ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ಅಭಿವೃದ್ಧಿಗೆ ರಚನಾತ್ಮಕ ಸಲಹೆ

ನಗರಸಭೆ ಬಜೆಟ್‌ ಸಿದ್ಧತೆಗೆ ಸಭೆ: ವಿಸ್ತೃತ ಚರ್ಚೆ
Last Updated 22 ಮಾರ್ಚ್ 2021, 17:16 IST
ಅಕ್ಷರ ಗಾತ್ರ

ಕೋಲಾರ: ನಗರಸಭೆಯ 2021–22ನೇ ಸಾಲಿನ ಬಜೆಟ್‌ ಸಿದ್ಧತೆ ಸಂಬಂಧ ಇಲ್ಲಿ ಸೋಮವಾರ ನಡೆದ ಸಭೆಯಲ್ಲಿ ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಹಾಗೂ ನಗರಸಭಾ ಸದಸ್ಯರು ರಚನಾತ್ಮಕ ಸಲಹೆ ಸೂಚನೆ ನೀಡಿದರು.

ನಗರಸಭೆ ಆಸ್ತಿಗಳ ರಕ್ಷಣೆ, ತೆರಿಗೆ ಸಂಗ್ರಹಣೆ, ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನ, ಖರ್ಚು ವೆಚ್ಚ, ಮೂಲಸೌಕರ್ಯ, ಪೌರ ಕಾರ್ಮಿಕರ ಕಲ್ಯಾಣ, ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಹೊಂದಿಸುವ ಸಂಬಂಧ 3 ತಾಸಿಗೂ ಹೆಚ್ಚು ಕಾಲ ವಿಸ್ತೃತ ಚರ್ಚೆ ನಡೆಯಿತು.

ಪಕ್ಷಬೇಧ ಮರೆತು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ನಗರಸಭಾ ಸದಸ್ಯರು ನಗರದ ಅಭಿವೃದ್ಧಿಗೆ ತಮ್ಮ ಕನಸಿನ ಯೋಜನೆಗಳನ್ನು ಮುಂದಿಟ್ಟರು. ಹಳೇ ಬಸ್‌ ನಿಲ್ದಾಣದಲ್ಲಿ ಬೃಹತ್‌ ವಾಣಿಜ್ಯ ಸಮುಚ್ಚಯ ನಿರ್ಮಾಣ, ಎಲ್ಲಾ ವಾರ್ಡ್‌ಗಳಲ್ಲಿ ಉದ್ಯಾನಗಳ ಸ್ಥಾಪನೆ, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಅನುದಾನ ಮೀಸಲಿಡುವಂತೆ ಸದಸ್ಯರು ಒಕ್ಕೂರಲಿನಿಂದ ಒತ್ತಾಯಿಸಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ನಂಬಿ ನಗರದ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ನಗರದ ಅಭಿವೃದ್ಧಿಗೆ ತೆರಿಗೆ ಸಂಗ್ರಹಣೆ ಮುಖ್ಯ. ಆದರೆ, ತೆರಿಗೆ ಸಂಗ್ರಹಣೆ ಹೆಚ್ಚಳಕ್ಕೆ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ತೆರಿಗೆ ಸಂಗ್ರಹದ ವಿಚಾರದಲ್ಲಿ ರಾಜಿ ಬೇಡ. ರಾಜಕೀಯ ಬಿಟ್ಟು ಸಮರ್ಪಕವಾಗಿ ತೆರಿಗೆ ವಸೂಲಿ ಮಾಡಿದರೆ ಮಾತ್ರ ನಗರವಾಸಿಗಳ ನಿರೀಕ್ಷೆಯಂತೆ ನಗರವನ್ನು ಅಭಿವೃದ್ಧಿಪಡಿಸಬಹುದು’ ಎಂದು ಸದಸ್ಯ ಎಸ್‌.ಆರ್‌.ಮುರಳಿಗೌಡ ಸಲಹೆ ನೀಡಿದರು.

‘ಆದಾಯ ಹೆಚ್ಚಿಸಲು ತೆರಿಗೆ ವಸೂಲಿ ಗುರಿ ಸಾಧನೆ ಮಾಡಬೇಕು. ನಿವಾಸಿಗಳಿಗೆ ಆಸ್ತಿ ಖಾತೆ, ಇ–ಖಾತೆ ದಾಖಲೆ ಮಾಡಿಕೊಡದಿರುವುದರಿಂದ ತೆರಿಗೆ ವಸೂಲಿ ಕುಂಠಿತಗೊಂಡಿದೆ. ಅರಣ್ಯ ಇಲಾಖೆ ಸಹಯೋಗದೊಂದಿಗೆ ನಗರದಲ್ಲಿ ಹಸಿರೀಕರಣಕ್ಕೆ ಬಜೆಟ್‌ನಲ್ಲಿ ಒತ್ತು ಕೊಡಬೇಕು’ ಎಂದರು.

ವಸತಿ ಸೌಕರ್ಯ: ‘ಬಜೆಟ್‌ ಕೇವಲ ಖರ್ಚು ವೆಚ್ಚಕ್ಕೆ ಸೀಮಿತವಾಗಬಾರದು. ಬಜೆಟ್‌ನಲ್ಲಿ ಪ್ರಸ್ತಾಪಿಸಿದ ಯೋಜನೆಗಳು ಕಾರ್ಯಗತಗೊಳ್ಳಬೇಕು. ನಗರದಲ್ಲಿ ಸುಸಜ್ಜಿತ ಆಸ್ಪತ್ರೆ ತೆರೆಯಬೇಕು. ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ನಿಧಿಯಿಂದ ನಗರದ ಅಭಿವೃದ್ಧಿಗೆ ಅನುದಾನ ಪಡೆಯಬೇಕು. ಕೊಳೆಗೇರಿಗಳನ್ನು ಅಭಿವೃದ್ಧಿಪಡಿಸಿ ಅಲ್ಲಿನ ನಿವಾಸಿಗಳಿಗೆ ವಸತಿ ಸೌಕರ್ಯ ಕಲ್ಪಿಸಬೇಕು’ ಎಂದು ಸದಸ್ಯ ಬಿ.ಎಂ.ಮುಬಾರಕ್‌ ಹೇಳಿದರು.

‘ನಗರದಲ್ಲಿ ಅರಣ್ಯೀಕರಣಕ್ಕೆ ₹ 20 ಲಕ್ಷ ಮೀಸಲಿಡಬೇಕು. ಅಂಗವಿಕಲರ ಸ್ವಉದ್ಯೋಗಕ್ಕೆ ಒತ್ತು ಕೊಡಬೇಕು. ಸ್ಥಳೀಯ ಜನಪರ ಕಲಾವಿದರನ್ನು ಉತ್ತೇಜಿಸಲು ಅನುದಾನ ಕೊಡಬೇಕು. ಭೂಭರ್ತಿ ಘಟಕ ಮತ್ತು ಕಸಾಯಿಖಾನೆ ಕಡ್ಡಾಯವಾಗಿ ಸ್ಥಾಪನೆ ಆಗಬೇಕು. ನಿವೃತ್ತ ಪೌರ ಕಾರ್ಮಿಕರಿಗೆ ₹ 5 ಲಕ್ಷ ಹಣಕಾಸು ನೆರವು ನೀಡಬೇಕು. ಪರಿಶಿಷ್ಟರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಬೇಕು’ ಎಂದು ಮನವಿ ಮಾಡಿದರು.

ಸೂರು ಕಲ್ಪಿಸಿ: ‘ಬಡತನ ರೇಖೆಗಿಂತ ಕೆಳಗಿರುವ ನಿವೇಶನರಹಿತ ಮತ್ತು ವಸತಿರಹಿತ ಕುಟುಂಬಗಳಿಗೆ ಸೂರು ಕಲ್ಪಿಸಬೇಕು. ಈ ನಿಟ್ಟಿನಲ್ಲಿ ನಿವೇಶನಕ್ಕೆ ನಗರದ ಅಕ್ಕಪಕ್ಕ ಜಮೀನು ಗುರುತಿಸಬೇಕು. ಮಾಜಿ ಮತ್ತು ಹುತಾತ್ಮ ಸೈನಿಕರ ಕುಟುಂಬಗಳಿಗೆ ತೆರಿಗೆ ವಿನಾಯಿತಿ ನೀಡಬೇಕು. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಶೇ 1ರಷ್ಟು ಅನುದಾನ ಮೀಸಲಿಡಬೇಕು’ ಎಂದು ಸದಸ್ಯ ಅಂಬರೀಶ್‌ ಒತ್ತಾಯಿಸಿದರು.

ಪಿಪಿಪಿ ಮಾದರಿ: ‘ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಹಳೇ ಬಸ್‌ ನಿಲ್ದಾಣದಲ್ಲಿ ಬೃಹತ್‌ ವಾಣಿಜ್ಯ ಸಮುಚ್ಚಯ ನಿರ್ಮಿಸಬೇಕು. ಸಮುಚ್ಚಯದಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಬೇಕು. ಚಿಕ್ಕಬಳ್ಳಾಪುರ ರಸ್ತೆಯ ಇಕ್ಕೆಲದಲ್ಲಿ ನಡಿಗೆ ಪಥ ನಿರ್ಮಾಣ ಮಾಡಬೇಕು’ ಎಂದು ಸದಸ್ಯ ಅಫ್ಜರ್‌ ಪಾಷಾ ಹೇಳಿದರು.

‘ವಾಣಿಜ್ಯ ಉದ್ದೇಶದ ನಲ್ಲಿ ಸಂಪರ್ಕಕ್ಕೆ ಮೀಟರ್‌ ಅಳವಡಿಸಿ ನೀರಿನ ಶುಲ್ಕ ಸಂಗ್ರಹಿಸಿದರೆ ನಗರಸಭೆಗೆ ಹೆಚ್ಚಿನ ತೆರಿಗೆ ಬರುತ್ತದೆ’ ಎಂದು ನಗರಸಭೆ ಮಾಜಿ ಸದಸ್ಯ ತ್ಯಾಗರಾಜ್‌ ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷೆ ಶ್ವೇತಾ, ಉಪಾಧ್ಯಕ್ಷ ಪ್ರವೀಣ್‌ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಮಂಜುನಾಥ್‌, ಸದಸ್ಯರು, ಆಯುಕ್ತ ಶ್ರೀಕಾಂತ್‌, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT