ಶನಿವಾರ, ಮೇ 28, 2022
31 °C
ನೇತಾಜಿ ಜಯಂತಿ ಆಚರಣೆ

ಸೇನೆಗೆ ಸುಭಾಷ್‌ಚಂದ್ರ ಬೋಸ್‌ ಬುನಾದಿ: ಜನಾರ್ದನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಭಾರತ ದೇಶವು ಜಾಗತಿಕವಾಗಿ ಬಲಿಷ್ಠ ಸೇನಾ ಬಲ ಹೊಂದಲು ಸುಭಾಷ್‌ಚಂದ್ರ ಬೋಸ್ ಸ್ವಾತಂತ್ರ್ಯ ಪೂರ್ವದಲ್ಲೇ ಬುನಾದಿ ಹಾಕಿದ್ದರು’ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜನಾರ್ದನ್‌ ಹೇಳಿದರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುಭಾಷ್‌ಚಂದ್ರ ಬೋಸ್ ಜಯಂತಿಯಲ್ಲಿ ಮಾತನಾಡಿ, ‘ಸುಭಾಷ್‌ಚಂದ್ರ ಬೋಸ್‌ ಭಾರತ ದೇಶವು ಬಲಿಷ್ಠ ಸೇನೆ ಹೊಂದಬೇಕೆಂದು ಕನಸ್ಸು ಕಂಡಿದ್ದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಲಕ್ಷಾಂತರ ಯೋಧರು ಸಜ್ಜಾಗಿದ್ದಾರೆ. ಸಮಾಜವು ಯೋಧರ ಸೇವೆ ಗೌರವಿಸುತ್ತಿರುವುದು ಸ್ವಾಗತಾರ್ಹ’ ಎಂದರು.

‘ಸ್ವಾತಂತ್ರ್ಯಕ್ಕೆ ಬಲಿದಾನ ಬೇಕು. ತಾವು ತನಗೆ ರಕ್ತ ಕೊಡಿ. ತಾನು ಸ್ವಾತಂತ್ರ್ಯ ಕೊಡಿಸುತ್ತೇನೆ ಎಂದು ಹೇಳಿದ್ದ ಸುಭಾಷ್‌ಚಂದ್ರ ಬೋಸ್ ಅವರ ದಾರಿಯಲ್ಲಿ ಯುವ ಪೀಳಿಗೆ ಸಾಗಬೇಕು. ಸುಭಾಷ್‌ಚಂದ್ರ ಬೋಸ್‌ ದೇಶಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಕ್ರಿಯಾಶೀಲ ಸೇನಾನಿ. ಅವರ ಆದರ್ಶ ಪಾಲಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಸುಭಾಷ್‌ಚಂದ್ರ ಬೋಸ್‌ ಅವರು ಜಗತ್ತಿನ 2ನೇ ಮಹಾಯುದ್ಧದಲ್ಲಿ ಆಜಾದ್ ಹಿಂದ್ ಫೌದ್ ಸಂಘಟನೆ ಸ್ಥಾಪಿಸಿ ಯುವಕರಲ್ಲಿ ಶೌರ್ಯ ಮತ್ತು ಧೈರ್ಯ ತುಂಬಿದ ಹೋರಾಟಗಾರ. ಅತಹ ಹೋರಾಟಗಾರ ಜೀವನ ಚರಿತ್ರೆಯನ್ನು ವಿದ್ಯಾರ್ಥಿಗಳು ತಿಳಿಯಬೇಕು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿ ಗಣೇಶ್ ಹೇಳಿದರು.

ಪುಸ್ತಕ ಸ್ಫೂರ್ತಿ: ‘ದೇಶಾಭಿಮಾನ ಮತ್ತು ಕ್ರಿಯಾಶೀಲತೆಯ ಪ್ರತೀಕವಾದ ಸುಭಾಷ್‌ಚಂದ್ರ ಬೋಸ್‌ರ ಬದುಕು ಯುವಕರಿಗೆ ಆದರ್ಶವಾಗಬೇಕು. ಅವರು ಬರೆದ ಭಾರತ ಸ್ವಾತಂತ್ರ್ಯ ಸಂಗ್ರಾಮ ಪುಸ್ತಕವು ಇಂದಿಗೂ ಸ್ಫೂರ್ತಿಯಾಗಿದೆ’ ಎಂದು ವಕೀಲ ಸತೀಶ್ ಅಭಿಪ್ರಾಯಪಟ್ಟರು.

‘ದೇಶದ ಉಳಿವಿಗೆ ಯುವ ಪೀಳಿಗೆ ದೇಶಾಭಿಮಾನ ಬೆಳೆಸಿಕೊಳ್ಳಬೇಕು. ದೇಶದ ಸ್ವಾತಂತ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ ಸ್ಮರಿಸಿ ಗೌರವ ಸಲ್ಲಿಸಬೇಕು. ದೇಶದ ರಕ್ಷಣೆಗೆ ಯುವಕರು ಸೈನಿಕರಾಗಲು ಇಚ್ಛಿಸಬೇಕು’ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಪಿ.ನಾರಾಯಣಪ್ಪ ಸಲಹೆ ನೀಡಿದರು.

ಮಾನವ ಹಕ್ಕುಗಳ ಜಾಗೃತಿ ಮತ್ತು ನಿರ್ಮೂಲನಾ ಸಂಸ್ಥೆ ಅಧ್ಯಕ್ಷ ಶಿವಕುಮಾರ್‌ಗೌಡ, ಎಇಎಸ್ ಪಬ್ಲಿಕ್ ಶಾಲೆ ಅಧ್ಯಕ್ಷ ಫಲ್ಗುಣ, ಮುಖಂಡರಾದ ರಮೇಶ್‌ಬಾಬು, ನಾರಾಯಣಸ್ವಾಮಿ, ರಾಮಚಂದ್ರ, ಟಿ.ಸುಬ್ಬರಾಮಯ್ಯ, ಕವಿ ಶರಣಪ್ಪ ಗಬ್ಬೂರು ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು