ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಪರಿಹಾರ ಬಿಡುಗಡೆಗೆ ಧರಣಿ

ವಿತರಣೆಯಲ್ಲಿ ಲೋಪ: ರೈತ ಸಂಘ ಸದಸ್ಯರ ಆರೋಪ
Last Updated 1 ಜುಲೈ 2020, 16:23 IST
ಅಕ್ಷರ ಗಾತ್ರ

ಕೋಲಾರ: ಬೆಳೆ ಪರಿಹಾರ ವಿತರಣೆಯಲ್ಲಿನ ಲೋಪದೋಷ ಸರಿಪಡಿಸಿ ರೈತರಿಗೆ ಕೂಡಲೇ ಪರಿಹಾರ ಹಣ ಬಿಡುಗಡೆ ಮಾಡಬೇಕೆಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಬುಧವಾರ ತೋಟಗಾರಿಕೆ ಇಲಾಖೆ ಕಚೇರಿ ಎದುರು ಧರಣಿ ನಡೆಸಿ ಮನವಿ ಸಲ್ಲಿಸಿದರು.

‘ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳೆ ಪರಿಹಾರದ ಹಣ ಬಿಡುಗಡೆ ಮಾಡಲು ಮೀನಮೇಷ ಎಣಿಸುತ್ತಿದ್ದಾರೆ. ರೈತರು ಪರಿಹಾರ ಮೊತ್ತಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಿದೆ. ಅಧಿಕಾರಿಗಳಿಗೆ ರೈತರ ಸಂಕಷ್ಟದ ಅರಿವಿಲ್ಲ’ ಎಂದು ಧರಣಿನಿರತರು ಆರೋಪಿಸಿದರು.

‘ಕೋವಿಡ್‌–19 ಕಾರಣಕ್ಕೆ ಲಾಕ್‌ಡೌನ್‌ ಜಾರಿಯಾಗಿದ್ದರಿಂದ ಕೃಷಿ ಉತ್ಪನ್ನಗಳ ಬೆಲೆ ಕುಸಿದು ರೈತರು ಸಂಕಷ್ಟಕ್ಕೆ ಸಿಲುಕಿದರು. ರೈತರ ಅನುಕೂಲಕ್ಕಾಗಿ ಸರ್ಕಾರ ಬೆಳೆ ಪರಿಹಾರ ಘೋಷಿಸಿತು. ಆದರೆ, ಈವರೆಗೂ ಪರಿಹಾರದ ಹಣ ರೈತರ ಕೈ ಸೇರಿಲ್ಲ’ ಎಂದು ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.

‘ಬೆಳೆ ಪರಿಹಾರಕ್ಕಾಗಿ ರೈತರು ಸೂಕ್ತ ದಾಖಲೆಪತ್ರಗಳೊಂದಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಬೆಳೆ ಸಮೀಕ್ಷೆ ಮಾಡುವ ಅಧಿಕಾರಿಗಳು ಬೇಜವಾಬ್ದಾರಿಯಿಂದ ಬೆಳೆಗಳ ವಿವರ ತಪ್ಪಾಗಿ ನಮೂದಿಸಿದ್ದಾರೆ. ಹೂವು ಬೆಳೆದ ಜಮೀನಿನಲ್ಲಿ ರಾಗಿ ಬೆಳೆ, ತರಕಾರಿ ಬೆಳೆದ ಜಮೀನಿನಲ್ಲಿ ನೀಲಗಿರಿ ಎಂದು ನಮೂದಿಸಿದ್ದಾರೆ’ ಎಂದು ಹೇಳಿದರು.

ಕಂಗಾಲು: ‘ಬೆಳೆ ವಿವರ ತಪ್ಪಾಗಿರುವ ಕಾರಣ ರೈತರಿಗೆ ಪರಿಹಾರ ಬಂದಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಕಂಪ್ಯೂಟರ್‌ ಆಪರೇಟರ್‌ಗಳ ಲೋಪವೆಂದು ಹೇಳುತ್ತಾರೆ. ಸಾಕಷ್ಟು ಕಡೆ ಬೆಳೆ ಇಲ್ಲದ ರೈತರಿಗೆ ಪರಿಹಾರ ಬಿಡುಗಡೆ ಆಗಿದೆ. ಆದರೆ, ಅರ್ಹ ಫಲಾನುಭವಿಗಳು ಬೆಳೆ ಕಳೆದುಕೊಂಡು ಪರಿಹಾರವೂ ಸಿಗದೆ ಕಂಗಾಲಾಗಿದ್ದಾರೆ’ ಎಂದು ಧರಣಿನಿರತರು ಅಸಮಾಧಾನ ವ್ಯಕ್ತಪಡಿಸಿದರು.

‘ಬೆಳೆ ಪರಿಹಾರ ವಿತರಣೆಯಲ್ಲಿನ ಲೋಪ ಸರಿಪಡಿಸಬೇಕು. ಅರ್ಹ ಎಲ್ಲಾ ರೈತರಿಗೆ ಪರಿಹಾರ ನೀಡಬೇಕು. ತಪ್ಪಾಗಿ ಬೆಳೆ ವಿವರ ನಮೂದಿಸಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ, ಸದಸ್ಯರಾದ ತಿಮ್ಮಣ್ಣ, ವೆಂಕಟೇಶಪ್ಪ, ಕಾವ್ಯಾಂಜಲಿ, ಜಗದೀಶ್, ಸುಧಾಕರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT