಯವಾಗಿ ನಿಂದಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಪೌರ ಕಾರ್ಮಿಕರು ಸಾಮೂಹಿಕವಾಗಿ ಗುರುವಾರ ಕರ್ತವ್ಯ ಬಹಿಷ್ಕರಿಸಿ ನಗರಸಭೆ ಎದುರು ಪ್ರತಿಭಟನೆ ಮಾಡಿದರು.

‘ಮುರಳಿಗೌಡ ಅವರು ನಗರಸಭೆ ವಾಹನ ಚಾಲಕರಾದ ಮಂಜುನಾಥ್, ನಾಗೇಶ್, ಜಗದೀಶ್, ಶಿವಕುಮಾರ್, ಸೀನ, ಶ್ರೀರಾಮ್ ಹಾಗೂ ಶ್ರೀರಾಮ್‌ ಭೋವಿ ಅವರನ್ನು ಜಾತಿನಿಂದನೆ ಮಾಡಿದ್ದಾರೆ. ಅಲ್ಲದೇ, ನಗರಸಭೆ ಕಚೇರಿಯಿಂದ ಹೊರ ಹೋಗುವಂತೆ ಅವರಿಗೆ ಬೆದರಿಕೆ ಹಾಕಿದ್ದಾರೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಮುರಳಿಗೌಡ ಅವರು ಹಿಂದೆಯೂ ಹಲವು ಬಾರಿ ಪೌರ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಈ ಸಂಗತಿಯನ್ನು ನಗರಸಭೆ ಆಯುಕ್ತರು ಹಾಗೂ ಆರೋಗ್ಯ ನಿರೀಕ್ಷಕರ ಗಮನಕ್ಕೆ ತರಲಾಗಿತ್ತು. ಆದರೆ, ಮುರಳಿಗೌಡರ ವಿರುದ್ಧ ಶಿಸ್ತುಕ್ರಮ ಜರುಗಿಸಿಲ್ಲ. ಸದಸ್ಯರ ಸರ್ವಾಧಿಕಾರಿ ಧೋರಣೆಯಿಂದ ಕೆಲಸ ನಿರ್ವಹಿಸುವುದೇ ಕಷ್ಟವಾಗಿದೆ’ ಎಂದು ಪೌರ ಕಾರ್ಮಿಕರು ಅಳಲು ತೋಡಿಕೊಂಡರು.

‘ಮುರಳಿಗೌಡರ ವಿರುದ್ಧ ದಲಿತರ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಜತೆಗೆ ಅವರ ಸದಸ್ಯತ್ವ ರದ್ದುಪಡಿಸಬೇಕು. ಪೌರ ಕಾರ್ಮಿಕರಿಗೆ ಕಿರುಕುಳ ನೀಡುತ್ತಿರುವ ಅವರನ್ನು ತಕ್ಷಣವೇ ಬಂಧಿಸಬೇಕು. ಇಲ್ಲದಿದ್ದರೆ ನಗರದ ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಶಿಸ್ತುಕ್ರಮದ ಭರವಸೆ: ಪ್ರತಿಭಟನಾ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಜೆ.ಮಂಜುನಾಥ್, ‘ಮುರಳಿಗೌಡ ಸೇರಿದಂತೆ ನಗರಸಭೆಯ ಕೆಲ ಸದಸ್ಯರು ವೈಯಕ್ತಿಕ ಕಾರಣಕ್ಕೆ ಅಧಿಕಾರಿಗಳ ವಿರುದ್ಧ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇವರ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ. ಪೌರ ಕಾರ್ಮಿಕರು ಪ್ರತಿಭಟನೆ ಕೈಬಿಟ್ಟು ಕೆಲಸಕ್ಕೆ ಹಾಜರಾಗಬೇಕು’ ಎಂದು ಮನವಿ ಮಾಡಿದರು. ನಂತರ ಪೌರ ಕಾರ್ಮಿಕರು ಹೋರಾಟ ಸ್ಥಗಿತಗೊಳಿಸಿ ಕೆಲಸಕ್ಕೆ ತೆರಳಿದರು.

ಅಂಬೇಡ್ಕರ್ ಸೇವಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಂ.ಸಂದೇಶ್ ಹಾಗೂ ಪೌರ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT