ಸಾವಯವ ಕೃಷಿ ಉತ್ತೇಜನಕ್ಕೆ ಸಹಾಯಧನ

ಶುಕ್ರವಾರ, ಮಾರ್ಚ್ 22, 2019
27 °C
ರೈತರ ಜತೆಗಿನ ಸಭೆಯಲ್ಲಿ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಗಜೇಂದ್ರಸಿಂಗ್ ಹೇಳಿಕೆ

ಸಾವಯವ ಕೃಷಿ ಉತ್ತೇಜನಕ್ಕೆ ಸಹಾಯಧನ

Published:
Updated:
Prajavani

ಕೋಲಾರ: ‘ಕೇಂದ್ರ ಸರ್ಕಾರ ಸಾವಯವ ಕೃಷಿ ಉತ್ತೇಜಿಸುವ ನಿಟ್ಟಿನಲ್ಲಿ ಎಕರೆಗೆ ₹ 50 ಸಾವಿರ ಸಹಾಯಧನ ನೀಡುತ್ತಿದ್ದು ರೈತರು ಇದರ ಸದುಪಯೋಗಕ್ಕೆ ಪಡೆಯಬೇಕು’ ಎಂದು ಕೇಂದ್ರ ಸರ್ಕಾರದ ಕೃಷಿ ಖಾತೆ ರಾಜ್ಯ ಸಚಿವ ಗಜೇಂದ್ರಸಿಂಗ್ ಶೆಕಾವತ್ ಸಲಹೆ ನೀಡಿದರು.

ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಶುಕ್ರವಾರ ರೈತರು ಹಾಗೂ ಮಂಡಿ ಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ‘ಯಾವುದೇ ರೈತ ಸಾವಯವ ಕೃಷಿಯಲ್ಲಿ ವ್ಯವಸಾಯ ಮಾಡಿ ನಿರೀಕ್ಷಿತ ಫಸಲು ಬಾರದಿದ್ದರೆ ಯಾವುದೇ ಕಾನೂನು ಪಾಲಿಸದೆ ಆ ರೈತನ ಬ್ಯಾಂಕ್ ಖಾತೆಗೆ ₹ 50 ಸಾವಿರ ಸಹಾಯಧನ ಜಮಾ ಮಾಡಲಾಗುತ್ತದೆ’ ಎಂದು ಹೇಳಿದರು.

‘ರೈತ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿ ಅಥವಾ ಇತರ ಕಾರಣಕ್ಕೆ ಮರಣ ಹೊಂದಿದರೆ ₹ 10 ಲಕ್ಷ ವಿಮಾ ಸೌಲಭ್ಯವಿದ್ದು, ಇದಕ್ಕೆ ರೈತ ನಯಾ ಪೈಸೆ ಪಾವತಿಸಬೇಕಿಲ್ಲ. ಕೋಲಾರ ಜಿಲ್ಲೆಯಿಂದ ಈವರೆಗೆ ಒಬ್ಬ ರೈತ ಮಾತ್ರ ಈ ಯೋಜನೆಗೆ ಹೆಸರು ನೋಂದಣಿ ಮಾಡಿಸಿದ್ದಾರೆ. ಎಪಿಎಂಸಿಗೆ ಕೃಷಿ ಉತ್ಪನ್ನ ತರುವ ಎಲ್ಲಾ ರೈತರ ಹೆಸರನ್ನು ವಿಮಾ ಸೌಲಭ್ಯಕ್ಕೆ ಉಚಿತವಾಗಿ ನೋಂದಣಿ ಮಾಡಿಸಿ’ ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ಮಾರುಕಟ್ಟೆ ಸ್ಥಳಾಂತರ: ‘ಏಪ್ರಿಲ್‌ ತಿಂಗಳಲ್ಲಿ ಟೊಮೆಟೊ ಆವಕ ಹೆಚ್ಚುವುದರಿಂದ ಮಾರುಕಟ್ಟೆಯಲ್ಲಿ ಸ್ಥಳಾವಕಾಶ ಸಮಸ್ಯೆ ಎದುರಾಗುವುದನ್ನು ತಪ್ಪಿಸಲು ತಾತ್ಕಾಲಿಕವಾಗಿ ಮಾರುಕಟ್ಟೆ ಸಹಕಾರ ಮಂಡಳಿ ಜಾಗ ಬಳಸಿಕೊಳ್ಳಲು ಅನುಮತಿ ಪಡೆಯಲಾಗಿದೆ. ಮಾರುಕಟ್ಟೆಯನ್ನು ಸದ್ಯದಲ್ಲೇ ಬೇರೆಡೆಗೆ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಎಪಿಎಂಸಿ ಸಹಾಯಕ ನಿರ್ದೇಶಕ ಟಿ.ಎಸ್.ರವಿಕುಮಾರ್ ವಿವರಿಸಿದರು.

‘ಮಾರುಕಟ್ಟೆಯಲ್ಲಿ ಹಿಂದಿನ ವರ್ಷ ₹ 3.28 ಕೋಟಿ ಸಂಕು ವಸೂಲಿ ಮಾಡಲಾಗಿದ್ದು, ಇದರಲ್ಲಿ ₹ 1.24 ಕೋಟಿ ಖರ್ಚಾಗಿದೆ. ಸುಮಾರು ₹ 2 ಕೋಟಿ ಲಾಭ ಬಂದಿದೆ’ ಎಂದು ಮಾಹಿತಿ ನೀಡಿದರು.

ಸಂಸ್ಕರಣಾ ಘಟಕ: ‘ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಟೊಮೆಟೊ ಮತ್ತು ಮಾವಿನ ಹಣ್ಣನ್ನು ಸಂಸ್ಕರಣೆ ಮಾಡಿ ಪಲ್ಪ್‌ ತಯಾರು ಮಾಡಿದರೆ ಕನಿಷ್ಠ 2 ವರ್ಷ ಸಂಗ್ರಹಿಸಬಹುದು. ಈ ದಿಸೆಯಲ್ಲಿ ಜಿಲ್ಲೆಯಲ್ಲಿ ಸಂಸ್ಕರಣಾ ಘಟಕ ಸ್ಥಾಪಿಸಲು ಮುಂದಾದರೆ ಕೇಂದ್ರದಿಂದ ಶೇ 90ರಷ್ಟು ಸಹಾಯಧನ ಮಂಜೂರು ಮಾಡುತ್ತೇವೆ’ ಎಂದು ಭರವಸೆ ನೀಡಿದರು.

‘ರಾಜಸ್ತಾನದಲ್ಲಿ 100 ಎಕರೆಯಲ್ಲಿ ಬಾಳೆ ತೋಟ ಮಾಡಿ ಮಾರುಕಟ್ಟೆ ಸೌಲಭ್ಯವಿಲ್ಲದೆ ನಷ್ಟ ಉಂಟಾದಾಗ ಸಂಸ್ಕರಣಾ ಘಟಕ ಸ್ಥಾಪಿಸಿ ಪಲ್ಪ್ ತಯಾರು ಮಾಡಿ ಇಂಗ್ಲೆಂಡ್‌ಗೆ ರಫ್ತು ಮಾಡಿದೆ. ಆಗ ಲಾಭ ದೊರೆಯಿತು. ಅದೇ ಸ್ಫೂರ್ತಿಯಲ್ಲಿ ಒಂದು ಸಾವಿರ ಹೆಕ್ಟೇರ್ ಬಾಳೆ ತೋಟ ಮಾಡಲಾಗಿದ್ದು, ಪ್ರಗತಿಪರ ರೈತನ ಪಟ್ಟ ಲಭಿಸಿದೆ’ ಎಂದು ಸಚಿವರು ತಮ್ಮ ಕೃಷಿ ಅನುಭವ ಹಂಚಿಕೊಂಡರು.

ಎಪಿಎಂಸಿ ನಿರ್ದೇಶಕರಾದ ದೇವರಾಜ್, ಅಪ್ಪಯ್ಯಪ್ಪ, ವೆಂಕಟೇಶಪ್ಪ, ಸಹಾಯಕ ಕಾರ್ಯದರ್ಶಿ ವಿಶ್ವನಾಥ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !