ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಬೇಡಿಕೆ ಈಡೇರಿಕೆಗೆ ಒತ್ತಾಯ

ವಿವಿಧ ಗ್ರಾ.ಪಂ ಎದುರು ಕೆಪಿಆರ್‌ಎಸ್‌ ಸದಸ್ಯರ ಧರಣಿ
Last Updated 5 ಜುಲೈ 2020, 15:51 IST
ಅಕ್ಷರ ಗಾತ್ರ

ಕೋಲಾರ: ರೈತರು ಹಾಗೂ ಕೃಷಿ ಕೂಲಿಕಾರರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌) ಸದಸ್ಯರು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ಕಚೇರಿಗಳ ಎದುರು ಇತ್ತೀಚೆಗೆ ಧರಣಿ ನಡೆಸಿದರು.

‘ಕೊರೊನಾ ಸೋಂಕಿನ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ದಿನೇದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಜನರಿಗೆ ರಕ್ಷಣೆ ಇಲ್ಲವಾಗಿದೆ. ಸೋಂಕಿನಿಂದ ರಾಜ್ಯದ ಅರ್ಥ ವ್ಯವಸ್ಥೆ ಬುಡ ಮೇಲಾಗಿದೆ’ ಎಂದು ಧರಣಿನಿರತರು ದೂರಿದರು.

‘ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸ್‌ಗಳು, ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರಿಗೆ ರಕ್ಷಣೆ ಇಲ್ಲವಾಗಿದೆ. ಸೋಂಕಿನ ಪರಿಸ್ಥಿತಿ ನಿಭಾಯಿಸಲು ಸರ್ಕಾರ ಬಿಡುಗಡೆ ಮಾಡಿರುವ ಹಣ ದುರ್ಬಳಕೆ ಆಗಿದೆ’ ಎಂದು ಸಂಘಟನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್ ಆರೋಪಿಸಿದರು.

‘ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ರೈತರನ್ನು ಲೂಟಿ ಮಾಡಲು ಕಾರ್ಪೊರೇಟ್‌ ಕಂಪೆನಿಗಳಿಗೆ ಮುಕ್ತ ಅವಕಾಶ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ನವ ಉದಾರವಾದಿ ಆರ್ಥಿಕ ಧೋರಣೆಗಳನ್ನು ಆಕ್ರಮಣಕಾರಿಯಾಗಿ ಜಾರಿಗೊಳಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಕ್ಕೂಟ ತತ್ವಕ್ಕೆ ವಿರುದ್ಧ: ‘ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು ಹಾಗೂ ಇತರೆ ವರ್ಗದ ಜನರಿಗೆ ಸಾಲದ ಯೋಜನೆ ರೂಪಿಸಿಲ್ಲ. ಕೃಷಿ ಉತ್ಪನ್ನ ಮಾರಾಟ, ವಾಣಿಜ್ಯ ಹಾಗೂ ಬೆಲೆ ಖಾತರಿ, ಕೃಷಿ ಸೇವೆ ಕುರಿತ ರೈತರ ಒಪ್ಪಂದ ಸುಗ್ರೀವಾಜ್ಞೆಯನ್ನು ಸಚಿವ ಸಂಪುಟ ಅನುಮೋದಿಸಿರುವುದು ಒಕ್ಕೂಟ ತತ್ವಕ್ಕೆ ವಿರುದ್ಧವಾಗಿದೆ’ ಎಂದು ಧರಣಿನಿರತರು ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರ ಕಾರ್ಪೊರೇಟ್‌ ಕಂಪನಿಗಳು ಹಾಗೂ ಬಂಡವಾಳಶಾಹಿಗಳ ಹಿತ ಕಾಯುವುದನ್ನು ಬಿಟ್ಟು ರೈತರ ಪರವಾಗಿ ವರ್ತಿಸಬೇಕು. ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು. ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ನರೇಗಾ ಯೋಜನೆಯನ್ನು ಎಲ್ಲಾ ಗ್ರಾಮಗಳಿಗೆ ವಿಸ್ತರಿಸಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ತಾಲ್ಲೂಕು ಘಟಕದ ಗೌರವಾಧ್ಯಕ್ಷ, ಅಧ್ಯಕ್ಷ ಎನ್.ಎನ್.ಶ್ರೀರಾಮ್, ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ಸದಸ್ಯರಾದ ರಾಮರೆಡ್ಡಿ, ಗಂಗಮ್ಮ, ಶ್ರೀಧರ್, ವೆಂಕಟೇಶಪ್ಪ, ಕೃಷ್ಣೇಗೌಡ, ಶ್ರೀನಿವಾಸ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT