ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶು ವೈದ್ಯರ ವಿರುದ್ಧ ಧರಣಿ

ರೈತರ ಹಿತ ಕಾಯುವಲ್ಲಿ ವಿಫಲ: ರೈತ ಸಂಘ ಸದಸ್ಯರ ಆರೋಪ
Last Updated 22 ಆಗಸ್ಟ್ 2019, 16:09 IST
ಅಕ್ಷರ ಗಾತ್ರ

ಕೋಲಾರ: ಪಶು ವೈದ್ಯರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸದೆ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಗುರುವಾರ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಕಚೇರಿ ಎದುರು ಧರಣಿ ನಡೆಸಿದರು.

‘ಪಶು ವೈದ್ಯರು ಆಸ್ಪತ್ರೆಗಳಿಗೆ ಬರುವುದೇ ಇಲ್ಲ. ಕಾರ್ಯ ಸ್ಥಳ ಬಿಟ್ಟು ಸದಾ ಹೊರಗಿರುವ ವೈದ್ಯರು ಜಾನುವಾರುಗಳ ಆರೋಗ್ಯ ನಿರ್ಲಕ್ಷಿಸಿದ್ದಾರೆ. ವೈದ್ಯರಿಗೆ ಹಣ ಸಂಪಾದನೆಯೇ ಮುಖ್ಯವಾಗಿದೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲೆಯು ಹಾಲು ಉತ್ಪಾದನೆಯಲ್ಲಿ ರಾಜ್ಯದಲ್ಲೇ 2ನೇ ಸ್ಥಾನದಲ್ಲಿದೆ. ಹೈನೋದ್ಯಮವು ಜಿಲ್ಲೆಯ ರೈತರ ಜೀವನಾಡಿಯಾಗಿದೆ. ರೈತರು ಕೃಷಿ ಜತೆಗೆ ಉಪ ಕಸುಬಾಗಿ ಹೈನೋದ್ಯಮ ನಡೆಸುತ್ತಿದ್ದಾರೆ. ಆದರೆ, ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಅಧಿಕಾರಿಗಳು ರೈತರ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.

‘ಸರ್ಕಾರದಿಂದ ಇಲಾಖೆಗೆ ಪೂರೈಕೆಯಾದ ಔಷಧಗಳನ್ನು ಪಶು ಆಸ್ಪತ್ರೆಗಳಿಗೆ ವಿತರಿಸಿಲ್ಲ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಔಷಧಗಳು ಇಲಾಖೆ ಕಚೇರಿಯಲ್ಲೇ ದೂಳು ಹಿಡಿಯುತ್ತವೆ. ಆಸ್ಪತ್ರೆಗಳಲ್ಲಿ ರಾಸುಗಳಿಗೆ ಔಷಧ ಕೇಳಿದರೆ ವೈದ್ಯರು ಇಲಾಖೆಯಿಂದ ಸರಬರಾಜಾಗಿಲ್ಲ ಎಂದು ಸುಳ್ಳು ಹೇಳುತ್ತಾರೆ’ ಎಂದು ಆರೋಪಿಸಿದರು.

ಒಳ ಒಪ್ಪಂದ: ‘ಆಸ್ಪತ್ರೆಗಳಲ್ಲಿ ಪಶು ವೈದ್ಯರು ಖಾಸಗಿ ಅಂಗಡಿಗಳಲ್ಲಿ ರಾಸುಗಳಿಗೆ ಔಷಧ, ಚುಚ್ಚುಮದ್ದು ಖರೀದಿಸುವಂತೆ ಚೀಟಿ ಬರೆದು ಕೊಡುತ್ತಾರೆ. ವೈದ್ಯರು ಹಣದಾಸೆಗೆ ಖಾಸಗಿ ಅಂಗಡಿಗಳ ಮಾಲೀಕರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ’ ಎಂದು ಧರಣಿನಿರತರು ಕಿಡಿಕಾರಿದರು.

‘ರೈತರು ರಾಸುಗಳೊಂದಿಗೆ ಆಸ್ಪತ್ರೆಗೆ ಬಂದರೆ ವೈದ್ಯರು ಲಭ್ಯರಿರುವುದಿಲ್ಲ. ಈ ಬಗ್ಗೆ ವಿಚಾರಿಸಲು ವೈದ್ಯರಿಗೆ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ರೈತರು ರಾಸುಗಳಿಗೆ ಚಿಕಿತ್ಸೆ ಕೊಡಿಸಲು ವೈದ್ಯರನ್ನು ಹುಡುಕಿಕೊಂಡು ಅಲೆಯುವ ಪರಿಸ್ಥಿತಿಯಿದೆ. ಆಸ್ಪತ್ರೆಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ರೈತರು ಲಂಚ ಕೊಡದಿದ್ದರೆ ವೈದ್ಯರು ರಾಸುಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಮಾನತು ಮಾಡಿ: ‘ಕಳಪೆ ಹಿಂಡಿ, ಬೂಸಾ ಮಾರಾಟ ಮಾಡುವ ಖಾಸಗಿ ಅಂಗಡಿಗಳ ಪರವಾನಗಿ ರದ್ದುಪಡಿಸಬೇಕು. ಕಾರ್ಯ ಸ್ಥಳದಲ್ಲಿ ಇರದ ಪಶು ವೈದ್ಯರನ್ನು ಸೇವೆಯಿಂದ ಅಮಾನತು ಮಾಡಬೇಕು. ರಾಸುಗಳಿಗೆ ಅಗತ್ಯವಿರುವ ಚುಚ್ಚುಮದ್ದು, ಔಷಧ ಹಾಗೂ ಮಾತ್ರೆಗಳನ್ನು ಆಸ್ಪತ್ರೆಗಳಿಗೆ ನಿಯಮಿತವಾಗಿ ಪೂರೈಸಬೇಕು’ ಎಂದು ಒತ್ತಾಯಿಸಿದರು.

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್‌, ಕಾರ್ಯಾಧ್ಯಕ್ಷ ಹನುಮಯ್ಯ, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ, ಸದಸ್ಯರಾದ ನಾರಾಯಣ್, ತಿಮ್ಮಣ್ಣ, ವೆಂಕಟೇಶಪ್ಪ, ಮಂಜುನಾಥ್, ಆಂಜಿನಪ್ಪ, ರಂಜಿತ್, ಸಾಗರ್, ಚಂದ್ರಪ್ಪ, ರಾಜು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT