ಮಂಗಳವಾರ, ಡಿಸೆಂಬರ್ 10, 2019
21 °C
1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಂತೋಷ್ ಗಜಾನನಭಟ್‌ ಕಿವಿಮಾತು

ವಕೀಲ ವೃತ್ತಿಯಲ್ಲಿ ಅಧ್ಯಯನಶೀಲತೆ ಮುಖ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ವಕೀಲರು ವೃತ್ತಿ ಘನತೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದರ ಜತೆಗೆ ನಿರಂತರ ಅಧ್ಯಯನಶೀಲರಾಗಬೇಕು’ ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಂತೋಷ್ ಗಜಾನನಭಟ್‌ ಕಿವಿಮಾತು ಹೇಳಿದರು.

ಜಿಲ್ಲಾ ವಕೀಲರ ಸಂಘವು ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆಯಲ್ಲಿ ಮಾತನಾಡಿ, ‘ಕಕ್ಷಿದಾರರ ಹಿತ ರಕ್ಷಣೆ ಮಾಡುವುದು ವಕೀಲರ ಜವಾಬ್ದಾರಿ. ವಕೀಲ ವೃತ್ತಿಯಲ್ಲಿ ಅಧ್ಯಯನಶೀಲತೆ ಬಹಳ ಮುಖ್ಯ’ ಎಂದು ತಿಳಿಸಿದರು.

‘ಹೊಸ ಕಾನೂನು ಹಾಗೂ ನ್ಯಾಯಾಲಯಗಳ ತೀರ್ಪು ಕುರಿತು ಅಧ್ಯಯನ ಮಾಡುವುದರಿಂದ ಉತ್ತಮ ವಕೀಲರಾಗಿ ಹೊರಹೊಮ್ಮಬಹುದು. ಅನೇಕರು ವಕೀಲರಾಗಿಯೇ ನಂತರ ನ್ಯಾಯಾಧೀಶರಾಗುತ್ತಾರೆ. ಉತ್ತಮ ವಕೀಲರು ಉತ್ತಮ ನ್ಯಾಯಾಧೀಶರಾಗಲು ಸಾಧ್ಯ. ಕಾನೂನು ಕುರಿತು ಹೆಚ್ಚು ಅರಿತಾಗ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಬಹುದು’ ಎಂದು ಸಲಹೆ ನೀಡಿದರು.

‘ಹಿರಿಯ ವಕೀಲರ ಮಾರ್ಗದರ್ಶನದಿಂದ ಕಿರಿಯ ವಕೀಲರು ವೃತ್ತಿ ನೈಪುಣ್ಯತೆ ಸಾಧಿಸಬೇಕು. ಪ್ರಕರಣಗಳ ಶೀಘ್ರ ವಿಲೇವಾರಿಗೆ ಸಹಕರಿಸಬೇಕು. ವಿನಾಕಾರಣ ಪ್ರಕರಣ ಮುಂದೂಡಿಕೊಂಡು ಹೋಗುವುದು ಸರಿಯಲ್ಲ’ ಎಂದರು.

ಸಕ್ರಿಯವಾಗಿ ಪಾಲ್ಗೊಳ್ಳಿ: ‘ಕಿರಿಯ ವಕೀಲರು ಹಿರಿಯ ವಕೀಲರಿಗೆ ಗೌರವ ನೀಡುವುದರ ಜತೆಗೆ ನ್ಯಾಯಾಲಯದ ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ವಕೀಲರು ನ್ಯಾಯಾಲಯದಲ್ಲಿ ನಡೆಯುವ ಲೋಕ ಅದಾಲತ್‌ನಲ್ಲಿ ಪಾಲ್ಗೊಂಡು ರಾಜಿಸಂಧಾನ ಮಾಡುತ್ತಿದ್ದಾರೆ. ಇದಕ್ಕೆ ಸಂಘದಿಂದ ಹೆಚ್ಚಿನ ಸಹಕಾರ ನೀಡುತ್ತೇವೆ’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಯರಾಮ್ ಹೇಳಿದರು.

‘ಹಲವರು ವಕೀಲರ ಸ್ಥಾನದಿಂದಲೇ ನ್ಯಾಯಾಧೀಶರಾಗಿದ್ದಾರೆ. ವಿಳಂಬ ಮಾಡುವುದರಿಂದ ಕಕ್ಷಿದಾರರು ವಕೀಲರ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಾರೆ. ವಕೀಲರು ಕಲಾಪದ ವೇಳೆ ತಪ್ಪಿಸಿಕೊಂಡರೆ ನ್ಯಾಯಾಧೀಶರು ಆಕ್ಷೇಪ ವ್ಯಕ್ತಪಡಿಸುವುದು ಸಹಜ’ ಎಂದು ಅಭಿಪ್ರಾಯಪಟ್ಟರು.

ಉತ್ತಮ ಬೆಳವಣಿಗೆ: ‘ವಕೀಲರಲ್ಲೂ ಸಾಹಿತ್ಯಾಭಿರುಚಿ ಇರುವುದು ಉತ್ತಮ ಬೆಳವಣಿಗೆ. ವಕೀಲರು ಸಮಾಜಕ್ಕೆ ಉತ್ತಮ ಸಾಹಿತ್ಯ ನೀಡಬೇಕು. ಕಕ್ಷಿದಾರರ ಹಿತ ಕಾಯುವ ಒತ್ತಡದ ನಡುವೆಯೂ ಕನ್ನಡ ಭಾಷಾ ಪ್ರೇಮವನ್ನು ಸಾಹಿತ್ಯ ರಚನೆ ಮೂಲಕ ತೋರ್ಪಡಿಸಿರುವುದು ಶ್ಲಾಘನೀಯ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು.

‘ವಕೀಲರ ಸಮಸ್ಯೆಗಳು ಮತ್ತು ಅದಕ್ಕೆ ಪರಿಹಾರೋಪಾಯ’ ಕುರಿತು ಸಂವಾದ ನಡೆಯಿತು. ವಕೀಲ ಬಿ.ಆರ್.ರವಿಂದ್ರ ಅವರ ‘ಅಂತಃಪುರ ಗೀತೆ’ ಪುಸ್ತಕ ಬಿಡುಗಡೆ ಮಾಡಲಾಯಿತು.ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಂ.ಡಿ.ಶ್ರೀನಿವಾಸ್, ನ್ಯಾಯಾಧೀಶರಾದ ಕೃಷ್ಣ ತಾರಿಮಣಿ, ಬಿ.ಎಸ್.ರೇಖಾ, ವಕೀಲರಾದ ಕೆ.ಆರ್.ಶ್ರೀನಿವಾಸಯ್ಯ, ಬಿಸಪ್ಪಗೌಡ, ಟಿ.ಜಿ.ಮನ್ಮಥರೆಡ್ಡಿ, ಸಾ.ಮಾ.ರಂಗಪ್ಪ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)